ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಕಿಲಾರಿಪೇಟೆಯ ಶ್ರೀ ರುಕ್ಮಿಣಿ, ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನಡೆಸಿದ್ದು, ಶನಿವಾರ ಸ್ವಾಮಿಯ ಕಲ್ಯಾಣೋತ್ಸವವನ್ನು ಇಲ್ಲಿನ ಸಮಾಜಸೇವಕ ಮುಕ್ಕಡ್ ವೆಂಕಟೇಶ್ ಕುಟುಂಬದವರು ಅತ್ಯಂತ ವೈಭವದಿಂದ ನಡೆಸಿಕೊಟ್ಟರು.ಗೋಪಾಲಕರ ತವರು ಎಂದೇ ಖ್ಯಾತವಾಗಿರುವ ಕೋಲಾರದ ಕಿಲಾರಿಪೇಟೆಯಲ್ಲಿ ಸಾಂಪ್ರದಾಯಿಕವಾಗಿ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನಡೆದಿದ್ದು, ಸಮಾಜಸೇವಕ ಮುಕ್ಕಡ್ ವೆಂಕಟೇಶ್- ಚೆಲುವಮ್ಮ, ಕಿಶೋರ್- ಶಿವರಂಜನಿ, ಮುರಳಿಕೃಷ್ಣ-ತಿಲಕವತಿ, ಸುದರ್ಶನ್ ಕೃಷ್ಣ, ಜಟಾಯು ನಾಗರಾಜ್ ಪುತ್ರ ಶ್ರೀನಿವಾಸ್ ದಂಪತಿ ಕಲ್ಯಾಣೋತ್ಸವ ನಡೆಸಿಕೊಟ್ಟಿದ್ದು, ಪೂಜಾ ಕಾರ್ಯಕ್ರಮಗಳು ಮತ್ತು ಅನ್ನದಾಸೋಹದ ನೇತೃತ್ವ ವಹಿಸಿದ್ದರು.
ಮುಂಜಾನೆಯಿಂದಲೇ ಸ್ವಾಮಿಗೆ ಅಭಿಷೇಕ, ಇಡೀ ದೇವಾಲಯಕ್ಕೆ ಪುಷ್ಪಾಲಂಕಾರ ಮಾಡಿದ್ದು, ಭಾರೀ ಪ್ರಮಾಣದಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು,ಸ್ವಾಮಿಗೆ ಅಲಂಕಾರ ಮುಗಿಯುತ್ತಿದ್ದಂತೆ ನಗರದ ವಿವಿಧ ಬಡಾವಣೆಗಳ ನೂರಾರು ಮಂದಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದು, ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.
ಶ್ರದ್ಧಾಭಕ್ತಿಯ ಪೂಜೆ, ವಿಶೇಷ ಅಲಂಕಾರ:ಮೂರು ದಿನಗಳಿಂದ ಮುತ್ತೈದೆಯರಿಗೆ ಬಳೆ ತೊಡಿಸುವುದು, ದೀಪೋತ್ಸವ ಸೇವೆ ಸೇರಿದಂತೆ ವಿವಿಧ ಪೂಜಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬಂದಿರುವ ಕಿಲಾರಿಪೇಟೆ ಭಕ್ತಾದಿಗಳು, ಶನಿವಾರ ದೇವಾಲಯದ ಆವರಣದಲ್ಲಿ ಕಲ್ಯಾಣೋತ್ಸವವನ್ನು ನಡೆಸಿದರು.
ನಗರಸಭೆ ಮಾಜಿ ಸದಸ್ಯ ಹಾಗೂ ಸಮಾಜಸೇವಕ ಮುಕ್ಕಡ್ ವೆಂಕಟೇಶ್ ಅವರ ಕುಟುಂಬದವರು, ಮಧ್ಯಾಹ್ನ ದೇವಾಲಯದ ಹೊರಭಾಗದಲ್ಲಿ ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮಂಗಳವಾದ್ಯ, ಮೇಳದೊಂದಿಗೆ ಕಲ್ಯಾಣೋತ್ಸವ ನೆರವೇರಿಸಿದರು.ಶ್ರೀರುಕ್ಮಿಣಿ, ಸತ್ಯಭಾಮ, ಶ್ರೀವೇಣುಗೋಪಾಲಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಕಲ್ಯಾಣೋತ್ಸವದ ನಂತರ ನೆರೆದಿದ್ದ ನೂರಾರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವೂ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ ಮೇಸ್ತ್ರಿ ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡ ಜಯದೇವ್, ಪತ್ರಕರ್ತ ಕೆ.ಎಸ್.ಗಣೇಶ್, ಮುಖಂಡರಾದ ಚೌಡಪ್ಪ, ಮುನಿಸ್ವಾಮಪ್ಪ, ಪುರುಷೋತ್ತಮ್, ಮುನಿವೆಂಕಟಸ್ವಾಮಿ, ವಿಶ್ವನಾಥ್, ರಾಮದಾಸ್,ಮಣಿ, ಮುನಿವೆಂಕಟ ಯಾದವ್, ಅಡಕೆ ನಾರಾಯಣಸ್ವಾಮಿ, ಉಪ್ಪಾರಪೇಟೆ ಮುನಿರಾಜಪ್ಪ, ಅಶ್ವತ್ಥಪ್ಪ, ಕೆ.ಎನ್.ವೆಂಕಟೇಶ್, ಕೆ.ಎಂ.ಮಂಜು, ರಮೇಶ್, ಶಬರಿ, ಪ್ರಭಾಕರ್, ಪೆನುಗೊಂಡ ಕೃಷ್ಣ, ಕೆ.ಜೆ.ಬಾಬು, ಲಕ್ಷ್ಮಣ್, ಕೃಷ್ಣಮೂರ್ತಿ, ದೊಡ್ಡವೀರಪ್ಪ, ಚಲಪತಿ, ಪ್ರೆಸ್ ಅನಂತರಾಮ್ ಸೇರಿದಂತೆ ಕಿಲಾರಿಪೇಟೆಯ ಯಾದವ ಜನಾಂಗದವರು, ಕೋಲಾರ ನಗರದ ಪ್ರಮುಖರು ಪಾಲ್ಗೊಂಡಿದ್ದರು.