ಸಾರಾಂಶ
ಈ ಬಾರಿಯ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ಹನುಮಂತೋತ್ಸವಕ್ಕೆ ಕಳೆದ 29 ವರ್ಷಗಳಿಂದ ಪಟ್ಟಣ ಸೇರಿದಂತೆ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಎಲ್ಲ ಸಂಘಸಂಸ್ಥೆಗಳ ಸಹಕಾರವನ್ನು ಸ್ಮರಿಸಿ.
ಕನ್ನಡಪ್ರಭ ವಾರ್ತೆ ಹುಣಸೂರು
ಡಿಸೆಂಬರ್‌ನಲ್ಲಿ ಆಯೋಜನೆಗೊಂಡಿರುವ 30ನೇ ವರ್ಷದ ಹನುಮ ಜಯಂತಿ ಮತ್ತು ಶೋಭಾಯಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಉತ್ಸವ ಆಚರಣೆ ಸಮಿತಿ ಅಧ್ಯಕ್ಷ ವೆಂಕಟರಮಣ ದಾಸ್ ಹೇಳಿದರು.ಪಟ್ಟಣದ ಕರೀಗೌಡರ ಬೀದಿಯ ಶ್ರೀ ರಾಮಮಂದಿರದಲ್ಲಿ ಹನುಮಂತೋತ್ಸವ ಸಮಿತಿ ಮತ್ತು ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಾರಿಯ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ಹನುಮಂತೋತ್ಸವಕ್ಕೆ ಕಳೆದ 29 ವರ್ಷಗಳಿಂದ ಪಟ್ಟಣ ಸೇರಿದಂತೆ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಎಲ್ಲ ಸಂಘಸಂಸ್ಥೆಗಳ ಸಹಕಾರವನ್ನು ಸ್ಮರಿಸಿ. ಈ ಬಾರಿ 30ನೇ ವರ್ಷದ ಹನುಮಂತೋತ್ಸವವು ಡಿ. 12 ರಿಂದ 15ರವರೆಗೆ ನಡೆಯಲಿದೆ. ಈಗಾಗಲೆ ತಾಲೂಕು ಆಡಳಿತಕ್ಕೆ ಉತ್ಸವ ನಡೆಸುವ ಬಗ್ಗೆ ಹಾಗೂ ಡಿ. 15ರಂದು ಹನುಮ ಶೋಭಾಯಾತ್ರೆ ಮೆರವಣಿಗೆ ಮಾರ್ಗದ ಕುರಿತು ಮನವಿ ಮಾಡಿಕೊಳ್ಳಲಾಗಿದ್ದು. ಸುಮಾರು 50 ಸಾವಿರ ಹನುಮ ಭಕ್ತರು ಸೇರುವ ನಿರೀಕ್ಷೆ ಇದ್ದು, ಎಂದಿನಂತೆ ಈ ಬಾರಿಯೂ ಸಾರ್ವಜನಿಕರು ಸಹಕಾರ ನೀಡಬೇಕು. ಪಟ್ಟಣದ ಎಲ್ಲ ಗರಡಿ ಮತ್ತು ಶ್ರೀ ರಾಮಮಂದಿರಗಳು ತಮ್ಮ ತಮ್ಮ ಮಂದಿರದ ಮುಂದೆ ಶೃಂಗರಿಸುವ ಜೊತೆಗೆ ಉತ್ಸವಮೂರ್ತಿಯನ್ನು ಮೆರವಣಿಗೆಯಲ್ಲಿ ತರುವಂತೆ ಮನವಿ ಮಾಡಿದರು.ಶೋಭಾಯಾತ್ರೆಯಲ್ಲಿ ಸುತ್ತೂರು ಶ್ರೀಗಳು, ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಸೋಮನಾಥೇಶ್ವರ ಸ್ವಾಮೀಜಿ, ಕನಕಗುರು ಪೀಠದ ಸ್ವಾಮೀಜಿ, ತಾಲೂಕಿನ ಗಾವಡಗೆರೆ, ಮಾದಹಳ್ಳಿ ಮಠದ ಸ್ವಾಮೀಜಿಗಳ ಸಾನಿಧ್ಯದಲ್ಲಿ ಮೆರವಣಿಗೆ ನಡೆಸಲು ತೀರ್ಮಾನಿಸಿದೆ.
ಶಾಸಕ ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಶಾಸಕ ಮಂಜುನಾಥ್, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಎಂದಿನಂತೆ ಕಲ್ಕುಣಿಕೆಯ ರಂಗನಾಥ ಬಡಾವಣೆಯಿಂದ ಕಲಾತಂಡಗಳೊಂದಿಗೆ ಶೋಭಾಯಾತ್ರೆಯ ಮರೆವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದರು.ಸಭೆಯಲ್ಲಿ ಕಾರ್ಯದರ್ಶಿ ಅನಿಲ್ ಕಳೆದ ಸಾಲಿನ ಲೆಕ್ಕಪತ್ರ ಮಂಡಿಸಿದರು. ಸಮಿತಿ ಉಪಾಧ್ಯಕ್ಷ ಎಚ್.ವೈ. ಮಹದೇವ್, ಎಚ್.ಎನ್. ಚಂದ್ರಶೇಖರ್, ಸಮಿತಿಯ ಸಂಚಾಲಕ ಚಂದ್ರಮೌಳಿ, ಸದಸ್ಯರಾದ ಸಚ್ಚಿನ್ ಬಾಗಲ್, ಗಿರಿ, ನರಸಿಂಹಮೂರ್ತಿ, ನಂದಿ ಮಹೇಶ್, ಮೈಲಾರಿ, ಪೂರ್ಣಪ್ರಕಾಶ್ ಸಿಂಗ್ವಿ, ವರದರಾಜಪಿಳ್ಳೆ, ಯೋಗೀಶ್, ಕೃಷ್ಣ, ರಾಮಣ್ಣ ಇದ್ದರು.