ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಐತಿಹಾಸಿಕ ಗಂಗರಸರ ರಾಜಧಾನಿ ಮಣ್ಣೆ ಗ್ರಾಮದಲ್ಲಿ ಮಣ್ಣಮ್ಮದೇವಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಐತಿಹಾಸಿಕ ಗಂಗರಸರ ರಾಜಧಾನಿ ಮಣ್ಣೆ ಗ್ರಾಮದಲ್ಲಿ ಮಣ್ಣಮ್ಮದೇವಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಮಣ್ಣಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ, ಅಭಿಷೇಕ, ಅಗ್ನಿಕೊಂಡ, ಉತ್ಸವಗಳು ನಡೆದು ಮೆರವಣಿಗೆ ಮೂಲಕ ದೇವರನ್ನು ನಡೆಮುಡಿಯಿಂದ ಶಾಸ್ತ್ರೋಕ್ತವಾಗಿ ಮಂಗಳವಾದ್ಯದೊಂದಿಗೆ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಉತ್ಸವ ಮೂರ್ತಿಯನ್ನು ತರಲಾಯಿತು.

ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಭಕ್ತರು ಜಯಘೋಷಗಳ ನಡುವೆ ರಥ ಎಳೆದರು. ತೇರು ಮುಂದೆ ಸಾಗುತ್ತಿದಂತೆ ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು ಎಸೆದು ಹರಕೆ ತೀರಿಸಿದ ಧನ್ಯತೆಯಿಂದ ಪೂಜೆ ಸಲ್ಲಿಸಲು ಮುಂದಾದರು.

ಬೆಳಗಿನಿಂದಲೂ ಆಗಮಿಸಿದ್ದ ಜನ ಸಮೂಹ ಸ್ಥಳೀಯ ಗ್ರಾಮಸ್ಥರೊಂದಿಗೆ ಸೇರಿ ಶ್ರೀ ಮಣ್ಣಮ್ಮದೇವಿಯ ಉತ್ಸವ ಮೂರ್ತಿಯನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಿದ್ದ ಎತ್ತರದ ರಥದಲ್ಲಿರಿಸಿ ವೇದ ಮಂತ್ರ ಘೋಷಗಳೊಂದಿಗೆ ಎಳೆದರು.

ಬಿಸಿಲಿನಿಂದ ರಥೋತ್ಸವದ ಸಮಯ ಬದಲು: ಈ ಬಾರಿ ಬಿಸಿ ಗಾಳಿಯೊಂದಿಗೆ ಬಿಸಿಲು ಹೆಚ್ಚಾಗಿರುವ ಕಾರಣ ಪ್ರತೀತಿಯಂತೆ ಮಧ್ಯಾಹ್ನ ನಡೆಯಬೇಕಿದ್ದ ರಥೋತ್ಸವವನ್ನು ಸಂಜೆ 5.30ರ ವೇಳೆಗೆ ಸಮಯ ಬದಲು ಮಾಡಿ ಮಣ್ಣಮ್ಮ ದೇವಿಯ ಮೂರ್ತಿಯಿದ್ದ ರಥವನ್ನು ಊರಿನ ಪ್ರಮುಖ ಬೀದಿಯಲ್ಲಿ ಎಳೆದರು.

ಅನ್ನಸಂತರ್ಪಣೆ ಮತ್ತು ಪಾನಕ ವಿತರಣೆ:

ಶ್ರೀ ಮಣ್ಣಮ್ಮದೇವಿ ಜಾತ್ರೆಯಲ್ಲಿ ಬೇಸಿಗೆಯ ಬಿಸಿಗೆ ಭಕ್ತಾದಿಗಳು ತಂಪಾಗಿರಲು ಪಾನಕ, ಮಜ್ಜಿಗೆ ಹಾಗೂ ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಹಲವು ಭಕ್ತಾದಿಗಳು ಏರ್ಪಡಿಸಿದ್ದರು.

ರಸ್ತೆ ಸಂಚಾರ ಅಸ್ತವ್ಯಸ್ಥ: ಮಣ್ಣೆ ಗ್ರಾಮದ ಮೂಲಕ ಮರಳಕುಂಟೆ, ಕೋಳಾಲ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕವಿರುವುದರಿಂದ ಮಣ್ಣಮ್ಮ ದೇವಿ ಜಾತ್ರೆಯ ಪ್ರಯುಕ್ತ ಪ್ರಮುಖ ಬೀದಿಯಲ್ಲಿ ರಥೋತ್ಸವ ನಡೆಯುತ್ತಿದ್ದ ಕಾರಣ ಈ ರಸ್ತೆ ಮೂಲಕ ಹಾದುಹೋಗುವ ವಾಹನ ಸವಾರರು ಪ್ರಯಾಸ ಪಡುವ ದೃಶ್ಯ ಎದ್ದು ಕಾಣುತ್ತಿತ್ತು.

ಪೋಟೋ 9 : ತ್ಯಾಮಗೊಂಡ್ಲು ಹೋಬಳಿಯ ಐತಿಹಾಸಿಕ ಗಂಗರಸರ ರಾಜಧಾನಿ ಮಣ್ಣೆ ಗ್ರಾಮದಲ್ಲಿ ಮಣ್ಣಮ್ಮದೇವಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.