ಇಲ್ಲಿಯ ಸುಪ್ರಸಿದ್ಧ ಮಾರಿಕಾಂಬೆ ಜಾತ್ರೆ ಇಂದು ಮತ್ತು ನಾಳೆ ಅದ್ಧೂರಿಯಾಗಿ ನಡೆಯಲಿದ್ದು, ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕನ್ನಡಪ್ರಭ ವಾರ್ತೆ ಭಟ್ಕಳ
ಇಲ್ಲಿಯ ಸುಪ್ರಸಿದ್ಧ ಮಾರಿಕಾಂಬೆ ಜಾತ್ರೆ ಇಂದು ಮತ್ತು ನಾಳೆ ಅದ್ಧೂರಿಯಾಗಿ ನಡೆಯಲಿದ್ದು, ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಮಣ್ಕುಳಿಯ ಮಾರುತಿ ಆಚಾರ್ಯ ಅವರ ಮನೆಯಲ್ಲಿ ಸಿದ್ಧಪಡಿಸಲಾಗಿದ್ದು, ಮಂಗಳವಾರ ರಾತ್ರಿ ಅದ್ಧೂರಿಯ ಪೂಜೆ, ಪುನಸ್ಕಾರ ನಡೆದ ಬಳಿಕ ವಾದ್ಯದೊಂದಿಗೆ ಭಕ್ತರ ಮೆರವಣಿಗೆಯ ಮೂಲಕ ಮಾರಿ ಉತ್ಸವ ಮೂರ್ತಿಯನ್ನು ತಂದು ಮಾರಿಗುಡಿಯಲ್ಲಿ ಹಿಂದಿನ ಸಂಪ್ರದಾಯ ಮತ್ತು ಧಾರ್ಮಿಕ ವಿಧಿ ವಿಧಾನಗಳಂತೆ ಬುಧವಾರ ಬೆಳಗಿನಜಾವ ಪ್ರತಿಷ್ಠಾಪಿಸಲಾಗುತ್ತದೆ. ಭಟ್ಕಳದ ಮಾರಿಜಾತ್ರೆ ತನ್ನದೇ ಆದ ಹಿನ್ನೆಲೆ ಮತ್ತು ಇತಿಹಾಸ ಹೊಂದಿದೆ. ಈ ಹಿಂದೆ ಮಾರಿಕಟ್ಟೆ ಪ್ರದೇಶದಲ್ಲಿ ಮಾರಿ ಹಬ್ಬದ ದಿನದಂದು ಕುರಿ, ಕೋಳಿ ಬಲಿ ಕೊಡುವ ಪದ್ದತಿ ಇತ್ತು. ಆದರೆ ಹಲವು ವರ್ಷಗಳಿಂದ ಇಂತಹ ಪದ್ದತಿ ರದ್ದಾಗಿದ್ದು, ಈಗೇನಿದ್ದರೂ ಭಕ್ತರು ಭಕ್ತಿಪೂರ್ವಕವಾಗಿ ಮಾರಿಯಮ್ಮನಿಗೆ ಹೂವು, ಹಣ್ಣು, ಬೆಳ್ಳಿ ಕಣ್ಣು, ಹೂವಿನ ಟೋಪಿ ಮುಂತಾದ ಸೇವೆ ಒಪ್ಪಿಸುತ್ತಿದ್ದಾರೆ. ಮಾರಿ ಹಬ್ಬದ ಪ್ರಯುಕ್ತ ಭಟ್ಕಳದ ಮನೆ ಮನೆಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಮಣ್ಕುಳಿಯಲ್ಲಿನ ಆಚಾರ್ಯರ ಮನೆಯವರು ಕಳೆದ ಒಂದು ವಾರದಿಂದ ತಮ್ಮ ಮನೆಯಲ್ಲಿಯೇ ಅಂಗಾರ ಮರದಿಂದ ಸುಂದರ ಮಾರಿ ಮೂರ್ತಿಯನ್ನು ಕೆತ್ತಿ ಮಾರಿಜಾತ್ರೆಯ ಹಿಂದಿನ ದಿನವಾದ ಮಂಗಳವಾರ ರಾತ್ರಿ ಸಮಾಜದವರಿಗೆಲ್ಲಾ ಊಟದ ವ್ಯವಸ್ಥೆಯನ್ನು ಮಾಡಿ, ಅತಿ ವಿಜೃಂಭಣೆಯಿಂದ ಪೂಜೆ ಸಲ್ಲಿಸಿ ನಂತರ ಮಾರಿ ಮೂರ್ತಿಯನ್ನು ಬುಧವಾರ ಬೆಳಗಿನ ಜಾವ ದೇವಸ್ಥಾನದದವರಿಗೆ ಬಿಟ್ಟು ಕೊಟ್ಟ ನಂತರ ಮಾರಿ ಜಾತ್ರೆಗೆ ಅಧಿಕೃತ ಚಾಲನೆ ದೊರೆಯುವ ಸಂಪ್ರದಾಯ ನಡೆದು ಬಂದಿದೆ. ಮಾರಿ ಜಾತ್ರೆಯ ಸಂದರ್ಭದಲ್ಲಿ ಮಾರಿಯಮ್ಮನಿಗೆ ಪೂಜೆ, ಹರಕೆ ಒಪ್ಪಿಸುವುದರಿಂದ ಕಷ್ಟಕಾರ್ಪಣ್ಯಗಳು ದೂರವಾಗಲಿದೆ ಎನ್ನುವ ಬಲವಾದ ನಂಬಿಕೆ ಭಕ್ತರು ಹೊಂದಿರುವುದರಿಂದ ವರ್ಷಂಪ್ರತಿ ನಡೆಯುವ ಮಾರಿ ಜಾತ್ರೆಯಲ್ಲಿ ಭಟ್ಕಳ ಸೇರಿದಂತೆ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ಮಾರಿಗೆ ಬುಧವಾರ ಭಟ್ಕಳ ಗ್ರಾಮೀಣ ಭಾಗದವರು ಬಂದು ಪೂಜೆ ಸಲ್ಲಿಸುವುದು ಹಾಗೂ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಭಟ್ಕಳ ಪಟ್ಟಣದ ಜನರು ಪೂಜೆ ಸಲ್ಲಿಸುವ ಪದ್ದತಿ ಇದೆ. ಜಾತ್ರೆಯಲ್ಲಿ ಬೆಳ್ಳಿ ಕಣ್ಣು, ಹೂವಿನ ಟೋಪಿ ಮುಂತಾದವುಗಳಿಗೆ ಭಾರೀ ಬೇಡಿಕೆ ಇರಲಿದ್ದು, ಭಕ್ತರು ಇದನ್ನು ಖರೀದಿಸಿ ದೇವರ ಹುಂಡಿಗೆ ಭಕ್ತಿಪೂರ್ವಕವಾಗಿ ಹಾಕಿ ತಮ್ಮ ಹರಕೆ ತೀರಿಸುತ್ತಾರೆ. ಆ.6ರಂದು ಸಂಜೆ ಮಾರಿಗುಡಿಯಲ್ಲಿ ಮಾರಿಗೆ ಅಂತಿಮ ಪೂಜೆ ಸಲ್ಲಿಸಿ ಮೂರ್ತಿಯನ್ನು ಪಟ್ಟಣದಿಂದ ೭ಕಿಮೀ ದೂರದ ಜಾಲಿಕೋಡಿ ಸಮುದ್ರಕ್ಕೆ ಬೃಹತ್ ಮೆರವಣಿಗೆಯಲ್ಲಿ ಹೊತ್ತೊಯ್ದು ವಿಸರ್ಜಿಸುತ್ತಾರೆ. ಎರಡು ದಿನಗಳ ಮಾರಿಜಾತ್ರೆಗೆ ಆಡಳಿತ ಕಮಿಟಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.