ಹನುಮ ಮಾಲಾಧಾರಿಗಳಿಂದ ಗಜೇಂದ್ರಗಡದಲ್ಲಿ ಅದ್ಧೂರಿ ಶೋಭಾಯಾತ್ರೆ

| Published : Dec 23 2023, 01:45 AM IST

ಹನುಮ ಮಾಲಾಧಾರಿಗಳಿಂದ ಗಜೇಂದ್ರಗಡದಲ್ಲಿ ಅದ್ಧೂರಿ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಹನುಮ ಮಾಲಾಧಾರಿಗಳು ಶುಕ್ರವಾರ ಗಜೇಂದ್ರಗಡ ಪಟ್ಟಣದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಆಂಜನೇಯ ಮೂರ್ತಿ ಸಹಿತ ನಗರ ಸಂಕೀರ್ತನ ಯಾತ್ರೆ ಅದ್ಧೂರಿಯಾಗಿ ನಡೆಯಿತು.

ಹನುಮ ಮಾಲಾಧಾರಿಗಳು ಜೈ ಶ್ರೀರಾಮ, ಜೈ ಹನುಮಾನ್ ಘೋಷಣೆ

ಗಜೇಂದ್ರಗಡ: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಹನುಮ ಮಾಲಾಧಾರಿಗಳು ಶುಕ್ರವಾರ ಪಟ್ಟಣದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಆಂಜನೇಯ ಮೂರ್ತಿ ಸಹಿತ ನಗರ ಸಂಕೀರ್ತನ ಯಾತ್ರೆ ಅದ್ಧೂರಿಯಾಗಿ ನಡೆಯಿತು. ಸ್ಥಳೀಯ ಶಿವಾಜಿ ಪೇಟೆಯ ಮಾರುತಿ ದೇಗುಲದಿಂದ ಬೆಳಗ್ಗೆ ಆರಂಭವಾದ ಮೆರವಣಿಗೆಯಲ್ಲಿ ಜೈ ಶ್ರಿರಾಮ, ಜೈ ಜೈ ರಾಮ ಮತ್ತು ಆತನ ಭಂಟ ಹನುಮಾನ ಎಂದು ಜೈ ಘೋಷಣೆಗಳೊಂದಿಗೆ ಕೇಸರಿ ಧ್ವಜ ಹಿಡಿದು ಸಾಗಿದ ಶೋಭಾ ಯಾತ್ರೆಯು ಪಟ್ಟಣದ ಅಡೇಕಾರ ಓಣಿ, ಹಿರೇಬಜಾರ ಕಟ್ಟಿಬಸವೇಶ್ವರ ರಂಗ ಮಂದಿರ, ಕೊಳ್ಳಿಯವರ ಕತ್ರಿ ಮಾರ್ಗವಾಗಿ ಭಜರಂಗ ವೃತ್ತ, ಬಸವೇಶ್ವರ ವೃತ್ತ, ದುರ್ಗಾವೃತ್ತ, ಜೋಡುರಸ್ತೆ ಮುಖಾಂತರ ಕೆ.ಕೆ.ವೃತ್ತದಲ್ಲಿ ಸಮಾರೋಪಗೊಂಡಿತ್ತು.

ಕೈಯಲ್ಲಿ ಕೇಸರಿ ಭಗವಾ ಧ್ವಜ ಜತೆಗೆ ಕೇಸರಿ ಪಂಚೆ ಮತ್ತು ಶಲ್ಯ ಧರಿಸಿದ ಹನುಮ ಮಾಲಾಧಾರಿಗಳು ಜೈ ಶ್ರೀರಾಮ, ಜೈ ಹನುಮಾನ್ ಘೋಷಣೆ ಹಾಕಿ ಸಾಗುತ್ತಿದ್ದ ಮಾರ್ಗವು ಸಂಪೂರ್ಣವಾಗಿ ಕೇಸರಿ ಬಣ್ಣ ಎರಚಿದಂತೆ ಕಾಣಿಸುತ್ತಿತ್ತು. ಮೆರವಣಿಗೆಯಲ್ಲಿ ಡೋಲು, ವಿವಿಧ ವಾದ್ಯ ತಂಡ, ಭಜನೆಗಳೊಂದಿಗೆ ರಾಮರಕ್ಷಾ ಸ್ತೋತ್ರ ಹಾಗೂ ಶ್ರೀರಾಮ ಹಾಗೂ ಆಂಜನೇಯ ಸ್ವಾಮಿಯ ನಾಮಸ್ಮರಣೆಯ ಭಜನೆ ಮಾರ್ದನಿಸಿತು.

ಪಟ್ಟಣದ ಶಿವಾಜಿಪೇಟೆಯ ಮಾರುತಿ ದೇವಸ್ಥಾನ ಮುಂಭಾಗದಿಂದ ಆರಂಭವಾದ ಮೆರವಣಿಗೆಗೆ ಆರ್‌ಎಸ್‌ಎಸ್ ಹಿರಿಯ ಮುಖಂಡ ತಿಮ್ಮಣ್ಣ ವನ್ನಾಲ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ, ಸಿದ್ದಣ್ಣ ಬಂಡಿ, ಸಂಜೀವ ಜೋಶಿ, ಅಂದಪ್ಪ ಸಂಕನೂರ, ರವಿ ಕಲಾಲ, ಪರಶುರಾಮ ಬಾವಿಕಟ್ಟಿ, ಕಳಕೇಶ ನಂದಿಹಾಳ, ಮಂಜುನಾಥ ಅಜಮೀರ್, ಪರಶುರಾಮ ಕಲಾಲ, ಅಯ್ಯನ ಗೌಡರ ಸೇರಿ ಇತರರು ಭಾಗವಹಿಸಿದ್ದರು.

ಮೆರವಣಿಗೆಯು ಕಾಲಕಾಲೇಶ್ವರ ವೃತ್ತಕ್ಕೆ ಆಗಮಿಸಿದಾಗ ಆಂಜನೇಯ ಮೂರ್ತಿಗೆ ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ ಮಾಲಾರ್ಪಣೆ ಮಾಡಿದರು. ರಾಜು ಸಾಂಗ್ಲೀಕರ, ಮುರ್ತಜಾ ಡಾಲಾಯತ್, ಬಸವರಾಜ ಚನ್ನಿ, ಅಪ್ಪು ಮತ್ತಿಕಟ್ಟಿ, ಶ್ರೀಧರ ಗಂಜಿಗೌಡರ, ಅರಿಹಂತ ಬಾಗಮಾರ, ಸಿದ್ದು ಗೊಂಗಡಶೆಟ್ಟಿಮಠ ಸೇರಿ ಇತರರು ಇದ್ದರು.

ಹನುಮ ಮಾಲಾಧಾರಿಗಳಿಂದ ೨೧ ದಿನದ ವೃತದಲ್ಲಿ ಮಹಾಪೂಜೆ ಹಾಗೂ ಅನ್ನ ಪ್ರಸಾದ ಸೇವೆಯು ಶನಿವಾರ ಮುಕ್ತಾಯವಾಗಲಿದ್ದು, ಹಂಪಿ ಹತ್ತಿರದ ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇಗುಲದಲ್ಲಿ ಮಾಲೆಗಳನ್ನು ವಿಸರ್ಜಿಸುವರು.