ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ನರಸಿಂಹ ಸ್ವಾಮಿ ದೇವಾಲಯ ಮುಂಭಾಗದಲ್ಲಿ ಗುಡಿಬಂಡೆಯಿಂದ ಆಗಮಿಸಿದಶ್ರೀ ಕೃಷ್ಣದೇವರಾಯರ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿ, ಭಕ್ತಿ ಭಾವದಿಂದ ಪುಷ್ಪನಮನ ಮತ್ತು ನುಡಿನಮನ ಸಲ್ಲಿಸಿ ನಗರದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ರಥಯಾತ್ರೆಗೆ ತಾಲೂಕಿನ ಬಲಿಜ ಸಮುದಾಯದ ಮುಖಂಡರು ಚಾಲನೆ ನೀಡಿದರು.ರಥದ ಪಥವನ್ನು ಉದ್ಘಾಟಿಸಿದ ಸಾಹಿತಿ ಮತ್ತು ಶಿಕ್ಷಣ ತಜ್ಞ ಡಾ. ಕೆ. ವಿ ಪ್ರಕಾಶ್ ಮಾತನಾಡಿ, ಭಾರತ ದೇಶದಲ್ಲಿ ಆಳ್ವಿಕೆ ನಡೆಸಿದ ಅರಸರಲ್ಲಿ ಶ್ರೀಕೃಷ್ಣದೇವರಾಯನಿಗೆ ವಿಶಿಷ್ಟ ಸ್ಥಾನವಿದೆ. ಸಮರ್ಥ ಆಡಳಿತಗಾರನಾಗಿ, ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಮಹಾನ್ ರಾಜ ಕೃಷ್ಣದೇವರಾಯನಾಗಿದ್ದು, ಇಂತಹ ರಾಜನ ಪುತ್ಥಳಿ ರಾಜ್ಯಾದ್ಯಂತ ನಿರ್ಮಾಣ ಸೇರಿ ಬಲಿಜ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯುವ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸುವಂತೆ ಮನವಿ ಮಾಡಿದರು
ಹಂಪಿಯಲ್ಲಿ ನವರಾತ್ರಿ ದರ್ಬಾರ್ ಮತ್ತು ದಸರಾ ಪ್ರಾರಂಭಿಸಿ ಇತಿಹಾಸದ ಪರಂಪರೆಯನ್ನು ಕೃಷ್ಣದೇವರಾಯ ಮುನ್ನಡೆಸಿದರು. ಅಷ್ಟ ದಿಗ್ಗಜರೊಂದಿಗೆ, ಸಾಹಿತಿಯಾಗಿ, ಸಂಸ್ಕೃತಿ, ಕಲೆ, ಸಾಹಿತ್ಯ, ಚಿತ್ರಕಲೆ ಮತ್ತು ಶಿಲ್ಪ ಕಲೆಗಳಿಗೆ ಪ್ರೋತ್ಸಾಹ ನೀಡಿದರು. ತಮ್ಮ ನೈಪುಣ್ಯ, ರಾಜನೀತಿ ಮತ್ತು ಕವಿತಾ ಸಾಮರ್ಥ್ಯದೊಂದಿಗೆ ಮದಲಸ ಚರಿತ್ರೆ, ರಸಮಂಜರಿ ಮತ್ತು ಜಾಂಬವತಿ ಕಲ್ಯಾಣ ಮತ್ತಿತರ ಕೃತಿಗಳನ್ನು ಸಂರಚನೆ ಮಾಡಿದ್ದಾರೆ.ಇದಲ್ಲದೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಗೆ ರಾಣಿಯೊಡನೆ ಭೇಟಿಕೊಟ್ಟು ಕನಕಾಭಿಷೇಕ ಮಾಡಿಸಿ, ನಗ- ನಾಣ್ಯ ದಾನ ನೀಡಿದ ಬಗ್ಗೆ ಪ್ರಸ್ತುತ ವಿಗ್ರಹಗಳು ಸಾಕ್ಷಿಯಾಗಿ ತಿಳಿಸುತ್ತವೆ. ಶ್ರೀ ಕೃಷ್ಣದೇವರಾಯರ ಹೆಸರು ಎಂದೆಂದಿಗೂ ಅಜರಾಮರ ಎಂದು ಬಣ್ಣಿಸಿದರು.
ಫೆ.16ರ ಭಾನುವಾರ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಬಲಿಜ ಯುವಶಕ್ತಿ ಆಯೋಜಿಸಿರುವ ದಕ್ಷಿಣ ಭಾರತದ ಶ್ರೀ ಕೃಷ್ಣದೇವರಾಯರ 555ನೇ ಜಯಂತ್ಯುತ್ಸವಕ್ಕೆ ಗೌರಿಬಿದನೂರಿನಿಂದ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುತ್ತೇವೆಂದು ಸಮುದಾಯದ ಮುಖಂಡರು ತಿಳಿಸಿದರು.ಗೌರಿಬಿದನೂರಿನ ಎಂ.ಜಿ ವೃತ್ತದಿಂದ ಮಂಚೇನಹಳ್ಳಿಗೆ ಗೌರವ ಸಮರ್ಪಣೆಯೊಂದಿಗೆ ಶ್ರೀ ಕೃಷ್ಣದೇವರಾಯರ ರಥವನ್ನು ಬೀಳ್ಕೊಡಲಾಯಿತು.
ರಥಯಾತ್ರೆಯಲ್ಲಿ ಬಲಿಜ ಸಮುದಾಯದ ಮುಖಂಡರಾದ ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್, ನಗರ ಸಭೆ ಮಾಜಿ ಸದಸ್ಯ ಅನಂತರಾಜು, ಸಮುದಾಯದ ಮಾರುತಿ ಸ್ವಾಮಿ, ಬಲಿಜ ಯುವ ಘರ್ಜನೆ ಅಧ್ಯಕ್ಷ ಜಿ.ಎ ಪ್ರದೀಪ್, ಉಪಾಧ್ಯಕ್ಷ ವೆಂಕಟಾದ್ರಿ, ಪರಮೇಶ್, ಭಾಸ್ಕರ್, ಮಾರ್ಕೆಟ್ ರವಿ, ಮುಖಂಡ ನಾಗ , ರಾಜ್ ಕುಮಾರ್ ಸೇರಿ ಸಮುದಾಯದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.----------