ಸಂವಿಧಾನ ರಥ ಯಾತ್ರೆಗೆ ನವಲಿಯಲ್ಲಿ ಅದ್ಧೂರಿ ಸ್ವಾಗತ

| Published : Feb 13 2024, 12:45 AM IST

ಸಾರಾಂಶ

ಸಂವಿಧಾನ ಜಾಗೃತಿ ರಥ ಯಾತ್ರೆಗೆ ನವಲಿ ಹಾಗೂ ನವಲಿ ತಾಂಡಾನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಸಾರ್ವಜನಿಕರಲ್ಲಿ ಸಂವಿಧಾನದ ಆಶಯದ ಕುರಿತು ಜಾಗೃತಿ ಮೂಡಿಸಲಾಯಿತು.

ನವಲಿ: ನವಲಿ ಗ್ರಾಮಕ್ಕೆ ಸೋಮವಾರ ಆಗಮಿಸಿದ್ದ ಸಂವಿಧಾನ ಜಾಗೃತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಯಿತು.ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಬುದ್ಧ ಸರ್ಕಲ್‌ನಿಂದ ಮೆರವಣಿಗೆ ನಡೆಯಿತು. ನವಲಿ ತಾಂಡಾ, ಹಾಗೂ ನವಲಿ ಗ್ರಾಮದಲ್ಲಿ ರಥಯಾತ್ರೆ ಸಂಚರಿಸಿತು. ವಿದ್ಯಾರ್ಥಿಗಳು ಭಾರತಮಾತೆ, ಅಂಬೇಡ್ಕರ್, ಬಸವೇಶ್ವರ ಹಾಗೂ ಬುದ್ಧನ ವೇಷಭೂಷಣ ತೊಟ್ಟು ಮರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರಟಗಿ-ಕನಕಗಿರಿ ರಸ್ತೆಯ ಎರಡು ಬದಿಯಲ್ಲಿ ತಳಿರು, ತೋರಣ, ಬಾಳೆದಿಂಡು, ತೆಂಗಿನಗರಿ ಕಟ್ಟಲಾಗಿತ್ತು. ಬುದ್ಧ ಹಾಗೂ ಮಾಕಣ್ಣ ಕಂಬಳಿ ವೃತ್ತವನ್ನು ರಂಗೋಲಿ ಮತ್ತು ಹೂವುಗಳಿಂದ ಶೃಂಗರಿಸಲಾಗಿತ್ತು.ಸಾರ್ವಜನಿಕರಲ್ಲಿ ಸಂವಿಧಾನದ ಆಶಯದ ಕುರಿತು ಜಾಗೃತಿ ಮೂಡಿಸಲಾಯಿತು. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಬರುವ ಬುದ್ಧ ಸರ್ಕಲ್, ಮಾಕಣ್ಣ ಕಂಬಳಿ ಸರ್ಕಲ್‌ನಲ್ಲಿ ಪುಷ್ಪನಮನ ಸಲ್ಲಿಸಲಾಯಿತು.ನಾನಾ ಗ್ರಾಮಗಳಿಂದ ಆಗಮಿಸಿದ ವೇಷಗಾರರು ರಾಮ, ಲಕ್ಷ್ಮಣ, ಆಂಜನೇಯ ವೇಷ ಧರಿಸಿ ಗಮನ ಸೆಳೆದರು. ಬಾಜಾ ಭಜಂತ್ರಿಗಳು ಮೆರವಣಿಗೆಗೆ ಮೆರಗು ನೀಡಿದರು. ವಿದ್ಯಾರ್ಥಿಗಳು ಅಂಬೇಡ್ಕರ್‌ ಕುರಿತು ಜಾಗೃತಿ ಗೀತೆ ಹಾಡಿದರು.ನವಲಿ ತಾಂಡದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ವಾಗತಿಸಿದರು. ಬುದ್ಧ ವೃತ್ತದಲ್ಲಿ ಗ್ರಾಪಂ ಅಧ್ಯಕ್ಷೆ ಮಹಾದೇವಮ್ಮ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಕನಕಗಿರಿ-ಕಾರಟಗಿ ರಸ್ತೆ ಮೂಲಕ ಮಾಕಣ್ಣ ಕಂಬಳಿ ವೃತ್ತದ ವರೆಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಗ್ರಾಮ ಪಂಚಾಯಿತಿ ಪಿಡಿಒ ವೀರಣ್ಣ ನೇಕ್ರಳ್ಳಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ ತಳವಾರ, ಉಪತಹಸೀಲ್ದಾರ್‌ ಪ್ರಕಾಶ ಸವಡಿ, ಗಂಗಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ, ನೋಡಲ್ ಅಧಿಕಾರಿ ತುಗಲಪ್ಪ ಮೊದಲಾದವರು ಉಪಸ್ಥಿತರಿದ್ದರು.