ಸಂವಿಧಾನ ಸ್ತಬ್ಧ ಚಿತ್ರಕ್ಕೆ ಅದ್ಧೂರಿ ಸ್ವಾಗತ

| Published : Feb 05 2024, 01:50 AM IST

ಸಾರಾಂಶ

ಸಂವಿಧಾನ ದಿನಾಚರಣೆ ಪ್ರಯುಕ್ತ ಮುಂದುವರೆದಿರುವ ಸಂವಿಧಾನ ಜಾಗೃತಿ ಸ್ಥಬ್ಧ ಚಿತ್ರದ ಜಾಥಾ ಅಂಗವಾಗಿ ತಾಲೂಕಿನ ಬದನಗುಪ್ಪೆಯಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಶಾಲಾ ಮಕ್ಕಳು ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ, ಸಂವಿಧಾನ, ರಾಷ್ಟ್ರ ನಾಯಕರ ಭಾವಚಿತ್ರ, ಸಂಸತ್‌ಭವನ, ಇನ್ನಿತರ ಮಾದರಿಗಳು ವಿಶೇಷ ಗಮನ ಸೆಳೆಯಿತು.

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ । ಅತ್ಯಾಕರ್ಷಕವಾಗಿ ಮೂಡಿಬಂದ ಮಾದರಿ ಸ್ಥಬ್ಧ ಚಿತ್ರಗಳು

ಕನ್ನಡಪ್ರಭ ವಾರ್ತೆ ಚಾಮರಾಜನಗರಸಂವಿಧಾನ ದಿನಾಚರಣೆ ಪ್ರಯುಕ್ತ ಮುಂದುವರೆದಿರುವ ಸಂವಿಧಾನ ಜಾಗೃತಿ ಸ್ಥಬ್ಧ ಚಿತ್ರದ ಜಾಥಾ ಅಂಗವಾಗಿ ತಾಲೂಕಿನ ಬದನಗುಪ್ಪೆಯಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಶಾಲಾ ಮಕ್ಕಳು ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ, ಸಂವಿಧಾನ, ರಾಷ್ಟ್ರ ನಾಯಕರ ಭಾವಚಿತ್ರ, ಸಂಸತ್‌ಭವನ, ಇನ್ನಿತರ ಮಾದರಿಗಳು ವಿಶೇಷ ಗಮನ ಸೆಳೆಯಿತು.

ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಬದನಗುಪ್ಪೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆಯಾಗಿತ್ತು. ಶಾಲಾ ವಿದ್ಯಾರ್ಥಿಗಳು ಆಕರ್ಷಕವಾಗಿ ರಚಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ರಾಷ್ಟ್ರನಾಯಕರ ಭಾವಚಿತ್ರಗಳು, ಸಂವಿಧಾನ, ದೆಹಲಿಯ ಸಂಸತ್ ಭವನ, ಚಂದ್ರಯಾನ, ರಾಕೆಟ್ ಮಾದರಿ ಇಂದಿನ ಕಾರ್ಯಕ್ರಮದ ಕೇಂದ್ರಬಿಂದು ಆಗಿದ್ದವು. ಮಕ್ಕಳ ಕೈಚಳಕದಲ್ಲಿ ಅತ್ಯಾಕರ್ಷಕವಾಗಿ ಮೂಡಿಬಂದ ಮಾದರಿಗಳನ್ನು ಸಾರ್ವಜನಿಕರು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ಶಾಲಾ ಮಕ್ಕಳು ಸಾಂಪ್ರದಾಯಿಕ ದಿರಿಸು ಧರಿಸಿ ಸ್ವಾಗತಿಸಿದರು. ಗ್ರಾಪಂ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ರಾಜಮ್ಮ, ಇತರೆ ಸದಸ್ಯರು, ಗಣ್ಯರು ಪಾಲ್ಗೊಂಡರು. ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಸಿ.ಎಂ. ಕೃಷ್ಣಮೂರ್ತಿ ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ವಿಶೇಷಚೇತನ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಕಲಿಕಾ ಕಿಟ್‌ಗಳನ್ನು ವಿತರಿಸಿದ್ದು ವಿಶೇಷವಾಗಿತ್ತು. ಜಾಥಾವು ಮರಿಯಾಲ, ಬೇಡರಪುರದಲ್ಲಿಯೂ ಸಂಚರಿಸಿತು. ಬೇಡರಪುರದಿಂದ ಯುವಕರು, ಮುಖಂಡರು ಬೈಕ್ ರ‍್ಯಾಲಿ ಮೂಲಕ ಸಂವಿಧಾನದ ಮಹತ್ವದ ಅರಿವು ಮೂಡಿಸಿದರು.

ಹೆಗ್ಗೋಠಾರದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಅಲ್ಲಿನ ಪ್ರೌಢಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಆರ್. ಅಂಬಿಕ, ಉಪಾಧ್ಯಕ್ಷ ಗೌರಮ್ಮ ಸೇರಿದಂತೆ ಇನ್ನಿತರ ಗಣ್ಯರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಸಂಘಟನೆಯ ಮುಖಂಡರಾದ ಕೆ.ಎಂ. ನಾಗರಾಜು, ವಕೀಲ ಹೆಚ್. ಮಹೇಂದ್ರ, ಶಾಲಾ ಶಿಕ್ಷಕ ಮಹೇಶ್ ಆರಾಧ್ಯ ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ಉಪಸ್ಥಿತರಿದ್ದರು. ಕೊಳ್ಳೇಗಾಲ, ಹನೂರು ಭಾಗದಲ್ಲಿಯೂ ಸಂವಿಧಾನ ಜಾಗೃತಿ ಸ್ಥಬ್ದ ಚಿತ್ರ ಮೆರವಣಿಗೆ ನಡೆಯಿತು. ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಿಂದ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ಮೂಲಕ ಕಾಮಗೆರೆ ಗ್ರಾಮದ ಹೋಲಿಕ್ರಾಸ್ ಆಸ್ಪತ್ರೆವರೆಗೆ ಸಾಂಸ್ಕೃತಿಕ ಕಲಾತಂಡಗಳೊಡನೆ ಮೆರವಣಿಗೆ ಸಾಗಿತು. ಮಾಜಿ ಶಾಸಕ ಪರಿಮಳನಾಗಪ್ಪ, ಗ್ರಾಪಂ ಅಧ್ಯಕ್ಷ ಚಿಕ್ಕಸ್ವಾಮಿ, ಉಪಾಧ್ಯಕ್ಷ ಮಮತ, ಮುಖಂಡರಾದ ಸಿದ್ದರಾಜು, ಮಲ್ಲಿಕಾರ್ಜುನಸ್ವಾಮಿ, ಅಂಬರೀಶ್, ಆನಂದ್ ರಾಜ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಇನ್ನಿತರ ಮುಖಂಡರು ಇದ್ದರು. ಜಾಗೃತಿ ಜಾಥಾವು ಕೊಳ್ಳೇಗಾಲ ತಾಲೂಕಿನ 16 ಗ್ರಾಪಂಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಮಧ್ಯಾಹ್ನದ ವೇಳೆಗೆ ಮಂಗಲ ಗ್ರಾಪಂಗೆ ಆಗಮಿಸಿತು. ತಹಸೀಲ್ದಾರ್ ಗುರುಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಮುಖಂಡರು, ಯುವಕರು, ಮಹಿಳಾ ಸಂಘಟನೆಯ ಪ್ರತಿನಿಧಿಗಳು ಸಂಭ್ರಮದಿಂದ ಜಾಥಾಗೆ ಸ್ವಾಗತಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.