ಕಾರವಾರ: ವಂದೇ ಮಾತರಂ ಗೀತೆಯು 150 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಆಯೋಜಿಸಿರುವ ‘ವಂದೇ ಮಾತರಂ ಕೋಸ್ಟಲ್‌ ಸೈಕ್ಲೋಥಾನ್ -2026- ರ‍್ಯಾಲಿಯ ಪಶ್ಚಿಮ ಕರಾವಳಿ ಸೈಕ್ಲೋಥಾನ್ ತಂಡವು ಸೋಮವಾರ ಕಾರವಾರ ಪ್ರವೇಶಿಸಿದ್ದು, ಈ ರ‍್ಯಾಲಿಗೆ ಮಾಜಾಳಿ ಚೆಕ್ ಪೋಸ್ಟ್‌ನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಈ ರ‍್ಯಾಲಿಯಲ್ಲಿ ಸುಮಾರು 50ರಷ್ಟು ಮಹಿಳಾ ಸಿಬ್ಬಂದಿ ಸೇರಿದಂತೆ 120 ಸಿಐಎಸ್‌ಎಫ್‌ ಸಿಬ್ಬಂದಿ ಭಾಗವಹಿಸಿದ್ದು, ಈ ತಂಡವು ಜ. 28ರಂದು ಗುಜರಾತ್‌ನ ಲಖ್‌ಪತ್ ಕೋಟೆಯಿಂದ ರ‍್ಯಾಲಿ ಪ್ರಾರಂಭಿಸಿದ್ದು, ಸೋಮವಾರ ಮಡಗಾಂವ್-ಕಾಣಕೋಣ-ಮಾಜಾಳಿ ಮೂಲಕ ಕಾರವಾರ ಪ್ರವೇಶಿಸಿದೆ. ಸಿಐಎಸ್‌ಎಫ್‌ ಕೈಗಾದ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಎನ್‌ಸಿಸಿ ವಿದ್ಯಾರ್ಥಿಗಳು, ಪೊಲೀಸ್ ಬ್ಯಾಂಡ್ ಮತ್ತು ಸ್ಥಳೀಯ ಜಾನಪದ ಕಲಾತಂಡಗಳ ಮೆರವಣಿಗೆಯ ಮೂಲಕ ಅವರನ್ನು ಸ್ವಾಗತಿಸಲಾಯಿತು.

ಸೈಕ್ಲೋಥಾನ್ ತಂಡದಲ್ಲಿದ್ದ ಸಿಐಎಸ್‌ಎಫ್‌ ಸಿಬ್ಬಂದಿಯನ್ನು ಗೋಟ್ನೆಭಾಗ್ ಕ್ರಾಸ್‌ನಲ್ಲಿ ಮೀನುಗಾರ ಮಹಿಳೆಯರು ತಿಲಕವಿಟ್ಟು, ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು.

ಸಿಐಎಸ್‌ಎಫ್‌ ಘಟಕ ಎನ್‌ಪಿಸಿ ಕೈಗಾದ ಸೀನಿಯರ್ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಬೆಂಗಳೂರಿನ ಸ್ಯಾಟಲೈಟ್ ಕೇಂದ್ರದ ಸೀನಿಯರ್ ಕಮಾಂಡೆಂಟ್ ಆರ್.ಪಿ. ಸಿಂಗ್, ಡೆಪ್ಯುಟಿ ಕಮಾಂಡೆಂಟ್ ಬಿರೇಂದ್ರ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯಕ್, ಡಿವೈಎಸ್ಪಿ ಗಿರೀಶ್ ಮತ್ತಿತರರು ಭಾಗವಹಿಸಿದ್ದರು.

ಆನಂತರ ಈ ಸೈಕ್ಲೋಥಾನ್ ತಂಡವು ಮಾಜಾಳಿ ಚೆಕ್ ಫೋಸ್ಟ್ – ನೆಚಕಿನ್‌ಬಾಗ್- ಹಿಪ್ಪಲಿ – ದಂಡೇಬಾಗ್ - ಬಾವಳ್ - ದೇವ್‌ಬಾಗ್ - ಸದಾಶಿವಗಡ - ಶಿವಾಜಿ ಕ್ರಾಸ್ - ಚಿಂಚೇವಾಡ - ರಾಮನಾಥ್ ವೃತ್ತ - ವಾಂಗಡ್ -ಮಾಜಾಳಿ ಮಾರ್ಗದ ಮೂಲಕ ಮಾಜಾಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ತೆರಳಿತು. ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ಕೋಸ್ಟಲ್ ಸೈಕ್ಲೋಥಾನ್‌ನಲ್ಲಿ ಭಾಗವಹಿಸಿದ್ದ ಸಿಐಎಸ್‌ಎಫ್ ಕಾನ್‌ಸ್ಟೆಬಲ್‌ ರಾಹುಲ್ ಮಾತನಾಡಿ, ಗುಜರಾತಿನಿಂದ ಪ್ರಾರಂಭವಾದ ನಮ್ಮ ರ‍್ಯಾಲಿಯು ಕೇರಳದ ಕೊಚ್ಚಿ ತನಕ ನಡೆಯಲಿದೆ. ಈ ರ‍್ಯಾಲಿಯ ಮುಖ್ಯ ಉದ್ದೇಶ ಸುರಕ್ಷಿತ ಸಮೃದ್ಧ ಭಾರತ. ಕರಾವಳಿ ತೀರ ಪ್ರದೇಶ ಎಲ್ಲಿಯವರೆಗೆ ಸುರಕ್ಷಿತವಾಗಿರತ್ತದೆಯೋ ಅಲ್ಲಿಯವರೆಗೆ ಭಾರತ ಸಮೃದ್ಧವಾಗಿರುತ್ತದೆ. ದೇಶದ ಮೀನುಗಾರರು ಸಹಕಾರ ಮಹತ್ವದಾಗಿದ್ದು, ಪ್ರತಿ ಕ್ಷಣ ಅವರು ಸಮುದ್ರದಲ್ಲಿ ಇರುವುದರಿಂದ ಕರಾವಳಿ ತೀರ ಪ್ರದೇಶದ ಆಗುಹೋಗುಗಳ ಬಗ್ಗೆ ಅವರಿಗೆ ಮಾಹಿತಿ ಇದ್ದು, ಅವರ ಜತೆ ಬೆರೆತು ದೇಶದ ಭದ್ರತೆಗೆ ಅವರ ಸಹಕಾರ ಪಡೆಯಲು ಸೈಕ್ಲೋಥಾನ್ ಆಯೋಜಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು (ಸಿಐಎಸ್‌ಎಫ್) ದೇಶದ ಪ್ರಮುಖ ನಿರ್ಣಾಯಕ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದರು.

ವಂದೇ ಮಾತರಂ ಸೈಕ್ಲೋಥಾನ್‌ನಿಂದ ಧ್ವಜಾರೋಹಣ:

ವಂದೇ ಮಾತರಂ ಗೀತೆಯು 150 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಆಯೋಜಿಸಿದ್ದ ‘ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ -2026- ರ‍್ಯಾಲಿಯ ಪಶ್ಚಿಮ ಕರಾವಳಿ ಸೈಕ್ಲೋಥಾನ್ ತಂಡ ಮಂಗಳವಾರ ಕಾರವಾರದ ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಧ್ವಜಾರೋಹಣ ಸಮಾರಂಭದ ಆನಂತರ ಮುರುಡೇಶ್ವರದ ಕಡೆಗೆ ಸಾಗಿತು.

ತರಬೇತಿನಿರತ ಐಎಎಸ್ ಅಧಿಕಾರಿ ಝೂಫಿಶಾನ್ ಹಕ್, ಕೈಗಾ ಸ್ಟೇಷನ್ ಡೈರೆಕ್ಟರ್ ಶ್ರೀರಾಮ ಕೆ., ಸಿಐಎಸ್‌ಎಫ್‌ ಘಟಕ ಎನ್‌ಪಿಸಿ ಕೈಗಾದ ಸೀನಿಯರ್ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಕೋಸ್ಟ್ ಗಾರ್ಡ್ ಕಮಾಂಡರ್ ಕಿರಣಕುಮಾರ ಸಿನ್ಹಾ, ಡೆಪ್ಯುಟಿ ಕಮಾಂಡೆಂಟ್ ಬಿರೇಂದ್ರ ಕುಮಾರ್, ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಲಾ, ಡಿಆರ್‌ನ ಡಿವೈಎಸ್‌ಪಿ ರಾಘವೇಂದ್ರ ನಾಯ್ಕ, ಸಿಐಎಸ್‌ಎಫ್‌ನ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ ಎಸ್. ನಗಿ, ಚಂದ್ರು ಮತ್ತಿತರರು ಇದ್ದರು.

ಕೋಸ್ಟಲ್ ಸೈಕ್ಲೋಥಾನ್‌ಗೆ ಕುಮಟಾದಲ್ಲಿ ಭವ್ಯ ಸ್ವಾಗತ:

ವಂದೇ ಮಾತರಂ ಗೀತೆಯ ೧೫೦ನೇ ವರ್ಷಾಚರಣೆಯ ಅಂಗವಾಗಿ ಕರಾವಳಿ ಭದ್ರತೆ ಮತ್ತು ಜಾಗೃತಿ ಮೂಡಿಸಲು ಕೇಂದ್ರೀಯ ಕೈಗಾರಿಕಾ ಸುರಕ್ಷಾ ಬಲ (ಸಿಐಎಸ್‌ಎಫ್) ಆಯೋಜಿಸಿರುವ "ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್-೨೦೨೬ಕ್ಕೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕುಮಟಾಕ್ಕೆ ಆಗಮಿಸಿದಾಗ ವಿಶೇಷವಾಗಿ ಸ್ವಾಗತಿಸಲಾಯಿತು.

ಪಟ್ಟಣದ ಮಣಕಿ ಪೆಟ್ರೋಲ್ ಬಂಕ್ ಬಳಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಸ್ವಾಗತಿಸಿ, ಅಭಿನಂದಿಸಲಾಯಿತು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಜಿ.ಎಸ್. ಗುನಗಾ, ಹೇಮಂತಕುಮಾರ ಗಾಂವಕರ, ರಾಮನಾಥ ಶಾನಭಾಗ ಇನ್ನಿತರರು, ಸೈಕ್ಲಿಸ್ಟ್‌ಗಳಿಗೆ ಹಾರಹಾಕಿ, ಉಪಚರಿಸಿ ಬೀಳ್ಕೊಟ್ಟರು.