ಕರ್ನಾಟಕ ಸಂಭ್ರಮ ರಥಯಾತ್ರೆಗೆ ಅದ್ಧೂರಿ ಸ್ವಾಗತ

| Published : Aug 29 2024, 12:47 AM IST

ಸಾರಾಂಶ

ಚಾಮರಾಜನಗರ ಪಟ್ಟಣಕ್ಕೆ ಆಗಮಿಸಿದ ಜ್ಯೋತಿ ರಥಯಾತ್ರೆಯನ್ನು ಸಂತೇಮರಹಳ್ಳಿ ವೃತ್ತದ ಬಳಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಸಂಭ್ರಮದಿಂದ ಸ್ವಾಗತಿಸಿದರು.

ಚಾಮರಾಜನಗರಕ್ಕೆ ಆಗಮಿಸಿದ ಜ್ಯೋತಿ ರಥಯಾತ್ರೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ 50ರ ಸಂಭ್ರಮದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಜ್ಯೋತಿ ರಥಯಾತ್ರೆ ಬುಧವಾರ ಚಾಮರಾಜನಗರ ತಾಲೂಕಿಗೆ ಆಗಮಿಸಿದ್ದು, ಅದ್ಧೂರಿ ಸ್ವಾಗತ ನೀಡಲಾಯಿತು. ಚಾಮರಾಜನಗರ ಪಟ್ಟಣಕ್ಕೆ ಆಗಮಿಸಿದ ಜ್ಯೋತಿ ರಥಯಾತ್ರೆಯನ್ನು ಸಂತೇಮರಹಳ್ಳಿ ವೃತ್ತದ ಬಳಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಸಂಭ್ರಮದಿಂದ ಸ್ವಾಗತಿಸಿದರು. ಬಳಿಕ ಚಾಮರಾಜೇಶ್ವರ ದೇವಾಲಯದ ಬಳಿ ರಥಯಾತ್ರೆಯನ್ನು ತಹಸೀಲ್ದಾರ್ ಗಿರಿಜಾ, ಕನ್ನಡಪರ ಸಂಘಟನೆಗಳ ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಪಣ್ಯದಹುಂಡಿ ರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ ಸೇರಿದಂತೆ ಇನ್ನಿತರ ಮುಖಂಡರು, ಅಧಿಕಾರಿಗಳು ಬರ ಮಾಡಿಕೊಂಡರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ ಸಂಚರಿಸಿತು.

ಇದಕ್ಕೂ ಮೊದಲು ಯಳಂದೂರು ತಾಲೂಕಿನಿಂದ ಚಾಮರಾಜನಗರ ತಾಲೂಕು ವ್ಯಾಪ್ತಿಯ ಮೆಲ್ಲಹಳ್ಳಿ ಗೇಟ್‌ ಬಳಿ ರಥಯಾತ್ರೆಯನ್ನು ಯಳಂದೂರು ತಾಲೂಕು ತಹಸೀಲ್ದಾರ ಜಯಪ್ರಕಾಶ್ ಮತ್ತು ಕನ್ನಡ ಸಂಘಟನೆಯ ಪ್ರತಿನಿಧಿಗಳು, ಅಧಿಕಾರಿಗಳು ಬೀಳ್ಕೊಟ್ಟರು.

ಚಾಮರಾಜನಗರ ತಾಲೂಕು ತಹಸೀಲ್ದಾರ್ ಗಿರಿಜಾ ಹಾಗೂ ತಾಲೂಕು ಪಂಚಾಯತ್ ಇಒ ಪೂರ್ಣಿಮಾ, ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜಮ್ಮ, ವಿವಿಧ ಕನ್ನಡಪರ ಸಂಘಟನೆಯ ಮುಖಂಡರು, ಪ್ರತಿನಿಧಿಗಳು, ಅಧಿಕಾರಿಗಳು, ಗ್ರಾಮಸ್ಥರು ಮೆಲ್ಲಹಳ್ಲಿ ಗೇಟ್ ಬಳಿ ರಥಯಾತ್ರೆಯನ್ನು ಸಂಭ್ರಮದಿಂದ ಬರ ಮಾಡಿಕೊಂಡರು.

ಅಲ್ಲಿಂದ ಸಂತೇಮರಹಳ್ಳಿಗೆ ಆಗಮಿಸುತ್ತಿದ್ದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಬ್ಯಾಂಡ್ ವಾದನದೊಂದಿಗೆ ಸ್ವಾಗತಿಸಿದರು. ಮಹಿಳೆಯರು ಪೂರ್ಣಕುಂಭ ಹಿಡಿದು ಸಾಂಪ್ರದಾಯಿಕ ಸ್ವಾಗತ ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶೈಲಕುಮಾರ್, ಕನ್ನಡಪರ ಸಂಘಟನೆಗಳ ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಪಣ್ಯದಹುಂಡಿ ರಾಜು, ನಾಗೇಶ್, ಲೋಕೇಶ್, ವಿವಿಯಾನ್, ನಾಗರಾಜು, ಮತ್ತಿತ್ತರ ಮುಖಂಡರು ರಥದಲ್ಲಿ ಅಳವಡಿಸಲಾಗಿರುವ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಬರ ಮಾಡಿಕೊಂಡರು.

ರಥಯಾತ್ರೆ ಮೆರವಣಿಗೆಗೆ ಡೊಳ್ಳು ಕುಣಿತ, ವೀರಗಾಸೆ, ನಾದಸ್ವರ ಕಲಾತಂಡಗಳು ತಮ್ಮ ಪ್ರದರ್ಶನದ ಮೂಲಕ ಮತ್ತಷ್ಟು ಮೆರಗು ನೀಡಿದವು.

ಇದೇ ವೇಳೆ ಮಾತನಾಡಿದ ಚಾಮರಾಜನಗರ ತಾಲೂಕು ತಹಸೀಲ್ದಾರ ಗಿರಿಜಾ ಅವರು, ಚಾಮರಾಜನಗರ ತಾಲೂಕು ಹಾಗೂ ಪಟ್ಟಣದಲ್ಲಿ ರಥಯಾತ್ರೆ ಸಂಚರಿಸಲಿದೆ. ಗುರುವಾರ ರಥಯಾತ್ರೆಯು ಗುಂಡ್ಲುಪೇಟೆಗೆ ತೆರಳಲಿದ್ದು, ಚಾಮರಾಜನಗರ-ಗುಂಡ್ಲುಪೇಟೆ ತಾಲೂಕಿನ ಗಡಿ ಭಾಗದಲ್ಲಿ ರಥಯಾತ್ರೆಯನ್ನು ಬೀಳ್ಕೊಡಲಾಗುವುದು. ಕನ್ನಡ ಅಭಿಮಾನದ ರಥಯಾತ್ರೆಯನ್ನು ಹಬ್ಬದ ಮಾದರಿಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.