ಸಾರಾಂಶ
ಗದಗ: ಹಳೇಬಿಡು ಸಮೀಪವಿರುವ ಜೈನರಗುತ್ತಿಯಲ್ಲಿ ಜರುಗಲಿರುವ ಐತಿಹಾಸಿಕ ಪಂಚಕಲ್ಯಾಣಕ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ ಮಹಾಯಜ್ಞದಲ್ಲಿ ಪಾಲ್ಗೋಳ್ಳಲು ಮಹಾರಾಷ್ಟ್ರದ ಇಚಲಕರಂಜಿಯ ನಾಂದನಿಯಿಂದ ಗದಗ ಮಾರ್ಗವಾಗಿ ಪಾದಯಾತ್ರೆ ಕೈಗೊಂಡಿರುವ ದಿಗಂಬರ ಜೈನ ಮುನಿಗಳ ತಂಡ ಮಂಗಳವಾರ ಗದಗ ನಗರಕ್ಕೆ ಆಗಮಿಸಿತು.
ನರಗುಂದ ಹೊಂಬಳ ಮಾರ್ಗವಾಗಿ ನಗರಕ್ಕೆ ಆಗಮಿಸಿದ ಚರ್ಯ ಶಿರೋಮಣಿ ಆಚಾರ್ಯ ಶ್ರೀ108 ವಿಶುದ್ಧ ಸಾಗರ ಮಹಾರಾಜರ ನೇತೃತ್ವದಲ್ಲಿ 20 ಜೈನ ಮುನಿಗಳನ್ನು ಮುಳಗುಂದ ನಾಕಾ ಬಳಿ ಗದಗ ಜಿಲ್ಲಾ ದಿಗಂಬರ ಜೈನ್ ಸಂಘದ ಪದಾಧಿಕಾರಿಗಳು, ದಿಗಂಬರ ಸಮಾಜ ಬಾಂಧವರು ಶ್ರದ್ಧಾಭಕ್ತಿಯೊಂದಿಗೆ ಬರಮಾಡಿಕೊಂಡರು.ಇಲ್ಲಿಯ ಆದಿತ್ಯ ನಗರದಲ್ಲಿರುವ ಶಾಂತಿನಾಥ ದಿಗಂಬರ ಜೈನ್ ಮಂದಿರಕ್ಕೆ ಭೇಟಿ ನೀಡಿದ ಮುನಿಗಳ ತಂಡವು ನಗರದ ಹೊರವಲಯದಲ್ಲಿರುವ ಮಹೇಶ ಪಬ್ಲಿಕ್ ಸ್ಕೂಲ್‌ನ ಪ್ರಾಂಗಣದಲ್ಲಿ ಕೆಲ ಕಾಲ ಕಳೆದು ಪ್ರಾರ್ಥನೆ, ಧರ್ಮ ಬೋಧನೆ, ಪ್ರಸಾದ ಬಳಿಕ ಮಧ್ಯಾಹ್ನ ಡಂಬಳ, ಮುಂಡರಗಿ ಮಾರ್ಗವಾಗಿ ಪಾದಯಾತ್ರೆ ಮುಂದುವರೆಸಿದರು.
ಸಂಘದ ಗೌರವಾಧ್ಯಕ್ಷ ಡಾ.ಅಪ್ಪಣ್ಣ ಹಂಜೆ, ಅಧ್ಯಕ್ಷ ಪಿ.ಎ. ಕುಲಕರ್ಣಿ, ಉಪಾಧ್ಯಕ್ಷ ಎಂ.ಟಿ. ಕಬ್ಬಿಣ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮುತ್ತಿನ, ನಾಗರಾಜ ತುಕೋಳ, ಶಂಕ್ರಪ್ಪ ನಾವಳ್ಳಿ, ಆನಂದ ಬಸ್ತಿ, ಕುಬೇರಪ್ಪ ಮಲ್ಲಾಡದ, ಹನಮಂತಗೌಡ ಮತಗಟ್ಟಿ, ಅಶೋಕ ಮುತ್ತಿನ, ಸಂಜೀವ ಪಾಂಡ್ರೆ, ಯಶವಂತ ಸಿದ್ಧಣ್ಣವರ, ಸಂಜಯ ನಾವಳ್ಳಿ, ಸುಮನ್ ಮುತ್ತಿನ, ಪ್ರೀತಿ ನಾವಳ್ಳಿ, ನಿರ್ಮಲಾ ಸಿದ್ಧಣ್ಣವರ, ಮಧುಮತಿ ಕಬ್ಬಿಣ, ಸುಪ್ರಿಯಾ ನಾವಳ್ಳಿ, ಶೋಭಾ ಇಂಚಲ, ಮಂಜುಳಾ ಕಬ್ಬಿಣ ಮುಂತಾದವರು ಉಪಸ್ಥಿತರಿದ್ದರು.615 ಕಿಮೀ ಪಾದಯಾತ್ರೆ: ನ.3ರಂದು ನಾಂದನಿಯಿಂದ ಆರಂಭಗೊಂಡ ಜೈನ್ ಮುನಿಗಳ ಈ ಪಾದಯಾತ್ರೆ ನ. 27 ರಂದು ಜೈನರಗುತ್ತಿ ತಲುಪಿದರೆ ಒಟ್ಟು 615 ಕಿಮೀ ಕ್ರಮಿಸಿದಂತಾಗುವದು. ಪ್ರತಿ ದಿನಕ್ಕೆ 24 ರಿಂದ 26 ಕಿಮೀ ಪಾದಯಾತ್ರೆ ಜರುಗಿಸುವಂತೆ ಯೋಜನೆ ರೂಪಿಸಲಾಗಿದೆ. ನ.28 ರಿಂದ ಡಿ. 4 ರವರೆಗೆ ನಡೆಯುವ ಕಾರ್ಯಕ್ರಮದ ಬಳಿಕ ಪುನಃ ಬೇರೆ ಮಾರ್ಗವಾಗಿ ನಾಂದನಿ ತಲುಪುವದು.