ಮೋಕ್ಷ ಮಾರ್ಗದ ಸಾಧನೆಗೆ ಗುರು ಬೇಕು

| Published : Jul 22 2024, 01:20 AM IST

ಸಾರಾಂಶ

ಭವಬಂಧನದಿಂದ ಮುಕ್ತರಾಗಲು ಹಲವಾರು ಉಪದೇಶಗಳಿವೆ. ಸಾಧಕನು ತಾನು ಯಾವ ಉಪದೇಶವನ್ನು, ಯಾವ ದಾರಿಯನ್ನು ಅನುಸರಿಸಬೇಕೆಂಬ ಸಂದಿಗ್ಧತೆ ಉಂಟಾದಾಗ ಸರಿಯಾದ ಮತ್ತು ಸುಲಭವೂ, ನೇರವೂ ಆದ ದಾರಿಯನ್ನು ಗುರುವು ತೋರಿಸುತ್ತಾನಾದ್ದರಿಂದ ಗುರುವನ್ನು ಆಶ್ರಯಿಸಿ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಮೋಕ್ಷ ಮಾರ್ಗವನ್ನು ತೋರಿಸುವವರೇ ಗುರು ಮಾತ್ರ. ಗುರುವು ಶಿಷ್ಯನಿಗೆ ಮೋಕ್ಷ ಸಾಧನೆಯ ಮಾರ್ಗವನ್ನು ಉಪದೇಶಿಸಿ ಮಹಾತ್ಮನನ್ನಾಗಿ ಮಾಡುತ್ತಾನೆಂದು ತಾಲೂಕಿನ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ ಅರಣ್ಯದಲ್ಲಿ ಸಂಚಾರಿಸುವಾಗ ೧೦ ಸಾವಿರ ದಾರಿಯಿರುತ್ತದೆ. ಅರಣ್ಯದಲ್ಲಿ ನಡೆದದ್ದೇ ದಾರಿ. ಹೀಗೆ ಹತ್ತು ಹಲವು ದಾರಿಗಳನ್ನು ಕಂಡಾಗ ಸೇರಬೇಕಾದ ಗುರಿಯ ಬಗ್ಗೆ ಸಂದೇಹಕ್ಕೆ ಸಿಲುಕಿ ಮನಸ್ಸು ಚಂಚಲಗೊಳ್ಳುತ್ತದೆ. ಮೋಕ್ಷದ ರಹಸ್ಯವನ್ನು ಗುರುದೇವನೇ ಉಪದೇಶಿಸಬೇಕಾಗುವುದೆಂದು ಯೋಗಿ ನಾರೇಯಣ ಯತೀಂದ್ರರು ಸ್ಪಷ್ಟವಾಗಿ ತಿಳಿಸಿದ್ದಾರೆಂದು.

ಮೋಕ್ಷಕ್ಕೆ ಗುರುವನ್ನು ಆಶ್ರಯಿಸಿ

ಭವಬಂಧನದಿಂದ ಮುಕ್ತರಾಗಲು ಹಲವಾರು ಉಪದೇಶಗಳಿವೆ. ಸಾಧಕನು ತಾನು ಯಾವ ಉಪದೇಶವನ್ನು, ಯಾವ ದಾರಿಯನ್ನು ಅನುಸರಿಸಬೇಕೆಂಬ ಸಂದಿಗ್ಧತೆ ಉಂಟಾದಾಗ ಸರಿಯಾದ ಮತ್ತು ಸುಲಭವೂ, ನೇರವೂ ಆದ ದಾರಿಯನ್ನು ಗುರುವು ತೋರಿಸುತ್ತಾನಾದ್ದರಿಂದ ಗುರುವನ್ನು ಆಶ್ರಯಿಸಿ ಮೋಕ್ಷ ಮಾರ್ಗದ ರಹಸ್ಯವನ್ನು ಸಾಧಿಸಿ ಮಹಾತ್ಮನಾಗಬೇಕೆಂದರು.

ಸಂಗೀತ ಕಾರ್ಯಕ್ರಮ

ಆಂಧ್ರ, ತೆಲಂಗಾಣ, ತಮಿಳುನಾಡು ಇತರೆ ಸ್ಥಳಗಳಿಂದ ಬಂದಿದ್ದ ಸಹಸ್ರಾರು ಭಕ್ತಾದಿಗಳು ಗುರುಪೂಜೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಸಂಕೀರ್ತನಾ ಪ್ರದಕ್ಷಿಣೆ ನಡೆಸಲಾಯಿತು. ಇಂದಿನ ಸಂಗೀತ ಕಛೇರಿಗಳಲ್ಲಿ ಆನೂರು ಅನಂತಕೃಷ್ಣಶರ್ಮ ತಂಡದವರಿಂದ ಲಯಲಹರಿ ತಾಳವಾದ್ಯ, ಮಂಜುಳಾ ಜಗದೀಶ್, ಆಶಾಮಂಜುನಾಥ್, ಚಿಂತಾಮಣಿ ಸಂಗೀತ ಶಾಲೆ ಪದ್ಮಾವತಿ ಮತ್ತು ತಂಡ ಸೇರಿದಂತೆ ಮತ್ತಿತರ ತಂಡಗಳು ನಡೆಸಿಕೊಟ್ಟವು.

ಗುರುಪೂಜೆ ಕಾರ್ಯಕ್ರಮದಲ್ಲಿ ಸಚಿವರುಗಳಾದ ಡಾ.ಎಂ.ಸಿ.ಸುಧಾಕರ್, ಕೆ.ಎಚ್.ಮುನಿಯಪ್ಪ, ಮಾಜಿ ಶಾಸಕ ವಿ.ಮುನಿಯಪ್ಪ, ಡಾ.ಜೋಸ್ಯುಲ ಸದಾನಂದಶಾಸ್ತ್ರೀ, ಸಂಪಾದಕ ಡಾ.ಬಾಬುಕೃಷ್ಣಮೂರ್ತಿ, ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಮತ್ತಿತರರು ಉಪಸ್ಥಿತರಿದ್ದರು.