ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಹರವು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ, ನಿವೃತ್ತರಾದ ಮುಖ್ಯ ಶಿಕ್ಷಕ ಎಚ್.ಡಿ.ಸ್ವಾಮಿ ಅವರಿಗೆ ಶಾಲೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಸ್ವಾಮಿ ಹಾಗೂ ಪತ್ನಿ ರೇಣುಕಾಂಭ ಅವರನ್ನು ಪುಷ್ಪಾರ್ಚನೆ ಮೂಲಕ ವೇದಿಕೆಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಬಳಿಕ ನಿವೃತ್ತ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಧೀಶ ಶಾಮ್ ಪ್ರಸಾದ್ ಮಾತನಾಡಿ, ಶಿಕ್ಷಕ ಸ್ವಾಮಿ ಅವರು ಉತ್ತಮ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ವೃತ್ತಿ ಮಾಡಿರುವುದಕ್ಕೆ ಇಷ್ಟು ಜನ ಇಲ್ಲಿ ಸೇರಿರುವುದೇ ಸಾಕ್ಷಿಯಾಗಿದೆ ಎಂದರು.

ಡಿಡಿಪಿಐ ಜಿ.ಎ.ಲೋಕೇಶ್ ಮಾತನಾಡಿ, ಎಚ್.ಡಿ.ಸ್ವಾಮಿ ಅವರು ಪ್ರಾಮಾಣಿಕತೆ. ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ, ತಾಳ್ಮೆಯಿಂದ ಎಲೆಮರೆ ಕಾಯಿಯಂತೆ ಕೆಲಸ ಮಾಡಿ ವಯೋನಿವೃತ್ತಿ ಹೊಂದುತ್ತಿದ್ದಾರೆ. ಇವರ ನಿವೃತ್ತಿ ಬದುಕು ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.


ಗ್ರಾಮದ ರೈತ ಮುಖಂಡ ಎಚ್.ಎಲ್.ಪ್ರಕಾಶ್ ಮಾತನಾಡಿ, ಶಿಕ್ಷಕರು ನಮ್ಮ ಶಾಲೆಗೆ ಬಂದು ಸಾವಿರಾರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದಾರೆ ಎಂದರು.

ಸನ್ಮಾನಿತ ಶಿಕ್ಷಕ ಎಚ್.ಡಿ.ಸ್ವಾಮಿ ಮಾತನಾಡಿ, ಗ್ರಾಮಸ್ಥರ ಸಹಕಾರದಿಂದ ನಾನು 9 ವರ್ಷ, 8 ತಿಂಗಳು ಕೆಲಸ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಈ ವೇಳೆ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ, ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಎನ್.ಪ್ರಕಾಶ್ ಹಾಗೂ ಅಕ್ಷರ ದಾಸೋಹ ಅಧಿಕಾರಿ ರಂಗಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ಶಿಕ್ಷಕರಾದ ಕೆ.ಯುವರಾಜು, ಗಡ್ಡ ಚಂದ್ರಶೇಖರ್, ಮೈಸೂರು ವಿವಿ ಇಂಗ್ಲಿಷ್ ವಿಷಯದ ಮುಖ್ಯಸ್ಥ ರುದ್ರಮುನಿ, ಹೊಳೆನರಸೀಪುರ ಪ್ರಥಮ ದರ್ಜೆ ಕಾಲೇಜಿ ನ ಪ್ರಾಂಶುಪಾಲ ಡಿ.ಆರ್.ಮಾಕನಳ್ಳಿ ಮಾದಯ್ಯ, ಶ್ರೀರಂಗಪಟ್ಟಣ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಅಧಿತಿ ಪೆಟ್ರೋಲ್ ಬಂಕ್ ನ ಮಾಲೀಕ ಶಿವಕುಮಾರ್ ಸ್ವಾಮಿ ಹಾಗೂ ಶಾಲೆ ಎಸ್.ಡಿಎಂಸಿ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಊರಿನ ಮುಖ್ಯಸ್ಥರು, ಯುವಕರು, ವಿದ್ಯಾರ್ಥಿಗಳು, ಗಣ್ಯರು ಉಪಸ್ಥಿತರಿದ್ದು, ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿ ಶಿಕ್ಷಕ ದಂಪತಿಯನ್ನು ಅಭಿನಂದಿಸಿದರು.

ಶಾಲಾ ಶಿಕ್ಷಕರಾದ ಡಿ.ಶಿವಣ್ಣ ಸ್ವಾಗತಿಸಿ ಎಸ್.ಜೆ.ಕುಮಾರ್ ವಂದಿಸಿದರು. ಎಂ.ಎನ್.ಪಲ್ಲವಿ ಹಾಗೂ ಅಶ್ವಿನಿ ಹಾಜರಿದ್ದರು.