ಸಾರಾಂಶ
ವಾಣಿಜ್ಯ ಮಳಿಗೆಗಳ ಬಾಡಿಗೆ ಬಾಕಿ । ಜವಾಬ್ದಾರಿ ಮರೆತ ಸಿಬ್ಬಂದಿ: ಆರೋಪ
ಎಂ. ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿಇಲ್ಲಿನ ಕನಕಾಚಲಪತಿ ದೇವಸ್ಥಾನಕ್ಕೆ ಸಂಬಂಧಿಸಿದ ಖಾಲಿ ಜಾಗೆ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳು ಬಾಡಿಗೆ ಹಣ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದರಿಂದ ದೇಗುಲಕ್ಕೆ ಬರಬೇಕಾದ ಲಕ್ಷಾಂತರ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿದೆ.
ಮುಜರಾಯಿ ಇಲಾಖೆಯ ''ಎ'' ಗ್ರೇಡ್‌ನಲ್ಲಿರುವ ಈ ದೇವಸ್ಥಾನ ವ್ಯಾಪ್ತಿಗೆ ೧೮ ವಾಣಿಜ್ಯ ಮಳಿಗೆಗಳು ಹಾಗೂ ಖಾಲಿ ಜಾಗೆಯ ೨೫ ರಿಂದ ೩೦ ಡಬ್ಬಾ ಅಂಗಡಿಗಳಿವೆ. ಕಳೆದ ಎರಡು ವರ್ಷಗಳಿಂದ ಖಾಲಿ ಜಾಗೆಯಲ್ಲಿ ವಹಿವಾಟು ನಡೆಸುತ್ತಿರುವ ವ್ಯಾಪಾರಸ್ಥರು ಸುಮಾರು ೫ ಲಕ್ಷಕ್ಕೂ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೇ ವಾಣಿಜ್ಯ ಮಳಿಗೆಗಳ ಬಾಡಿಗೆಯೂ ೨ ಲಕ್ಷಕ್ಕೂ ಹೆಚ್ಚು ಬಾಕಿ ಇದೆ. ದೇವಸ್ಥಾನ ಸಮಿತಿಗೆ ಬರಬೇಕಾದ ಏಳೆಂಟು ಲಕ್ಷ ರೂ. ಆದಾಯಕ್ಕೆ ಕೊಕ್ಕೆ ಬಿದ್ದಂತಾಗಿದೆ.ದೇವಸ್ಥಾನದ ಸಿಬ್ಬಂದಿ ತಮ್ಮ ಜವಾಬ್ದಾರಿ ಮರೆತು ಕೆಲಸ ಮಾಡುತ್ತಿದ್ದಾರೆ. ಗಣಕಯಂತ್ರ ಕೊಠಡಿಯಲ್ಲಿ ಕುಳಿತ ಸಿಬ್ಬಂದಿ ಮೊಬೈಲ್‌ನಲ್ಲಿ ಲೀನವಾಗಿರುವುದರಿಂದ ತೆಂಗಿನಕಾಯಿ, ಆರತಿ ರಸೀದಿ ನೀಡದೆ ಭಕ್ತರನ್ನು ದೇಗುಲದೊಳಗೆ ಕಳುಹಿಸುತ್ತಾರೆ. ಅಭಿಷೇಕ, ಕುಂಕುಮಾರ್ಚನೆ, ಹರಕೆ ರಥ, ತೊಟ್ಟಿಲು, ಪಲ್ಲಕ್ಕಿ ಸೇವೆ, ಗರುಡೋತ್ಸವ ಸೇರಿದಂತೆ ವಿವಿಧ ಸೇವೆಗಳ ಬಗ್ಗೆ ಸರಿಯಾದ ಮಾಹಿತಿ ನೀಡದ ಸಿಬ್ಬಂದಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಅಲ್ಲದೇ ಸಮಿತಿಗೆ ಬರಬೇಕಾದ ಖಾಲಿ ಜಾಗೆ ಹಾಗೂ ವಾಣಿಜ್ಯ ಮಳಿಗೆಗಳ ಲಕ್ಷಾಂತರ ರೂ. ಹಣ ಪಾವತಿಯಾಗಿಲ್ಲ. ದೇವಸ್ಥಾನ ಸಿಬ್ಬಂದಿ ವೇತನಕ್ಕಾಗಿ ದೇಗುಲಕ್ಕೆ ಬರುತ್ತಾರೆ. ಆದರೆ, ಕೆಲಸ ಕೇಳಬೇಡಿ ಎನ್ನುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸಿಬ್ಬಂದಿ ಬೇಜವಾಬ್ದಾರಿ ಹಾಗೂ ದೇಗುಲದ ಹಣ ದುರ್ಬಳಕೆ ಮಾಡಿಕೊಂಡಿರುವ ಕುರಿತ ವಿಷಯ ಹಿಂದೊಮ್ಮೆ ತಹಸೀಲ್ದಾರ್ ಕಚೇರಿ ಮೆಟ್ಟಿಲೇರಿತ್ತು. ತಹಸೀಲ್ದಾರ ವಿಶ್ವನಾಥ ಮುರುಡಿ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡು, ಹಣ ಮರುಪಾವತಿ ಮಾಡುವಂತೆ ಆದೇಶಿಸಿದ್ದರು. ಇದೀಗ ಮತ್ತೆ ಸಿಬ್ಬಂದಿ ಬೇಜವಾಬ್ದಾರಿ, ಆದಾಯಕ್ಕೆ ಕೊಕ್ಕೆ ಬಿದ್ದಿರುವುದು ಮುನ್ನೆಲೆಗೆ ಬಂದಿದೆ.ತಹಸೀಲ್ದಾರರ ಆದೇಶ ಪಾಲಿಸದ ಸಿಬ್ಬಂದಿ ಮೇಲೆ ಜಿಲ್ಲಾಧಿಕಾರಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕನಕಾಚಲಪತಿ ದೇವಸ್ಥಾನದ ಸಿಬ್ಬಂದಿಯ ಬೇಜವಾಬ್ದಾರಿ ಹಾಗೂ ಹಣ ದುರ್ಬಳಕೆ ಕುರಿತು ಮಾಹಿತಿ ಇಲ್ಲ.ಈ ಬಗ್ಗೆ ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಾರೆ ತಹಸೀಲ್ದಾರ ವಿಶ್ವನಾಥ ಮುರುಡಿ.