ದಾವಣಗೆರೆ ಸಮಾವೇಶಕ್ಕೆ ನೂರು ಬಸ್‌ಗಳ ವ್ಯವಸ್ಥೆ: ಶ್ರೀನಿವಾಸ ರೆಡ್ಡಿ

| Published : Dec 19 2023, 01:45 AM IST

ಸಾರಾಂಶ

ವೀರಶೈವ ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿ ಸೇರ್ಪಡೆ ಸೇರಿದಂತೆ, ಜಾತಿ ಗಣತಿ ಬಹಿರಂಗಕ್ಕೆ ವಿರೋಧ ಕೂಡ ಸಮಾವೇಶದಲ್ಲಿ ಚರ್ಚೆಯಾಗಲಿದೆ.

ಹೊಸಪೇಟೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ದಾವಣಗೆರೆಯಲ್ಲಿ ಡಿ. 23 ಮತ್ತು 24ರಂದು ಮಹಾಸಭಾದ ೨೪ನೇ ಮಹಾ ಅಧಿವೇಶನ ನಡೆಯಲಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ 100 ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಆರು ಸಾವಿರಕ್ಕೂ ಅಧಿಕ ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಹಾಸಭಾದ ರಾಜ್ಯ ಕಾರ್ಯದರ್ಶಿ ಕೆ.ಬಿ. ಶ್ರೀನಿವಾಸ ರೆಡ್ಡಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಮತ್ತು ಕಾಂತರಾಜ್ ಆಯೋಗದ ವರದಿಯಲ್ಲಿ ಆಗಿರುವ ಲೋಪದೋಷ ಸರಿಪಡಿಸಲು ಆಗ್ರಹಿಸಲಾಗುವುದು. ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಮರುಪರಿಶೀಲಿಸಿ ವರದಿ ಸಿದ್ಧಪಡಿಸಬೇಕು. ಜಾತಿಗಣತಿ ಮರು ಸಮೀಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ದಾವಣಗೆರೆ ಸಮಾವೇಶದಲ್ಲಿ ಎರಡು ದಿನವೂ ಸಮಾಜದಿಂದ ವಸತಿ, ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ೫ರಿಂದ ೬ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಹರ್ಯಾಣ, ಪಂಜಾಬ್, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ದಿಲ್ಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದಲೂ ಸಮಾಜದವರು ಭಾಗವಹಿಸಲಿದ್ದಾರೆ. ಮೈಸೂರಿನ ಸುತ್ತೂರು ಮಠದ ಸುತ್ತೂರು ಶ್ರೀಗಳು ಸಮಾವೇಶಕ್ಕೆ ಚಾಲನೆ ನೀಡಲಿದ್ದು, ವಿವಿಧ ಗೋಷ್ಠಿಗಳು ಕೂಡ ನಡೆಯಲಿವೆ ಎಂದರು.

ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಮಹಾಸಭಾದ ತಾಲೂಕಾಧ್ಯಕ್ಷ ಎಲ್. ಬಸವರಾಜ್, ಮುಖಂಡರಾದ ಅಶ್ವಿನ್ ಕೊತ್ತಂಬರಿ, ಕೆ. ಚಂದ್ರಶೇಖರ್, ಕೋರಿಶೆಟ್ಟಿ ಲಿಂಗಪ್ಪ, ಶಿವಕುಮಾರ, ಕಾಶಿನಾಥಯ್ಯ, ಅಂಗಡಿ ಕತಗಲ್ ಶಂಕರ್ ಮತ್ತಿತರರಿದ್ದರು.