ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಂತ್ರಜ್ಞಾನದ ಜೊತೆಗೆ ಜ್ಞಾನ, ಬುದ್ಧಿ ಉಪಯೋಗಿಸಿದರೆ ರೈತರು ಇತರೇ ಕ್ಷೇತ್ರಗಳಿಗಿಂತ ಕೃಷಿ ಕ್ಷೇತ್ರದಲ್ಲಿ ರೈತರು ಹೆಚ್ಚು ಆದಾಯ ಗಳಿಸಬಹುದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲೂಕಿನ ಬೆಳ್ಳೂರಿನಲ್ಲಿ ಕರ್ನಾಟಕ ಯುವ ರೈತ ಸೇನೆ ಮತ್ತು ಪ್ರಜಾ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ, ಕೃಷಿ ಮೇಳ ಮತ್ತು ಯುವ ರೈತ ರತ್ನ ಪ್ರಶಸ್ತಿ ಪ್ರದಾನದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇಂದು ಹಳ್ಳಿಯಲ್ಲಿರುವ ಒಬ್ಬ ಬಡ ರೈತನ ಮಗ ಇಸ್ರೋ ಸೇರಿದಂತೆ ಅಮೆರಿಕಾದ ನಾಸಾ ಸಂಸ್ಥೆಯಲ್ಲಿ ವಿಜ್ಞಾನಿಯಾಗುತ್ತಿದ್ದಾರೆ. ಆದರೆ, ಕೃಷಿ ಬಗ್ಗೆ ರೈತ ಮಕ್ಕಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದರು.
ಎಲ್ಲ ಕ್ಷೇತ್ರಗಳಿಗೂ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆಗಳು ಬಂದಿರುವ ರೀತಿಯಲ್ಲಿ ನಮ್ಮ ಕೃಷಿ ಕ್ಷೇತ್ರದಲ್ಲಿ ಬಲ ತುಂಬಲು ಜನಮನ್ನಣೆ ಪಡೆದುಕೊಳ್ಳುವ ಮಟ್ಟಕ್ಕೆ ಆಕರ್ಷದಾಯವಾಗಿ ಸಂಶೋಧನೆಗಳು ಬಾರದಿರುವುದರಿಂದ ರೈತರ ಮಕ್ಕಳು ರೈತರಾಗುತ್ತಿಲ್ಲ ಎಂದರು.ರೈತರ ಮಕ್ಕಳು ಕೃಷಿ ಅವಲಂಬಿಸಲಾಗದೆ ಹೊರ ಹೋಗುತ್ತಿರುವುದನ್ನು ಅರಿತಿದ್ದ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳಿಗೆ ಆದಿಚುಂಚನಗಿರಿಯಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪಿಸಬೇಕೆಂಬುದು ಕೊನೆಯ ಆಸೆಯಾಗಿತ್ತು. ಈ ಕುರಿತು ಹಿಂದೊಮ್ಮೆ ಚಲುವರಾಯಸ್ವಾಮಿ ಅವರೊಂದಿಗೂ ಸಹ ಭೈರವೈಕ್ಯ ಶ್ರೀಗಳು ಚರ್ಚೆ ನಡೆಸಿದ್ದರು. ಆದರೆ, ವರ್ಷಕಾಲ ಅದು ಸಾಕಾರವಾಗರಲಿಲ್ಲ ಎಂದರು.
ಚಲುವರಾಯಸ್ವಾಮಿ ಅವರು ಕೃಷಿ ಸಚಿವರಾದ ಬಳಿಕ ಆದಿಚುಂಚನಗಿರಿ ಬಿಜಿಎಸ್ ಕೃಷಿ ವಿಜ್ಞಾನ ಕಾಲೇಜನ್ನು ಶ್ರೀಮಠಕ್ಕೆ ಮಂಜೂರು ಮಾಡಿಸಿಕೊಟ್ಟಿದ್ದಾರೆ. ಈ ವರ್ಷದಿಂದಲೇ ಅಸ್ತಿತ್ವಕ್ಕೆ ಬಂದಿದೆ ಎಂದರು.ಬಹಳ ಕಷ್ಟ ಪಟ್ಟು ದುಡಿಯುವ ರೈತರು ವರ್ಷದ ಕೊನೆಯಲ್ಲಿ ಕಡಿಮೆ ಉತ್ಪನ್ನ ನೋಡುವ ಬದಲು ಜ್ಞಾನ, ಬುದ್ಧಿ ಮತ್ತು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕೃಷಿಯಲ್ಲಿ ತೊಡಗಿದರೆ ಬೇರೆ ಕ್ಷೇತ್ರಗಳಲ್ಲಿ ಬರುವ ಆದಾಯಕ್ಕಿಂತ ಕಡಿಮೆ ಶ್ರಮದಲ್ಲಿ ಹೆಚ್ಚು ಆದಾಯ ಪಡೆಯಬಹುದು ಎಂದರು.
ರೈತರಿಗೆ ಪೂರಕ ಸಂಶೋಧನಾ ಭರಿತವಾದ ಆಧುನಿಕ ಜ್ಞಾನದ ಕೊರತೆಯಿದೆ. ಆ ಕೊರತೆ ನೀಗಿಸುವ ಕೆಲಸವನ್ನು ಶ್ರೀಮಠದ ವತಿಯಿಂದ ಮುಂದಿನ ದಿನಗಳಲ್ಲಿ ಕಾಲೇಜು ಮೂಲಕ ಮಾಡಲಾಗುವುದು. ಇದಕ್ಕೆ ಎಲ್ಲ ರೈತರು ಸಹಕಾರ ನೀಡಬೇಕು ಎಂದರು.18ಕೆಎಂಎನ್ ಡಿ25ನಾಗಮಂಗಲ ತಾಲೂಕು ಬೆಳ್ಳೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ, ಕೃಷಿ ಮೇಳ ಹಾಗೂ ಯುವ ರೈತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಜೊತೆಗೂಡಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.