ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಡಿಸೆಂಬರ್ 24ರಂದು ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಸೀರೆಯುಟ್ಟು ಬರಿಗಾಲಿನಲ್ಲಿ ಓಡುವ ಓಟಗಾರ್ತಿ ಎಂದೇ ಹೆಸರಾಗಿರುವ ಪ್ರೀತಿ ಮನೀಶ್ 21ಕಿಮೀ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದು ಮಹಿಳೆಯರಲ್ಲಿ ಹುಮ್ಮಸ್ಸು ಮೂಡಿಸಿದೆ.ಹುಬ್ಬಳ್ಳಿ ಮೂಲದ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಇವರು, ಬ್ಯುಸಿನೆಸ್ ಮ್ಯಾನೇಜಮೆಂಟ್ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ವಿಶೇಷವಾಗಿ ಎನ್ ಜಿಒ ಮೂಲಕ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಹಲವು ಶಾಲೆ ಮತ್ತು ಕಾಲೇಜುಗಳು ಹಾಗೂ ಮಹಿಳಾ ಗುಂಪುಗಳಲ್ಲಿ ಪ್ರೌಢಾವಸ್ಥೆ, ಸುಸ್ಥಿರ ಮುಟ್ಟಿನ ಕುರಿತು ಹಾಗೂ ಋತುಚಕ್ರದ ಬಗ್ಗೆ ಯವತಿಯರು ಹಾಗೂ ಮಹಿಳೆಯಲ್ಲಿ ಅರಿವು ಮೂಡಿಸುವ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾರೆ. ಭಾರತೀಯರು ಸೀರೆ ಉಡುವುದನ್ನು ಪ್ರೋತ್ಸಾಹಿಸಲು ಮತ್ತು ಬರಿಗಾಲಿನಲ್ಲಿಯೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಲು ಅವರು ಅಪ್ಪಟ ಭಾರತೀಯ ಮಹಿಳೆಯಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡುವುದನ್ನು ರೂಢಿಯಾಗಿಸಿಕೊಂಡಿದ್ದಾರೆ. ಅಲ್ಲದೆ, ಈಗಾಗಲೇ ಹಲವಾರು ಮ್ಯಾರಾಥಾನ್‌ಗಳಲ್ಲಿ ಪಾಲ್ಗೊಂಡು ಬರಿಗಾಲ ಓಟಗಾರ್ತಿ ಎಂದೇ ಹೆಸರು ಮಾಡಿದ್ದಾರೆ.
ದೂರದ ಓಟಗಳಲ್ಲಿ ಏಕಾಂಗಿಯಾಗಿ ಓಡುವುದನ್ನು ಹೆಚ್ಚಾಗಿ ಇಷ್ಟಪಡುವ ಅವರು, ಓಟ ಮತ್ತು ವ್ಯಾಯಾಮದ ಮೂಲಕ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವ ಸಂಕಲ್ಪ ಮಾಡಿದ್ದಾರೆ. ಶಿಸ್ತುಬದ್ಧ ಜೀವನಕ್ಕೆ ಇತತರಿಗೆ ಮಾದರಿಯಾಗಿ, ಪ್ರತಿದಿನ ನಸುಕಿನ ಜಾವ 3.30ಗಂಟೆಗೆ ಏಳುತ್ತಾರೆ. ವಾರದಲ್ಲಿ ಐದು ದಿನ ಓಟ ಮತ್ತು ವ್ಯಾಯಾಮಗಳಿಗಾಗಿ ಮೀಸಲಿಟ್ಟಿದ್ದಾರೆ. 10 ವರ್ಷದ ಮಗುವಿನ ತಾಯಿಯಾಗಿರುವ ಪ್ರೀತಿ ಮನೀಶ್ ಅವರು ತಾಯಿ, ಹೆಂಡತಿ, ಸೊಸೆ ಮತ್ತು ಮಗಳ ರೂಪದಲ್ಲಿ ಎಲ್ಲ ಸಂಬಂಧಗಳನ್ನು ವೃತ್ತಿಪರವಾಗಿ ನಿಭಾಯಿಸುವ ದಿಟ್ಟ ಮಹಿಳೆಯಾಗಿದ್ದಾರೆ.ಕಾರ್ಪೊರೇಟ್ ಶೈಲಿಯಿಂದ ಹೊರ ಬಂದಿರುವ ಅವರು, ಸ್ವಸ್ಥ ಆರೋಗ್ಯ ಹೊಂದಲು ಅಲಂಕಾರಿಕ ತಾಲೀಮು, ವಿದೇಶಿ ಶೈಲಿಯ ಬಟ್ಟೆಗಳನ್ನು ಹಾಕಿಕೊಳ್ಳುವ ಅಗತ್ಯವಿಲ್ಲ. ತಾಯಿಯಾಗಿದ್ದರೂ ಅಪ್ಪಟ ಭಾರತೀಯ ಶೈಲಿಯ ಸೀರೆಯುಟ್ಟು, ಬರಿಗಾಲಿನಲ್ಲಿ ಓಡಬಹುದು. ಈ ಮೂಲಕ ಕುಟುಂಬ ನಿರ್ವಹಣೆಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬಹುದು ಎಂಬುದನ್ನು ತಮ್ಮ ದಿನನಿತ್ಯದ ಚಟುವಟಿಕೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಪ್ರೀತಿ ಮನೀಶ್ ಅವರು ವಿಜಯಪುರ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೊಳ್ಳಲು ಈಗಾಗಲೇ ಹೆಸರು ನೋಂದಾಯಿಸುವ ಮೂಲಕ ಇತರ ಹೆಣ್ಣುಮಕ್ಕಳಿಗೆ ಮಾದರಿಯಾಗಲಿದ್ದಾರೆ.