ಶಿರಸಿ ಸರ್ಕಾರಿ ಹೈಟೆಕ್ ಆಸ್ಪತ್ರೆಗಾಗಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ

| Published : Jan 14 2025, 01:04 AM IST

ಶಿರಸಿ ಸರ್ಕಾರಿ ಹೈಟೆಕ್ ಆಸ್ಪತ್ರೆಗಾಗಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿಯಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಆಗಲೇಬೇಕು. ಈ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸುವುದಕ್ಕಾಗಿಯೇ ಜಿಲ್ಲೆಯ ಬಿಜೆಪಿ ಹಿರಿಯ ನಾಯಕರೆಲ್ಲರೂ ಇಲ್ಲಿ ಬಂದಿದ್ದೇವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶಿರಸಿ: ಹೈಟೆಕ್ ಸರ್ಕಾರಿ ಆಸ್ಪತ್ರೆಗಾಗಿ ಅನಂತಮೂರ್ತಿ ಹೆಗಡೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲವಿದ್ದು, ಸಮಾಜಕ್ಕೆ ಒಳ್ಳೆಯದಾಗುವ ಯಾವುದೇ ನಿರ್ಣಯ ಅವರು ಕೈಗೊಂಡರೂ ಬೆಂಬಲಿಸುತ್ತೇನೆ ಮತ್ತು ಜಿಲ್ಲಾ ಬಿಜೆಪಿ ಅವರ ಬೆನ್ನಿಗೆ ನಿಲ್ಲುತ್ತದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.ಸೋಮವಾರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ, ಮಾತನಾಡಿದರು.ಶಿರಸಿಯಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಆಗಲೇಬೇಕು. ಈ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸುವುದಕ್ಕಾಗಿಯೇ ಜಿಲ್ಲೆಯ ಬಿಜೆಪಿ ಹಿರಿಯ ನಾಯಕರೆಲ್ಲರೂ ಇಲ್ಲಿ ಬಂದಿದ್ದೇವೆ. ನಾನು ಸಭಾಧ್ಯಕ್ಷನಾಗಿದ್ದಾಗ ಇಲ್ಲಿ ೨೫೦ ಹಾಸಿಗೆ ಹೈಟೆಕ್ ಆಸ್ಪತ್ರೆಯನ್ನು ಮಂಜೂರಿ ಮಾಡಿಸಿದ್ದೆ. ಅದಕ್ಕೆ ಅವಶ್ಯವಿರುವ ₹೧೮೫ ಕೋಟಿ ಅನುದಾನವನ್ನೂ ಮಂಜೂರಿ ಮಾಡಲಾಗಿತ್ತು. ವೇಗವಾಗಿ ನಡೆಯುತ್ತಿದ್ದ ನಿರ್ಮಾಣ ಕಾರ್ಯ ಕಾಂಗ್ರೆಸ್ ಸರ್ಕಾರದ ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದರು.

ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿ, ಶಿರಸಿ ಹೈಟೆಕ್ ವಿಚಾರದಲ್ಲಿ ಕ್ಷೇತ್ರದ ಶಾಸಕರು ಸತ್ಯವನ್ನು ಜನರೆದುರು ಹೇಳಬೇಕು. ನಮ್ಮೆಲ್ಲರ ಆಗ್ರಹಕ್ಕೆ, ಮಾಧ್ಯಮದ ವರದಿಗೆ ಶಾಸಕರು ಸುಮ್ಮನಿರುವುದು ಅವರಿಗೆ ಶೋಭೆಯಲ್ಲ. ಆಸ್ಪತ್ರೆಯ ಅನುದಾನದಲ್ಲಿ ಯಾವುದೇ ರೀತಿಯ ಕಡಿತ ಇರದೇ, ಈ ಹಿಂದೆ ಮಂಜೂರಾದಂತೆ ಹೈಟೆಕ್ ಆಸ್ಪತ್ರೆಯ ಸೌಲಭ್ಯ ಎಲ್ಲ ಜನರಿಗೂ ದೊರೆಯುವಂತಾಗಬೇಕು ಎಂದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಆರೋಗ್ಯದ ವಿಷಯದಲ್ಲಿ ರಾಜ್ಯ ಸರ್ಕಾರ ಅನಾಸಕ್ತಿ ತೋರುವುದು ಸರಿಯಲ್ಲ. ಆರೋಗ್ಯ ಎಲ್ಲ ಜನರ ಹಕ್ಕು. ಜನರಿಗೆ ಅತ್ಯಾವಶ್ಯಕ ಇರುವ ಹೈಟೆಕ್ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಕೂಡಲೇ ಮಂಜೂರು ಮಾಡಬೇಕು. ಅನಂತಮೂರ್ತಿ ಹೆಗಡೆ ನಡೆಸುತ್ತಿರುವ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಸದಾ ಇದೆ ಎಂದರು.

ಸಾಮಾಜಿಕ ಕಾರ್ಯಕರ್ತ ಗಂಗಾಧರ ಹೆಗಡೆ, ಹುಳಸೇಮಕ್ಕಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಸಾಮಾಜಿಕ ಕಾರ್ಯಕರ್ತ ಕೇಶವ ಮರಾಠೆ ಮಾತನಾಡಿದರು. ನಗರದ ಬಿಡ್ಕಿಬೈಲಿನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಶಿವಾಜಿ ಚೌಕದಲ್ಲಿರುವ ಛತ್ರಪತಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಮೆರವಣಿಗೆಯಲ್ಲಿ ಸಿದ್ದಾಪುರ, ಬನವಾಸಿ, ಯಲ್ಲಾಪುರ, ಮುಂಡಗೋಡ ಸೇರಿದಂತೆ ಸಾಕಷ್ಟು ಹಳ್ಳಿಗಳಿಂದಲೂ ಸಾರ್ವಜನಿಕರು ಪಕ್ಷಾತೀತವಾಗಿ ಭಾಗಿಯಾಗಿ, ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಪ್ರಮುಖರಾದ ಜಯಶೀಲ ಗೌಡ, ಹಾಲಪ್ಪ ಜಕ್ಕಣ್ಣನವರ್, ಮಂಜುನಾಥ ಪಾಟೀಲ್, ರೇಖಾ ಹೆಗಡೆ, ಶಿವಾನಂದ ದೇಶಳ್ಳಿ, ಚಿದಾನಂದ ಹರಿಜನ, ಅನಿಲ ನಾಯಕ್, ಹರೀಶ ಕರ್ಕಿ, ಅಮಿತ್ ಶೇಟ್, ಶ್ರೀಪಾದ ರಾಯ್ಸದ್, ಗಣಪತಿ ನಾಯ್ಕ, ಶೋಭಾ ನಾಯ್ಕ, ಮಹೇಶ ಕಡೆಮನೆ, ಗುರುಪ್ರಸಾದ ಅಂಬ್ಲಿಹೊಂಡ, ಆದಿತ್ಯ, ಕಾರ್ತಿಕ ಅಂಬ್ಲಿಹೊಂಡ ಸೇರಿದಂತೆ ಹಲವರು ಇದ್ದರು.ಬಿಜೆಪಿ ಮುಖಂಡರ ಬೆಂಬಲ

ಅನಂತಮೂರ್ತಿ ಹೆಗಡೆ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ, ಮಾಜಿ ಶಾಸಕರಾದ ಶಿವಾನಂದ ನಾಯ್ಕ, ವಿವೇಕಾನಂದ ವೈದ್ಯ, ಕೆಡಿಸಿಸಿ ಮಾಜಿ ಅಧ್ಯಕ್ಷ ಎಸ್.ಎಲ್. ಘೋಟ್ನೇಕರ್, ಬಿಜೆಪಿ ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಶಿರಸಿ ನಗರಾಧ್ಯಕ್ಷ ಆನಂದ ಸಾಲೇರ್, ಸಿದ್ದಾಪುರ ತಾಲೂಕು ಅಧ್ಯಕ್ಷ ತಿಮ್ಮಪ್ಪ ಮಡಿವಾಳ, ಕುಮಟಾ ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಅಂಕೋಲಾ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಇತರರು ಬೆಂಬಲ ನೀಡಿದರು.ಶಾಸಕರು ಬಂದ ಬಳಿಕ ಮತ್ತೆ ಹೋರಾಟ

ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತರಿಗೆ ಉಪವಾಸ ನಿರತ ಹೋರಾಟಗಾರರು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಭೀಮಣ್ಣ ನಾಯ್ಕ ಅವರಿಗೂ ಮನವಿ ಸಲ್ಲಿಸಿದರು. ಶಾಸಕರು ಕ್ಷೇತ್ರದಲ್ಲಿ ಇಲ್ಲದ ಕಾರಣ ಉಪವಾಸವನ್ನು ಕೈಬಿಟ್ಟು, ಮುಂದಿನ ದಿನದಲ್ಲಿ ಅವರು ಕ್ಷೇತ್ರಕ್ಕೆ ಬಂದ ನಂತರ ನಿರಂತರವಾಗಿ ಎಚ್ಚರಿಸುವ ಕೆಲಸ ನಡೆಸಲು ಹೋರಾಟಗಾರರು ತೀರ್ಮಾನಿಸಿದರು.