ಸಾರಾಂಶ
ಯಲ್ಲಾಪುರ: ಪಟ್ಟಣದ ಎಪಿಎಂಸಿ ಎದುರಿಗೆ ಅರಣ್ಯ ಇಲಾಖೆಯು ಕೋಟ್ಯಂತರ ರು. ವೆಚ್ಚದಲ್ಲಿ ಐದು ವರ್ಷಗಳ ಹಿಂದೆ ಮಹತ್ವಾಕಾಂಕ್ಷೆಯಿಂದ ನಿರ್ಮಿಸಿದ್ದ ಸಸ್ಯೋದ್ಯಾನ ಹಲವು ಅವ್ಯವಸ್ಥೆಯಿಂದ ನರಳುತ್ತಿದೆ.
ಈ ಸಸ್ಯೋದ್ಯಾನವು ಪಟ್ಟಣದ ನಾಗರಿಕರು, ಮಕ್ಕಳು ಮತ್ತು ಪಟ್ಟಣಕ್ಕೆ ಆಗಮಿಸಿದ ವಿವಿಧ ಪ್ರದೇಶಗಳ ಸಾರ್ವಜನಿಕರನ್ನು ಆಕರ್ಷಿಸುವ ಮೂಲಕ ಉದ್ದೇಶ ಸಾಫಲ್ಯಗೊಂಡಿದೆ. ಇಲ್ಲಿ ಮಕ್ಕಳಿಗೆ ಆಟವಾಡಲು ಅಗತ್ಯವಿರುವ ಜೋಕಾಲಿ, ಜಾರುಗುಂಡಿ ಮತ್ತಿತರ ಪರಿಕರಗಳು ಮಕ್ಕಳ ಮನ ಸೆಳೆಯುತ್ತಿವೆ. ಉದ್ಯಾನವನದಲ್ಲಿ ಬೆಳೆಸಲಾದ ವಿವಿಧ ಜಾತಿಯ ಗಿಡ, ಮರಗಳು ನೆರಳಿನೊಂದಿಗೆ ಬಿರುಬೇಸಿಗೆಯ ಧಗೆಯನ್ನು ತಣಿಸುವ ತಾಣವೂ ಆಗಿದೆ.ಈ ನಡುವೆಯೂ ಇಲಾಖೆಯ ಗಮನಕ್ಕೆ ಬಂದೋ ಅಥವಾ ಬಾರದೆಯೋ ಉಂಟಾಗಿರುವ ಕೆಲವು ನ್ಯೂನತೆಗಳಿಂದಾಗಿ ಸಂಬಂಧಿಸಿದ ಇಲಾಖೆಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.
ಪಟ್ಟಣ ಪಂಚಾಯಿತಿ ಆಡಳಿತವು ಉದ್ಯಾನದಲ್ಲಿ ಕಸದ ತೊಟ್ಟಿ ನಿರ್ಮಿಸಿದ್ದು, ಇದರೊಳಗೆ ಸಂಗ್ರಹವಾಗುವ ಕಸವನ್ನು ಕಾಲಕಾಲಕ್ಕೆ ವಿಲೇವಾರಿ ಮಾಡದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಉದ್ಯಾನವನಕ್ಕೆ ಭೇಟಿ ನೀಡುವವರ ಮನಸ್ಸಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದೆ.ಎಲ್ಲೆಂದರಲ್ಲಿ ಹರಡಿ ಬಿದ್ದಿರುವ ಪ್ಲಾಸ್ಟಿಕ್ ತಟ್ಟೆ, ಲೋಟ, ಕಾಗದ ಇನ್ನಿತರ ಕಸಗಳಿಂದಾಗಿ ಉದ್ಯಾನವನದಲ್ಲಿ ಅನಾರೋಗ್ಯಕರ ವಾತಾವರಣ ನಿರ್ಮಾಣಗೊಳ್ಳುವಂತಾಗಿದೆ. ಸಸ್ಯೋದ್ಯಾನದ ನಿರ್ವಹಣೆ ಮಾಡುತ್ತಿರುವ ಪಪಂ ಸಿಬ್ಬಂದಿ ಈ ಕುರಿತು ತಕ್ಷಣ ಸ್ಪಂದಿಸಿ, ಕ್ರಮ ಕೈಗೊಳ್ಳುವ ಅಗತ್ಯವಿದೆ.
ಬೆಳಗ್ಗೆ ಮತ್ತು ಸಂಜೆಯ ಎರಡೂ ಹೊತ್ತು ಉದ್ಯಾನವನ ತೆರೆದಿರುವ ವೇಳೆಯನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಲಾಗಿದ್ದರೂ ಬೆಳಗಿನ ವೇಳೆಯಲ್ಲಿ ಉದ್ಯಾನವನ ತೆರೆಯುವುದೇ ಇಲ್ಲ! ಈ ಕಾರಣದಿಂದಾಗಿ ಮುಂಜಾನೆ ವಾಯುವಿಹಾರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಬೇಸರ ಮೂಡಿದೆ. ಆದ್ದರಿಂದ ಸಾರ್ವಜನಿಕರ ಆಶಯದಂತೆ ಉದ್ಯಾನವನವನ್ನು ಎರಡೂ ಹೊತ್ತು ತೆರೆದಿಡುವ ಅಗತ್ಯವಿದೆ.ಸಸ್ಯೋದ್ಯಾನಕ್ಕೆ ಆಗಮಿಸುವ ಸಾರ್ವಜನಿಕರು ಉದ್ಯಾನವನದ ಎದುರಿಗೆ ವಾಹನ ನಿಲುಗಡೆಯನ್ನು ಬೇಕಾಬಿಟ್ಟಿಯಾಗಿ ಮಾಡುತ್ತಿದ್ದಾರೆ. ಇಲ್ಲಿ ಕುಳಿತುಕೊಳ್ಳಲೆಂದು ನಿರ್ಮಿಸಿದ ಆಸನಗಳ ಸುತ್ತಲೂ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಭರ್ತಿಯಾಗುತ್ತಿರುವ ಕಾರಣ ಈ ಸ್ಥಳದಲ್ಲಿ ವಿಶ್ರಾಂತಿ ಪಡೆಯಲೆಂದು ಬರುವ ಹಿರಿಯ ನಾಗರಿಕರಾದಿಯಾಗಿ ಎಲ್ಲರೂ ಪರದಾಡುವಂತಾಗಿದೆ.
ಉತ್ತಮವಾಗಿ ಫೇವರ್ಸ್ ಹಾಕಿದ ಸ್ಥಳವನ್ನು ಕುಳಿತುಕೊಳ್ಳಲು ಮೀಸಲಿರಿಸಿ; ವಾಹನ ನಿಲುಗಡೆಗಾಗಿ ರಸ್ತೆಯ ಬದಿಗೆ ಸ್ಥಳ ನಿಗದಿಗೊಳಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಜತೆಗೆ ಪಾರ್ಕಿನ ಎದುರಿಗೆ ಫೇವರ್ಸ್ ಅಳವಡಿಸಲಾದ ಸ್ಥಳದಲ್ಲಿ ಮತ್ತಷ್ಟು ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕೆಂಬುದು ಹಿರಿಯ ನಾಗರಿಕರ ಒತ್ತಾಸೆಯಾಗಿದೆ. ಇತ್ತೀಚೆಗೆ ಉದ್ಯಾನವನಕ್ಕೆ ಆಗಮಿಸುವವರ ಸಂಖ್ಯೆ ಅಧಿಕವಾಗಿದ್ದು, ಕುಳಿತುಕೊಳ್ಳಲು ಆಸನಗಳಿಲ್ಲದಿರುವುದು ಹಿರಿಯ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.ಸೌಲಭ್ಯ ಕಲ್ಪಿಸಲಿ
ಸ್ವಚ್ಛತೆ, ಸೂಕ್ತ ನಿರ್ವಹಣೆ, ವಾಹನ ನಿಲುಗಡೆಗೆ ವ್ಯವಸ್ಥೆ, ಆಸನ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಲ್ಪಿಸಿದರೆ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಸ್ಯೋದ್ಯಾನ ನಿರ್ಮಾಣದ ಉದ್ದೇಶ ಈಡೇರಲು ಸಾಧ್ಯ. ಈ ಕುರಿತು ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸುವಂತೆಯೂ, ಈಗಾಗಲೇ ಸಸ್ಯೋದ್ಯಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಓರ್ವ ಕಾವಲುಗಾರನ ಜತೆ ಮತ್ತೋರ್ವನನ್ನು ನಿಯೋಜಿಸುವಂತೆ ಹಿರಿಯ ನಾಗರಿಕರು ವಿನಂತಿಸಿದ್ದಾರೆ.