ಸಾರಾಂಶ
ಇತ್ತೀಚಿಗೆ ಇನ್ನೋವಾ ಕಾರ್‌ನಿಂದ ಡಿಕ್ಕಿ ಹೊಡೆದು ನ್ಯಾಯವಾದಿಯನ್ನು ಎಳೆದಾಡಿಕೊಂಡು ಹೋಗಿರುವ ದೃಶ್ಯ ಇಡೀ ನಗರವನ್ನು ಬೆಚ್ಚಿಬೀಳಿಸಿತ್ತು. ಅಪಘಾತ ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದ್ದು ಅತ್ಯಂತ ಚಾಣಾಕ್ಷತನದಿಂದ ತನಿಖೆ ನಡೆಸಿರುವ ವಿಜಯಪುರ ಜಿಲ್ಲಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಇತ್ತೀಚಿಗೆ ಇನ್ನೋವಾ ಕಾರ್‌ನಿಂದ ಡಿಕ್ಕಿ ಹೊಡೆದು ನ್ಯಾಯವಾದಿಯನ್ನು ಎಳೆದಾಡಿಕೊಂಡು ಹೋಗಿರುವ ದೃಶ್ಯ ಇಡೀ ನಗರವನ್ನು ಬೆಚ್ಚಿಬೀಳಿಸಿತ್ತು. ಅಪಘಾತ ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದ್ದು ಅತ್ಯಂತ ಚಾಣಾಕ್ಷತನದಿಂದ ತನಿಖೆ ನಡೆಸಿರುವ ವಿಜಯಪುರ ಜಿಲ್ಲಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿ ಅದರಲ್ಲೂ ಈ ಪ್ರಕರಣದ ಪ್ರಮುಖ ಸೂತ್ರಧಾರ ಎನ್ನಲಾಗಿರುವ ತುಳಸೀರಾಮ ಪಂಡಿತ ಹರಿಜನ, ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ ಎಂದು ಗುರುತಿಸಲಾಗಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.
ಕಳೆದ ಆ.೮ ರಂದು ನ್ಯಾಯವಾದಿಯ ಮೇಲೆ ಇನ್ನೋವಾ ಕಾರು ಹಾಯಿಸಿದ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿತ್ತು ಇದು ಕೊಲೆ ಸಾಧ್ಯತೆಯ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪರಿಣಾಮ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ತಿಳಿಸಿದರು.ಆ.೮ ರಂದು ಕೊಲೆಗೀಡಾಗಿರುವ ನ್ಯಾಯವಾದಿ ರವಿ ಮೇಲಿನಕೇರಿ ಅವರು ನ್ಯಾಯಾಲಯದಿಂದ ತಮ್ಮ ಸ್ಕೂಟಿಯ ಮೇಲೆ ಬಾಗಲಕೋಟ ಕ್ರಾಸ್ ಕಡೆಗೆ ಹೋಗುತ್ತಿರುವಾಗ ಪಾಲಿಟೆಕ್ನಿಕ್ ಹಾಸ್ಟೇಲ್ ಹತ್ತಿರ ನಂಬರ್ ಪ್ಲೇಟ್ ಇಲ್ಲದ ಇನೋವಾ ಗಾಡಿಯಲ್ಲಿ ಬಂದು ವಕೀಲ ರವಿ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ, ಪರಿಣಾಮವಾಗಿ ಕೊಲೆಗೀಡಾಗಿರುವ ನ್ಯಾಯವಾದಿ ರವಿ ಗಾಡಿಯ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದರು. ಆಗ ಆ ದುಷ್ಕರ್ಮಿಗಳು ತಮ್ಮ ಇನೋವಾ ಗಾಡಿಯನ್ನು ನಿಲ್ಲಿಸದೇ ಗಾಡಿಯ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ರವಿಯನ್ನು ಹಾಗೆಯೇ ಎಳೆಯಿಸಿಕೊಂಡು ಮುಂದೆ ಹೋಗಿ ಬಲಕ್ಕೆ ತಿರುಗಿ ಬಿಎಲ್‌ಡಿಇ ಆಯುರ್ವೇದ ಕಾಲೇಜಿನ ಮುಂದೆ ಹಾಯ್ದು ಮನಗೂಳಿ ಅಗಸಿಯಿಂದ ಬಲಕ್ಕೆ ತಿರುಗಿ ಮನಗೂಳಿ ಅಗಸಿ ಕಡೆಗೆ ಹೋಗುವ ರಸ್ತೆಯ ಮೇಲೆ ಹೊರಟಾಗ ಇನೋವಾ ಗಾಡಿಯ ಕೆಳಗೆ ಸಿಕ್ಕಿಕೊಂಡಿದ್ದ ವಕೀಲ ರವಿ ಇವರ ಶವವು ಮನಗೂಳಿ ರಸ್ತೆಯ ಮೇಲೆ ಇರುವ ಸ್ಮಶಾಣದ ಹತ್ತಿರ ರಸ್ತೆಯ ಮೇಲೆ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಮೃತ ರವಿ ಈತನ ಸಹೋದರ ಪ್ರಕಾಶ ಮೇಲಿನಕೇರಿ ಕೊಟ್ಟ ದೂರಿನ ಮೇಲೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.ಆದರೆ, ಈ ಪ್ರಕರಣದ ತನಿಖಾ ಕಾಲದಲ್ಲಿ ಇದು ರಸ್ತೆ ಅಪಘಾತವಾಗಿರದೇ ಒಂದು ಕೊಲೆ ಪ್ರಕರಣವೆಂದು ಪತ್ತೆ ಹಚ್ಚಿ ಈ ಕೊಲೆಯ ಪ್ರಮುಖ ಸೂತ್ರಧಾರ ತುಳಸಿರಾಮ ಪಂಡಿತ ಹರಿಜನ ಎನ್ನುವವನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಲಾಯಿತು ಎಂದರು.ವಿಚಾರಣೆ ವೇಳೆ ಆತ ಹೇಳಿದ ವಿವರಣೆಯಂತೆ ಪ್ರಮುಖ ಆರೋಪಿ ತುಳಸೀರಾಮ ಹಾಗೂ ರವಿಗೂ ಕಳೆದ ನಾಲ್ಕೈದು ತಿಂಗಳುಗಳ ಹಿಂದೆ ಜಗಳವಾಗಿ ರವಿಯು ತನ್ನ ಸಹೋದರರ ಜೊತೆ ಸೇರಿ ತನಗೆ ಹೊಡೆದು ಅವಮಾನ ಪಡಿಸಿದ್ದಲ್ಲದೇ ತನ್ನನ್ನು ಕೊಲೆ ಮಾಡುವುದಾಗಿ ಹೇಳುತ್ತ ತಿರುಗಾಡುತ್ತಿದ್ದನು. ಹಾಗೂ ಈಗ ಸುಮಾರು ೨೦ ದಿನಗಳ ಹಿಂದೆ ರವಿ ಮೇಲಿನಕೇರಿ ಇವನು ತನ್ನ ಸಹೋದರರ ಜೊತೆ ಸೇರಿ ಅಲೆಕ್ಸ್ನನ್ನು ಮನೆಯಿಂದ ಕಿಡ್ನಾಪ್ ಮಾಡಿಕೊಂಡು ಒಯ್ದು ಹೊಡೆದು, ತುಳಸಿರಾಮನನ್ನು ನಿನ್ನನ್ನು ಕೊಲೆ ಮಾಡುತ್ತೇವೆ, ತುಳಸಿರಾಮನಿಗೆ ಹೇಳು ಎಂದು ಧಮಕಿ ಹಾಕಿದ್ದರು. ಆದ್ದರಿಂದ ತಾನು ತನ್ನ ಸ್ನೇಹಿತರಾದ ಅಲೆಕ್ಸ್ ಗೊಲ್ಲರ, ಪ್ರಕಾಶ ಗೊಲ್ಲರ, ಷಣ್ಮುಖ ನಡುವಿನಕೇರಿ, ಜುಮನಾಳದ ಸದ್ದಾಮ್, ಮುರುಗೇಶ ಉಳ್ಳಾಗಡ್ಡಿ, ಅಮೀನ ಶೇಖ್ ಇವರ ಜೊತೆ ಸೇರಿ ರವಿ ಮೇಲಿನಕೇರಿ ಇವನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದಾರೆ ಎಂದು ಮಾಹಿತಿ ಬಂದಿದೆ ಎಂದರು.