ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಕೀಲರು ಇತಿಹಾಸ ಸೃಷ್ಟಿಸಿದ್ದಾರೆ. ಹೀಗಾಗಿ ವೃತ್ತಿಯಲ್ಲಿರುವ ತೊಡಗಿರುವ ವಕೀಲರ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಸ್ತುತ ಸಮಾಜಕ್ಕೆ ಪಾರದರ್ಶಕವಾಗಿ ನ್ಯಾಯ ಒದಗಿಸುವಂತಹ ವೃತ್ತಿಪರ ವಕೀಲರ ಅವಶ್ಯಕತೆಯಿದ್ದು, ರಾಜ್ಯದ ಯುವ ವಕೀಲರಿಂದ ನ್ಯಾಯಾಲಯಗಳು ಇದನ್ನು ನಿರೀಕ್ಷಿಸುತ್ತಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಹೇಳಿದರು.ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ರಾಜ್ಯ ವಕೀಲರ ಪರಿಷತ್ ಬೆಂಗಳೂರು, ಜಿಲ್ಲಾ ನ್ಯಾಯಾಂಗ ಹಾವೇರಿ ಹಾಗೂ ಸ್ಥಳೀಯ ನ್ಯಾಯವಾದಿಗಳ ಸಂಘ ಇವುಗಳ ಸಹಯೋಗದೊಂದಿಗೆ 3 ದಿನಗಳ ಕಾಲ ಆಯೋಜಿಸಿರುವ ‘ಜಿಲ್ಲಾಮಟ್ಟದ ಕಾನೂನು ಕಾರ್ಯಾಗಾರ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ನ್ಯಾಯಾಂಗ ವ್ಯವಸ್ಥೆ ಕೇವಲ ಎವಿಡೆನ್ಸ್ ಆ್ಯಕ್ಟ್ ಆಧಾರದ ಮೇಲೆಯೇ ನಡೆಯುತ್ತಿದೆ. ವಕೀಲರು ಕೋರ್ಟ್‌ಗಳಿಗೆ ನೀಡುವ ಸಾಕ್ಷಿ ಅಧಾರಗಳ ಮೇಲೆಯೇ ನ್ಯಾಯಾಧೀಶರು ತೀರ್ಪು ನೀಡುತ್ತಾರೆ. ಮಾನವೀಯ ನೆಲೆ ಗಟ್ಟು (ಹುಮ್ಯಾನಿಟಿ ಗ್ರೌಂಡ್ಸ್) ಹಾಗೂ ಸಾಮಾಜಿಕ ನ್ಯಾಯದ (ಸೋಷಿಯಲ್ ಜಸ್ಟೀಸ್) ಮೇಲೆ ತೀರ್ಪು ನೀಡಲು ಅವಕಾಶವಿದ್ದರೂ ಕೂಡ ಪೂರ್ಣ ಪ್ರಮಾಣದಲ್ಲಿ ಅವುಗಳನ್ನೇ ಆಧಾರವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯುವ ವಕೀಲರು ತಮ್ಮ ಕಕ್ಷಿದಾರರಿಗೆ ಯಾವುದೇ ಕಾರಣಕ್ಕೂ ನ್ಯಾಯ ಒದಗಿಸುವ ವಿಚಾರದಲ್ಲಿ ಗುರುತರ ಜವಾಬ್ದಾರಿ ನಿರ್ವಹಿಸಬೇಕಾಗಿದೆ ಎಂದರು.ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಯಾದವ ವನಮಾಲಾ ಆನಂದರಾವ್ ಮಾತನಾಡಿ, ಪ್ರತಿಯೊಂದು ಕೇಸ್‌ಗಳಲ್ಲಿ ವಕೀಲರ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತಿವೆ. ಕಾರಣವಿಷ್ಟೇ ತಾಂತ್ರಿಕತೆ ಹೆಚ್ಚಾದಂತೆ ಸಾಕ್ಷಿ ಆಧಾರಗಳ ಮೂಲಗಳನ್ನು ಹುಡುಕಾಟದ ಭಾಗಗಳು ಹೆಚ್ಚಾಗುತ್ತಿವೆ. ಅದರಲ್ಲೂ ಕೌಟುಂಬಿಕ ನ್ಯಾಯಾಲಯದ ಕೇಸ್‌ಗಳಲ್ಲಿ ಮೊಬೈಲ್‌ಗಳಲ್ಲಿನ ಮೆಸೇಜ್‌ಗಳು ವೈವಾಹಿಕ ಜೀವನದ ಬಿಡುಗಡೆಗೆ ಕಾರಣಗಳಾಗುತ್ತಿದ್ದು ಅದರ ಮೂಲವನ್ನು ಹುಡುಕುವುದೂ ಸಹ ವಕೀಲರಿಗೆ ಅತ್ಯಂತ ಕಷ್ಟದ ಕೆಲಸವಾಗುತ್ತಿದೆ ಎಂದರು.
ವಕೀಲರ ಪರಿಷತ್ ಸದಸ್ಯ ಎ.ಎ. ಮುಗದಮ್ ಮಾತನಾಡಿ, ರಾಜ್ಯದ ಯುವ ವಕೀಲರಿಗೆ ಪರಿಷತ್ ವತಿಯಿಂದ ರಾಜ್ಯದೆಲ್ಲೆಡೆ ನೂರಾರು ತರಬೇತಿ ಕಾರ್ಯಾಗಾರಗಳನ್ನು ನಡೆಸಿದ್ದೇವೆ ಮತ್ತು ಕಾರ್ಯಾಗಾರ ನಡೆಸುವವರಿಗೂ ಪರಿಷತ್‌ನಿಂದ ಅಗತ್ಯವಿರುವ ತನು-ಮನ-ಧನ ಸಹಕಾರ ನೀಡಲಾಗುತ್ತಿದೆ. ನ್ಯಾಯಾಧೀಶರಿಗೆ ನೀಡುವಂತೆ ಸರ್ಕಾರದಿಂದಲೇ ವಕೀಲರಿಗೂ ಕನಿಷ್ಟ ಒಂದು ವರ್ಷದ ತರಬೇತಿ ನೀಡುವಂತಹ ಕೆಲಸವಾಗಬೇಕಾಗಿದೆ ಎಂದರು.ವಕೀಲರ ಪರಿಷತ್ ಸದಸ್ಯ ಎಚ್.ಎಸ್. ಆಸೀಫ್ ಅಲಿ ಮಾತನಾಡಿ, ಸಿನಿಯರ್ ವಕೀಲರನ್ನು ತ್ಯಜಿಸಿ ವೈಯಕ್ತಿಕವಾಗಿ ಕೇಸ್‌ಗಳನ್ನು ನಡೆಸುವುದರಿಂದ ಮಾತ್ರವಷ್ಟೇ ವಕೀಲಿ ವೃತ್ತಿ ಪರಿಪೂರ್ಣಗೊಳ್ಳುವುದಿಲ್ಲ. ಮಾಡುವ ಕೆಲಸದಲ್ಲಿ ನಂಬಿಕೆ, ಶ್ರದ್ಧೆ, ಗುರಿ, ನಿರಂತರ ಪರಿಶ್ರಮವಿದ್ದಲ್ಲಿ ಹಿಡಿದ ಕೆಲಸ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿಗಳ ಕಲ್ಯಾಣ ಟ್ರಸ್ಟ್‌ನ್ನು ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಉದ್ಘಾಟಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಎಂ.ವಿ. ಹಿರೇಮಠ ಸೇರಿದಂತೆ ಕೌಟುಂಬಿಕ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಎಂ.ಜಿ. ಶಿವಳ್ಳಿ, ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನಿಂಗನಗೌಡ ಪಾಟೀಲ, ನ್ಯಾಯಾಧೀಶರಾದ ಎಸ್.ಟಿ. ಸತೀಶ್, ಸುರೇಶ ವಗ್ಗನವರ, ಕಿರಣ್ ಗಂಗಣ್ಣನವರ, ಎಸ್.ಎಲ್. ಲಾಡ್‌ಖಾನ್, ರಾಜು ಸಂಕಣ್ಣನವರ ಇತರರಿದ್ದರು.ಹಿರಿಯ ವಕೀಲ ಪ್ರಭು ಶೀಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವೈ.ಟಿ. ಹೆಬ್ಬಳ್ಳಿ ಸಂಗಡಿಗರು ನಾಡಗೀತೆ ಹೇಳಿದರು. ವಕೀಲೆ ಭಾರತಿ ಕುಲಕರ್ಣಿ ಪ್ರಾರ್ಥಿಸಿ, ಮಂಜುನಾಥ ಹಂಜಗಿ ಸ್ವಾಗತಿಸಿದರು. ಮೃತ್ಯುಂಜಯ ಕಾಯ್ಕದ, ಎಂ.ಎಫ್. ಮುಳಗುಂದ, ಮೃತ್ಯುಂಜಯ ಲಕ್ಕಣ್ಣನವರ ನಿರೂಪಿಸಿ, ನವೀನ ಮುಳಗುಂದ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))