ಸಾರಾಂಶ
ಚಿರತೆ ಸೆರೆಹಿಡಿಯಲು ಇರಿಸಿದ್ದ ಬೋನಿಗೆ ಬೀಳದೆ ಪರಾರಿಯಾಗಿರುವುದು ಮಲ್ಲಿಕಾರ್ಜುನ ಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ಚಿರತೆ ಸೆರೆಹಿಡಿಯಲು ಇರಿಸಿದ್ದ ಬೋನಿಗೆ ಬೀಳದೆ ಪರಾರಿಯಾಗಿರುವುದು ಮಲ್ಲಿಕಾರ್ಜುನ ಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಹಲವು ತಿಂಗಳಿಂದ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಭಯಭೀತರಾದ ಜನರು ಜಮೀನಿನ ಬಳಿ ತೆರಳಲು ಭಯಪಡುತ್ತಿದ್ದರು. ಈ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇರಿಸಿ ರಾತ್ರಿಯಲ್ಲಾ ಪ್ರಯತ್ನ ಪಟ್ಟರೂ ಚಿರತೆ ಬೋನಿಗೂ ಬೀಳದೆ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದೆ.ಚಿರತೆ ರಾತ್ರಿ ವೇಳೆಯಲ್ಲಿ ಮನೆಗಳ ಅಕ್ಕಪಕ್ಕದ ಹುಣಸೆ ಮರಗಳಲ್ಲಿ ಅಡಗಿ ಕುಳಿತು ಮಧ್ಯರಾತ್ರಿ ಕೊಟ್ಟಿಗೆಗೆ ನುಗ್ಗಿ ಕುರಿ, ಕೋಳಿ ಕರು, ನಾಯಿಗಳನ್ನು ಹೊತ್ತೊಯ್ಯುತ್ತಿತ್ತು ಚಿರತೆ ಇರುವ ಬಗ್ಗೆ ಅನೇಕ ಬಾರಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದರು ಅಧಿಕಾರಿಗಳು ನಿರ್ಲಕ್ಷ ಮಾಡಿದ್ದರು.
ಕೊನೆಗೆ ಗ್ರಾಮಸ್ಥರು ಸೇರಿ ಮರದಲ್ಲಿ ಉರುಳು ತಯಾರಿಸಿದ ಇಟ್ಡಿದ್ದರು. ಚಿರತೆ ಗ್ರಾಮದ ಚಂದ್ರಯ್ಯ ಎಂಬುವವರು ಮನೆಯ ಹತ್ತಿರದ ಮರದ ಮೇಲೆ ನಿರ್ಮಾಣ ಮಾಡಲಾಗಿದ್ದ ಉರುಳಿಗೆ ಸಿಲುಕಿತ್ತು ಚಿರತೆಯು ಹುರುಳಿನಿಂದ ಹೊರಬರಲು ಸಾಧ್ಯವಾಗದೆ ರಾತ್ರಿಯೆಲ್ಲಾ ಮರದ ಮೇಲೆಯೇ ಕುಳಿತು ಬೆಳಗಿನ ಜಾವ ಹುರುಳು ಸಮೇತ ಕೆಳಗೆ ಬಿದ್ದು ಪರಾರಿಯಾಗಿದೆ. ಮುಂಜಾಗ್ರತಾ ಕ್ರಮವಿಲ್ಲದೆ ಚಿರತೆ ಸೆರೆ ಹಿಡಿಯಲು ಬಂದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚಿರತೆ ಅನೇಕ ದಿನಗಳಿಂದ ರಾತ್ರಿ ವೇಳೆಯಲ್ಲಿ ಗ್ರಾಮದೊಳಗೆ ಸಂಚಾರ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಸಾರ್ವಜನಿಕರ ಕಣ್ಣಿಗೆ ಕಾಣುವಂತೆ ಚಿರತೆ ಅನೇಕ ಕುರಿ, ಕೋಳಿ, ಕರು ನಾಯಿಗಳನ್ನು ತಿಂದು ಹಾಕಿದೆ. ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ದಿಂದಾಗಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು ತಪ್ಪಿಸಿಕೊಂಡಿರುವ ನರಹತಕ ಚಿರತೆಯನ್ನು ಕೂಡಲೇ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು.ಮಹೇಶ್, ಗ್ರಾಮಸ್ಥ.
ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ಉರುಳಿಗೆ ಸಿಲುಕಿ ತಪ್ಪಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ರಾತ್ರಿಯಾಗಿತ್ತು. ಯಾವುದೇ ವನ್ಯಜೀವಿಗಳಿಗೂ ರಾತ್ರಿ ವೇಳೆಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಲು ಸರ್ಕಾರ ಅನುಮತಿ ನೀಡದ ಕಾರಣ ಕಾರ್ಯಾಚರಣೆಯಲ್ಲಿ ಸ್ವಲ್ಪ ವ್ಯತ್ಯಾಸ ವಾಗಿದೆ. ಗ್ರಾಮದಲ್ಲಿ ಟ್ಯಾಪ್ ಕ್ಯಾಮೆರಾ ಅಳವಡಿಸಿ ಬೋನ್ ಇಡಲು ತೀರ್ಮಾನಿಸಿದ್ದು ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯಲಾಗುವುದು.ವಿನಯ್ ಕುಮಾರ್, ವಲಯ ಅರಣ್ಯಾಧಿಕಾರಿ.