ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತೋಟದ ಮನೆಯಲ್ಲಿ ಕೂಡಿ ಹಾಕಿದ್ದ ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿ 8 ಸಾಕು ಪ್ರಾಣಿಗಳನ್ನು ಕೊಂದು ಹಾಕಿದ್ದ ನಾಲ್ಕು ವರ್ಷದ ಹೆಣ್ಣು ಚಿರತೆ ಬುಧವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ ಬೋನಿಗೆ ಸೆರೆಯಾಗಿದೆ.ತಾಲೂಕಿನ ರಾಗಿಮುದ್ದನಹಳ್ಳಿಯ ಮಹದೇವು ಅವರು ತಮ್ಮ ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ 5 ಕುರಿಗಳು ಮತ್ತು 3 ಮೇಕೆಗಳ ಮೇಲೆ ದಾಳಿ ನಡೆಸಿದ್ದ ಚಿರತೆ ಕತ್ತು ಮತ್ತು ಹೊಟ್ಟೆಯ ಭಾಗವನ್ನು ಸೀಳಿ ಕುರಿ, ಮೇಕೆಗಳನ್ನು ಕೊಂದು ಹಾಕಿ ಪರಾರಿಯಾಗಿತ್ತು. ಗ್ರಾಮಸ್ಥರಿಂದ ವಿಷಯ ತಿಳಿದ ಅರಣ್ಯಾಧಿಕಾರಿಗಳು ಚಿರತೆಯ ಚಲನ ವಲನಗಳನ್ನು ಆಧರಿಸಿ ಚಿರತೆದಾಳಿಯಿಂದ ಬಲಿಯಾಗಿದ್ದ ಕುರಿ ಕಳೆಬರಹವನ್ನು ಬೋನಿನಲ್ಲಿ ಇರಿಸಿ ಚಿರತೆ ಸೆರೆಗೆ ಬಲೆ ಬೀಸಿದ್ದರು. ಸತ್ತ ಪ್ರಾಣಿಗಳನ್ನು ತಿನ್ನಲು ಆಗಮಿಸಿದ್ದ ಚಿರತೆ ಬೋನಿಗೆ ಬಿದ್ದು ಸೆರೆಯಾಗಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಗದೀಶ್‌ಗೌಡ, ಲವಕುಮಾರ್, ಸಿಬ್ಬಂದಿ ಹುಲ್ಕೆರೆ ಕರೀಗೌಡ, ಅಶೋಕ್ ಇತರರು ಚಿರತೆ ಸೆರೆ ಭಾಗವಹಿಸಿದ್ದರು.ಸಾಲಬಾಧೆ: ನೇಣು ಬಿಗಿದು ರೈತ ಆತ್ಮಹತ್ಯೆ
ಮಳವಳ್ಳಿ:ಸಾಲಭಾದೆಯಿಂದ ರೈತ ನೇಣು ಬಿಗಿದು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣಕ್ಕೆ ಸಮೀಪದ ತಮ್ಮಡಹಳ್ಳಿಯಲ್ಲಿ ಗುರುವಾರ ಮುಂಜಾನೆ ಜರುಗಿದೆ.
ಗ್ರಾಮದ ಲೇ. ಜವರೇಗೌಡರ ಪುತ್ರ ಪಾಪಣ್ಣ (58) ಆತ್ಮಹತ್ಯೆ ಮಾಡಿಕೊಂಡವರು. ಸುಮಾರು 18 ಗುಂಟೆ ಜಮೀನು ಹೊಂದಿದ್ದ ಈ ಕುಟುಂಬ ಸಾಲ ಮಾಡಿ ಎರಡು ಬೋರ್ ವೆಲ್ ಕೊರೆಸಿತ್ತು. ನೀರು ಬರದೆ ಎರಡು ಸಹ ವಿಫಲಗೊಂಡಿದ್ದವು ಎನ್ನಲಾಗಿದೆ.ಜೊತೆಗೆ ಕೆಲ ದಿನಗಳ ಹಿಂದಷ್ಟೇ ಸಾಲ ಮಾಡಿ ತಂದಿದ್ದ ಸಾವಿರಾರು ರು.ಬೆಲೆ ಬಾಳುವ ಎರಡು ಹಸುಗಳು ಅನಾರೋಗ್ಯದಿಂದ ಮೃತ ಪಟ್ಟಿದ್ದವು ಎನ್ನಲಾಗಿದೆ. ಬೋರ್ ಹಾಕಿಸಲು, ಹಸುಗಳ ಖರೀದಿಗೆ ಹಾಗೂ ವ್ಯವಸಾಯಕ್ಕೆ ಸುಮಾರು 8 ಲಕ್ಷದ ವರೆಗೂ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ನಂತರ ಮೃತನ ಪತ್ನಿ ಹಾಗೂ ಮಕ್ಕಳು ಸಾಲ ತೀರಿಸಲು ಗ್ರಾಮ ತೊರೆದು ಬೆಂಗಳೂರು ಸೇರಿದ್ದರು. ಜೊತೆಗೆ ಸಾಲಕ್ಕೆ ಹೆದರಿ ಪಾಪಣ್ಣ ಊರು ತೊರೆದಿದ್ದರು. ಕೆಲ ದಿನಗಳ ಹಿಂದಷ್ಟೇ ಗ್ರಾಮಕ್ಕೆ ಬಂದಿದ್ದ ಪಾಪಣ್ಣ ಮನೆಯಲ್ಲಿ ಒಂಟಿಯಾಗಿ ಇದ್ದು, ಸಾಲಭಾದೆಯಿಂದ ಬೇಸತ್ತು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.