ಸಾರಾಂಶ
ಮುಡಾ ಪ್ರಕರಣದಲ್ಲಿ ವಿಪಕ್ಷಗಳ ಕುತಂತ್ರದಿಂದ ಸಿಎಂ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಆ ಕುತಂತ್ರ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಇವರ ಕುತಂತ್ರ ನಡೆಯುವುದಿಲ್ಲ.
ಬಾಗಲಕೋಟೆ : ಮುಡಾ ಪ್ರಕರಣದಲ್ಲಿ ವಿಪಕ್ಷಗಳ ಕುತಂತ್ರದಿಂದ ಸಿಎಂ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಆ ಕುತಂತ್ರ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಇವರ ಕುತಂತ್ರ ನಡೆಯುವುದಿಲ್ಲ. ಜನ ನಮ್ಮ ಜೊತೆ ಇದ್ದಾರೆ. ಷಡ್ಯಂತ್ರ ಮಾಡುತ್ತಿರುವ ಬಿಜೆಪಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಿಎಂ ಯಾವ ಆರೋಪಕ್ಕೂ ಜಗ್ಗುವುದಿಲ್ಲ. ಸಿಎಂ ಗಟ್ಟಿ ಇದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಜನತೆ ಎಂದೂ ಮೆಜಾರಿಟಿ ಕೊಟ್ಟಿಲ್ಲ. ಕುದುರೆ ವ್ಯಾಪಾರ ಮಾಡಿ ಅಧಿಕಾರ ಮಾಡಿದವರು ಅವರು. ಈಗಲೂ ಅದೇ ಕೆಲಸ ಮಾಡಲಿಕ್ಕೆ ಮುಂದಾಗಿದ್ದಾರೆ. ನಮ್ಮ ಶಾಸಕರು ಮತ್ತಷ್ಟು ಗಟ್ಟಿಯಾಗಿದ್ದಾರೆ. ಬಿಜೆಪಿ ಆಪರೇಷನ್ ಯಾವತ್ತೂ ಫಲಿಸಲ್ಲ ಎಂದರು.
ಚಾರಿತ್ರ್ಯ ವಧೆ ಖಂಡನೀಯ:
ಸೈಟ್ ಹಿಂದಿರುಗಿಸಿದ ಸಿಎಂ ಪತ್ನಿ ಅವರಿಗೆ ಈ ಪ್ರಕರಣದಿಂದ ಸಿಎಂ ಅವರ ಧರ್ಮಪತ್ನಿಗೆ ಮುಜುಗರ ಆಗಿದೆ. ಅದರಿಂದ ಆ ಸೈಟ್‌ಗಳನ್ನು ಹಿಂದಿರುಗಿಸಿದ್ದಾರೆ. ಇದರಿಂದ ನಮ್ಮ ಮನೆಯವರಿಗೆ ಕೆಟ್ಟ ಹೆಸರು ಬರುತ್ತದೆ ಅಂದ್ಮೇಲೆ ಈ ಆಸ್ತಿನೇ ಬೇಡ ಅಂತಾ ವಾಪಸ್ ಕೊಟ್ಟಿದ್ದಾರೆ. ಸೈಟ್ ಹಿಂದಿರುಗಿಸಿದ್ದು ತಪ್ಪಾ? ಪ್ರಕರಣದಲ್ಲಿ ಏನು ತಪ್ಪಿದೆ ಎಂದು ಜನರಿಗೆ ತೋರಿಸಲಿ. ಸಿಎಂ ಅವರ ಚಾರಿತ್ರ್ಯ ವಧೆ ಮಾಡುವ ಕೆಲಸ ಖಂಡನೀಯ ಎಂದು ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮೂವರು ಸಚಿವರಿಂದ ಸಭೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾಕೆ ಅವರು ಮೂರು ಜನ ಸೇರಿ ಸಿಎಂಗೆ ಬೆಂಬಲ ನೀಡುವುದಕ್ಕಾಗಿ ಸೇರಿರಬಾರದು? ಯಾಕೆ ನೀವು ಅವರ ಭೇಟಿ ಬಗ್ಗೆ ಹೀಗೆ ಅರ್ಥ ಕಲ್ಪಿಸುತ್ತೀರಿ? ಎಲ್ಲ ಸಮುದಾಯದ ಸಚಿವರ ಸಭೆ ಆಗ್ತಿರೋದು ಸಿಎಂ ಅವರಿಗೆ ಬೇಷರತ್ ಬೆಂಬಲ ನೀಡುವುದಕ್ಕಾಗಿ. ಸಿಎಂ ಅವರಿಗೆ ಬೆಂಬಲಕ್ಕಾಗಿ ಸಭೆ. ಅವರಿಗೆ ವಿರೋಧವಾಗಿ ಅಲ್ಲ. ನಮ್ಮ ಹೈಕಮಾಂಡ್ ಖರ್ಗೆ ಹೇಳಿದ್ದಾರೆ. ಸಿಎಂ ಬೆಂಬಲಕ್ಕೆ ನಿಂತಿದ್ದೇವೆ ಎಂದು ಹೇಳಿಲ್ಲವೇ ಎಂದು ಮರು ಪ್ರಶ್ನಿಸಿದರು.
ಪ್ರಜಾಪ್ರಭುತ್ವದ ಉಳಿವಿಗೆ ಸಿಎಂ ಹೋರಾಟ:
ಬಳ್ಳಾರಿ ನಿರ್ಬಂಧ ತೆರವು ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಜನಾರ್ಧನ ರೆಡ್ಡಿ ಅವರು ಗುಡುಗಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಾಪ ಎಲ್ಲ ಅನುಭವಿಸಿ ಬಂದಿದ್ದಾರೆ. ಆಧ್ಯಾತ್ಮಿಕದ ಕಡೆ ದೇವರು ದಿಂಡ್ರು ನೆನಪಾಗಿದೆ. ಸಿದ್ದರಾಮಯ್ಯನವರು ಸೆಡ್ಡು ಹೊಡೆದಿದ್ದು ಬೇರೆ ವಿಷಯಕ್ಕೆ. ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆ ಆಗುತ್ತಿತ್ತು. ವಿರೋಧ ಪಕ್ಷದ ನಾಯಕ ಅಲ್ಲಿ ವಿಸಿಟ್ ಮಾಡೋಕೆ ಹೋದ್ರೆ, ಗುಂಡಾಗಳು ಬೈಕ್‌ನಲ್ಲಿ ಬೆನ್ನ ಬಿದ್ದು ಹೆದರಿಸುವ ಕೆಲಸ ಮಾಡಿದರು. ಈ ಗುಂಡಾಯಿಸಂ ನಡೆಯಬಾರದು. ಈ ದೇಶಕ್ಕೆ ಪ್ರಜಾಪ್ರಭುತ್ವ ಉಳಿಯಲಿ ಅಂತ ಸೆಡ್ಡು ಹೊಡೆದರೆ ವಿನಃ ಯಾವುದೇ ವ್ಯಕ್ತಿಗೆ ಜನಾರ್ಧನ ರೆಡ್ಡಿ ಅಂತವರಿಗೆ ವಿರುದ್ಧ ಮಾಡಿಕೊಂಡು ಅಲ್ಲ. ಅದೆಲ್ಲ ಯಾಕೆ ಬೇಕು ಸಿದ್ದರಾಮಯ್ಯನವರಿಗೆ. ಸಿದ್ದರಾಮಯ್ಯನವರು ತತ್ವ ಸಿದ್ಧಾಂತ ಪ್ರಜಾಪ್ರಭುತ್ವ ಉಳಿಯಲಿಕ್ಕೆ ಹೋರಾಟ ಮಾಡಿದ್ದಾರೆ. ನಾಟ್ ಜನಾರ್ದನ ರೆಡ್ಡಿ ಎಂದು ಹೇಳಿದರು.
ಬಿಜೆಪಿ ಏಜೆಂಟ್ ಆಗಿರುವ ರಾಜ್ಯಪಾಲರು
ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ಆಗಿಬಿಟ್ಟಿದ್ದಾರೆ. ಸಂವಿಧಾನ ರಕ್ಷಣೆಗೆ ರಾಜ್ಯಪಾಲರನ್ನು ಕಳಿಸಿದರೆ ಇವರು ಬಿಜೆಪಿ ಏಜೆಂಟರ ತರಾ ಕೆಲಸ ಮಾಡುತ್ತಿದ್ದಾರೆ. ಯಾರೆಲ್ಲರ ಮೇಲೆ ಕೇಸ್ ಇವೆ, ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ? ಅವರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ. ಯಾಕೆ ನಿರ್ಮಲಾ ಸೀತಾರಾಮನ್ ಕೋರ್ಟ್‌ನಿಂದ ಸ್ಟೇ ತಂದ್ರು? ತಪ್ಪು ಮಾಡಿದ್ದಿವಿ ಅನ್ನೋ ಭಯ ಅವರಲ್ಲಿ ಕಾಡ್ತಿದೆ. ಅವರೆಲ್ಲರ ಹೆಸರುಗಳಲ್ಲಿ ನಡೆದಿರವು ತಪ್ಪುಗಳನ್ನು ಬಯಲಿಗೆ ಹಾಕುವ ಕೆಲಸವನ್ನು ನಾವು ಮಾಡ್ತೇವೆ ಎಂದರು.
ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದು!
ಸರ್ಕಾರ ಕೆಡವಲು ಬಿಜೆಪಿಯವರು ₹1 ಸಾವಿರ ಕೋಟಿ ಮೀಸಲಿಟ್ಟದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲು ಕುಡಿದವರೇ ಬದುಕೋದಿಲ್ಲ. ಇನ್ನು ವಿಷ ಕುಡಿದವರು ಬದುಕುತ್ತಾರಾ ಎಂದು ಬಾಗಲಕೋಟೆಯಲ್ಲಿ ಸಚಿವ ತಿಮ್ಮಾಪೂರ ಪ್ರತಿಕ್ರಿಯೆ ನೀಡಿದರು.
ನೀವು (ಬಿಜೆಪಿ) ಯಾವತ್ತೂ ಯೋಗ್ಯರಲ್ಲ ಅನ್ನುವ ದೃಷ್ಟಿಯಿಂದಲೇ, ಜನ ಇವರಿಗೆ(ಬಿಜೆಪಿ) ಯಾವತ್ತೂ ಅಧಿಕಾರ ಕೊಟ್ಟಿಲ್ಲ. ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದವರು. ಬಿಜೆಪಿಯವರ ಇತಿಹಾಸವನ್ನು ರಾಜ್ಯದ ಜನ ಬರೆದಿಟ್ಟಿದ್ದಾರೆ. ಯಾವಾಗ ಅಧಿಕಾರ ತಗೊಂಡ್ರು, ಜನ ಬೆಂಬಲ ಕೊಡದೇ ಇರುವಾಗ ವಾಮ ವಾರ್ಗ ಹಿಡಿದಿದ್ದು ಗೊತ್ತಿದೆ. ಬಿಜೆಪಿ ಇಡಿ, ಸಿಬಿಐ ದುರುಪಯೋಗ ಮಾಡಿಕೊಂಡಿದ್ದು ಜನತೆಗೆ ಗೊತ್ತಿದೆ. ಬಿಜೆಪಿ ಆಪರೇಷನ್‌ಗೆ ಎಷ್ಟು ಹಣ ಹಂಚಿದ್ರು ಅನ್ನೋದು ಹಿಂದೆ ಬಯಲಿಗೆ ಬಂದಿತ್ತು. ಅದಕ್ಕೆ ಇಡಿ ಇಲ್ಲ, ಯಾವುದೇ ಟ್ರಾಂಜೆಕ್ಷನ್ ಇಲ್ಲ ಆದರೂ ಸಿಎಂ ಮೇಲೆ ಇಡಿ ಬಳಕೆ ಮಾಡುತ್ತಿದ್ದಾರೆ. ಇಂತಹ ಲಜ್ಜೆಗೆಟ್ಟು ನಡೆಯುತ್ತಿರೋ ಕೇಂದ್ರ ಸರ್ಕಾರವನ್ನು ನಾವು ಯಾವತ್ತೂ ನೋಡಿರಲಿಲ್ಲ. ಇಂತಹ ಪ್ರಧಾನಿ ದೇಶಕ್ಕೆ ಮಾರಕ ಎಂದರು.