ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ಬೇಡದ ಯೋಜನೆಗಳ ವಿರುದ್ಧ ಎಷ್ಟು ಹೋರಾಡಿದರೂ ಧುತ್ತೆಂದು ಬಂದು ಬಿಡುತ್ತವೆ. ಬೇಕು ಎಂದು ಎಷ್ಟು ಹೋರಾಡುತ್ತಿದ್ದರೂ ಆ ಯೋಜನೆ ಬರುವುದೇ ಇಲ್ಲ. ಜಿಲ್ಲೆಯ ಜನತೆಯ ನಸೀಬೆ ಹಾಗೆ. ನಿರಂತರವಾಗಿ ಹೋರಾಡುತ್ತಲೇ ಇರಬೇಕು.ಯಾವಾಗ ನೋಡಿದರೂ ಜಿಲ್ಲೆಯ ಒಂದಲ್ಲ ಒಂದು ಕಡೆ ಹೋರಾಟ ನಡೆಯುತ್ತಲೇ ಇರುತ್ತದೆ. ಪ್ರತಿಭಟನೆ, ಧರಣಿ, ಮೆರವಣಿಗೆ, ರಾಸ್ತಾರೋಖೋ... ಎಷ್ಟು ಬಗೆಯ ಹೋರಾಟ ಇದೆಯೋ ಅದೆಲ್ಲವೂ ಇಲ್ಲಿ ಕಾಣಸಿಗುತ್ತದೆ.
ಸದ್ಯ ಕಾಸರಕೋಡ ಬಂದರು ವಿರುದ್ಧ ಹೋರಾಟ ಇನ್ನೂ ನಿಂತಿಲ್ಲ. ಈ ನಡುವೆ ಕೇಣಿ ಬಂದರು ವಿರುದ್ಧ ಹೋರಾಟ ನಡೆಯುತ್ತಿದೆ. ಪ್ರತ್ಯೇಕ ಜಿಲ್ಲೆಯ ಹೋರಾಟವೂ ಶುರುವಾಗಿದೆ. ಘಟ್ಟದ ಮೇಲೆ ಹಾಗೂ ಕರಾವಳಿ ತಾಲೂಕು ಜನತೆ ಹೋರಾಡುತ್ತಿದ್ದಾರೆ.ಕೈಗಾ ಅಣು ವಿದ್ಯುತ್ ಸ್ಥಾವರದ ವಿರುದ್ಧ ಬಹು ದೊಡ್ಡ ಹೋರಾಟ ನಡೆಯಿತು. ಶರಾವತಿ ಟೇಲರೆಸ್ ಯೋಜನೆ ವಿರುದ್ಧ ಅಪ್ಪಿಕೋ ಚಳವಳಿ ನಡೆಯಿತು. ಸೀಬರ್ಡ್ ನೌಕಾನೆಲೆ ವಿರುದ್ಧ ಸುದೀರ್ಘ ಸಮಯ ಪ್ರತಿಭಟನೆ ನಡೆಯಿತು.
ರನ್ ಆಪ್ ದ ರಿವರ್, ಜಲ ವಿದ್ಯುತ್ ಯೋಜನೆಗಳು, ತದಡಿ ಬಾರ್ಜ್ ಮೌಂಟೆಡ್ ಯೋಜನೆ, ಕಾಳಿ ಬಚಾವೋ ಆಂದೋಲನ, ಮಾವಳಂಗಿ ಜಲ ವಿದ್ಯುತ್ ಯೋಜನೆ, ಕಬ್ಬಿಣದ ಅದಿರು ಸಾಗಾಟ, ಹಣಕೋಣ ಉಷ್ಣ ವಿದ್ಯುತ್ ಸ್ಥಾವರ, ಕಾರವಾರ ವಾಣಿಜ್ಯ ಬಂದರು ವಿಸ್ತರಣೆಯ ವಿರುದ್ಧ, ವಿಮಾನ ನಿಲ್ದಾಣ, ಕೊಂಕಣ ರೈಲ್ವೆ, ಹುಬ್ಬಳ್ಳಿ ಅಂಕೋಲಾ ರೈಲ್ವೆ (ಪರ, ವಿರೋಧ ಹೋರಾಟ) ಚತುಷ್ಪಥ ಹೆದ್ದಾರಿ... ಹೀಗೆ ಜಿಲ್ಲೆಯಲ್ಲಿ ನಡೆದ ಹೋರಾಟಗಳ ಪಟ್ಟಿ ಸಾಕಷ್ಟು ದೊಡ್ಡದಿದೆ. ಹೋರಾಟಕ್ಕೆ ಹೆದರಿ ಕೆಲವು ಯೋಜನೆಗಳು ಕಾಲುಕಿತ್ತಿವೆ. ಎಷ್ಟೇ ಹೋರಾಟ ನಡೆಸಿದರೂ ಹಲವು ಯೋಜನೆಗಳು ಜಾರಿಗೊಂಡಿವೆ.ಜಿಲ್ಲೆಯ ಜನತೆಗೆ ಅತ್ಯಗತ್ಯವಾದ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಸತತ ಹೋರಾಟ ನಡೆಯುತ್ತಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೋರಾಟ ಚುನಾವಣಾ ಸರಕಾಯಿತೇ ಹೊರತೂ ನಂತರ ಹೋರಾಟ ಕಾವು ಕಳೆದುಕೊಂಡಿತು. ಹುಬ್ಬಳ್ಳಿ- ಅಂಕೋಲಾ ರೈಲ್ವೆಗಾಗಿ ನಿರಂತರ ಹೋರಾಟ ನಡೆಯುತ್ತಿದ್ದರೂ ಅದಿನ್ನೂ ಸಾಕಾರಗೊಂಡಿಲ್ಲ. ಆದರೆ ಆಶಾವಾದ ಹೆಚ್ಚಿದೆ. ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯ ಭೂಮಿ ಸಕ್ರಮಕ್ಕಾಗಿ ಹೋರಾಟ ನಿರಂತರವಾಗಿ ನಡೆಯುತ್ತಿದೆ.
ಜಿಲ್ಲೆಯ ಜನತೆಯ ಬದುಕು ಬೇಡದ ಯೋಜನೆಗಳಿಗಾಗಿ ಹೋರಾಟ, ಪ್ರತಿಭಟನೆಯಲ್ಲೇ ಕಳೆದುಹೋಗುತ್ತಿದೆ. ಬೇಡದ ಯೋಜನೆಗಳಿಗಾಗಿಯೂ ಹೋರಾಟ, ಬೇಕೆನ್ನುವ ಯೋಜನೆಗಳೂ ಹೋರಾಟ ಎನ್ನುವಂತಾಗಿದೆ.ಜನತೆಯ ಅಗತ್ಯತೆ, ಪರಿಸರ, ಉದ್ಯೋಗಾವಕಾಶ ಇವೆಲ್ಲವುಗಳನ್ನೂ ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಜಾರಿಗೊಳಿಸುವ ಕಾರ್ಯ ಆಗಬೇಕಾಗಿದೆ. ಜನತೆಗೆ ಬೇಡವಾದ ಯೋಜನೆಗಳು ಬರುತ್ತಿವೆ. ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗಾಗಿ ನಾವು ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ಈಗ ಕಾನೂನು ಹೋರಾಟ ನಡೆಯುತ್ತಿದೆ. ಯೋಜನೆ ಜಾರಿಗೊಳ್ಳುವ ತನಕ ಹೋರಾಟ ನಿರಂತರವಾಗಲಿದೆ ಎಂದು ರೈಲ್ವೆ ಸೇವಾ ಸಮಿತಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಹೇಳಿದರು.ಜಿಲ್ಲೆಯ ಅಳಿವು-ಉಳಿವಿನ ಪ್ರಶ್ನೆ: ದೇಶದ ಪ್ರಸಿದ್ಧ ಪರಿಸರ ಹೋರಾಟಗಾರರಾದ ಸುಂದರಲಾಲ್ ಬಹುಗುಣ, ಮೇಧಾ ಪಾಟ್ಕರ್ ಸಹ ಜಿಲ್ಲೆಯ ಹೋರಾಟಕ್ಕೆ ಬಂದರು. ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಶ್ರೀಗಳು, ಕುಸುಮಾ ಸೊರಬ, ಅನಂತ ಹೆಗಡೆ ಅಶೀಸರ, ಪಾಂಡುರಂಗ ಹೆಗಡೆ ಮೊದಲಾದವರು ಪರಿಸರ ಹೋರಾಟದಲ್ಲಿ ಮುನ್ನೆಲೆಗೆ ಬಂದರು. ಒಂದು ಹಂತದಲ್ಲಿ ಪರಿಸರ ಹೋರಾಟದಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ ಉಂಟಾಯಿತು ಎಂಬ ವಾದವೂ ಬಲವಾಗಿ ಕೇಳಿಬಂತು. ಈಗ ಪರಿಸರ ಹೋರಾಟದ ಜತೆಗೆ ಜಿಲ್ಲೆಯ ಜನತೆ ಅಳಿವು ಉಳಿವಿನ ಪ್ರಶ್ನೆ ಮುಂದಿಟ್ಟುಕೊಂಡು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದಾರೆ.