ಸಾರಾಂಶ
ಎಂ.ನರಸಿಂಹಮೂರ್ತಿ
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣರಸ್ತೆ ಬದಿ, ಖಾಲಿ ನಿವೇಶನ, ಸ್ಮಶಾನ, ಚರಂಡಿ ಕಸ, ಕಸ, ಕಸ... ಊರಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಕಸದ ತೊಟ್ಟಿಯಂತಾಗಿರುವ ಗ್ರಾಮ.
ಇದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡತೋಗೂರು ಪಟ್ಟಣ ಪಂಚಾಯಿತಿಯಿಂದ ಹೊರಗುಳಿದಿರುವ ಹೊಮ್ಮದೇವನಹಳ್ಳಿ ಗ್ರಾಮದ ಶೋಚನೀಯ ಪರಿಸ್ಥಿತಿ. ಕಸ ಸಂಗ್ರಹ ಸ್ಥಗಿತವಾಗಿರುವುದರಿಂದ ಇಡೀ ಗ್ರಾಮ ಗಬ್ಬೆದ್ದು ನಾರುತ್ತಿದೆ. ಕಳೆದ ಹಲವು ತಿಂಗಳಿನಿಂದ ಸಾರ್ವಜನಿಕರಿಗೆ ತಲೆನೋವು, ಮೈಕೈ ಅಲರ್ಜಿ, ಶೀತ, ನೆಗಡಿ, ಕೆಮ್ಮು ಸೇರಿದಂತೆ ಹಲವಾರು ರೋಗರುಜಿನಗಳು ಕಾಣಿಸಿಕೊಂಡಿದ್ದು, ಹಸಿ, ಘನ ತ್ಯಾಜ್ಯಗಳ ಸಂಗಮದಿಂದ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿ ಜನತೆ ಆತಂಕಗೊಂಡಿದ್ದಾರೆ.ಕೊಳೆತ ಮಾವಿನ ಹಣ್ಣುಗಳು, ಮನೆಯ ತ್ಯಾಜ್ಯ, ಕಟ್ಟಡಗಳ ವೇಸ್ಟೇಜ್, ಕೋಳಿ ತ್ಯಾಜ್ಯಗಳನ್ನು ಒಟ್ಟಾಗಿ ತಂದು ಗುಡ್ಡೆ ಹಾಕಲಾಗುತ್ತಿರುವ ಪರಿಣಾಮ ಕಸದ ದುರ್ವಾಸನೆಯಿಂದ ಮನೆಯಿಂದ ಹೊರಗೆ ಬಾರದ ಜನರು, ಮೂಗು ಮುಚ್ಚಿಕೊಂಡು ಆಚೆ ಓಡಾಡುವ ಸ್ಥಿತಿ, ಕಸವನ್ನು ತಿನ್ನುವ ನಾಯಿಗಳ ಸಂಖ್ಯೆ ಹೆಚ್ಚಾಗಿ ನಾಯಿಗಳ ಕಾಟ, ಮಳೆ ಆಗುತ್ತಿರುವ ಪರಿಣಾಮ ಕಸದ ರಾಶಿ ಕೊಳೆತು ಸಹಿಸಲಾರದ ದುರ್ಗಂಧ ವ್ಯಾಪಿಸಿದೆ. ಗಬ್ಬುನಾತದಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು, ಪ್ರಯಾಣಿಕರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಾಗಬೇಕಾದ ಪರಿಸ್ಥಿತಿಯಿದೆ.
ಅತ್ತ ಪಟ್ಟಣ ಪಂಚಾಯಿತಿಗೆ ಸೇರದೆ, ಇತ್ತ ಗ್ರಾಮ ಪಂಚಾಯಿತಿಯೂ ಇಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ದೂರಿತ್ತರೂ ಸ್ಪಂದಿಸುತ್ತಿಲ್ಲ. ಈ ಪ್ರದೇಶಗಳಲ್ಲಿ ವಾಸಿಸುವವರ ಗೋಳು ಕೇಳುವವರಿಲ್ಲ. ಗ್ರಾಮದ ಹಲವರು ಮನೆ ತೊರೆದು ಬೇರೆಡೆಗೆ ಹೋಗುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.ನಾಯಿಗಳ ಕಾಟದಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ, ತ್ಯಾಜ್ಯದ ಅಸಮರ್ಪಕ ವಿಲೇವಾರಿಯಿಂದ ಗ್ರಾಮದಲ್ಲಿ ಸೊಳ್ಳೆಗಳು, ನೊಣಗಳ ಕಾಟ ವಿಪರೀತವಾಗಿದೆ. ವಾತಾವರಣವೇ ಹದಗೆಡುತ್ತಿದೆ, ಚೀಲಗಳಲ್ಲೂ ಕಸವನ್ನು ತಂದು ಹಾಕಲಾಗುತ್ತಿದೆ. ಸಾಂಕ್ರಾಮಿಕ ರೋಗದ ಭಯದಿಂದ ಜೀವನ ನಡೆಸಬೇಕು. ಗಾಳಿ ಬೀಸಿದಾಗ ದುರ್ವಾಸನೆಯ ವಿಷಕಾರಿ ಗಾಳಿ ಬೀಸುತ್ತಿದೆ.
-ಕುಮಾರ್, ಹೊಮ್ಮದೇವನಹಳ್ಳಿ ನಿವಾಸಿ.2-3 ದಿನದಲ್ಲಿ ಸ್ವಚ್ಛಗೊಳಿಸುತ್ತೇವೆ: ರವಿಕಸ ಸಂಗ್ರಹಣೆ ಮಾಡುವವರಿಗೆ ಸುಮಾರು ಒಂದು ವರ್ಷದಿಂದ ವೇತನ ನೀಡದೆ ₹35 ಲಕ್ಷ ಬಾಕಿ ಉಳಿಸಿಕೊಂಡಿರುವ ಕಾರಣ ಕಸ ವಿಲೇವಾರಿ ಆಗುತ್ತಿಲ್ಲ. ಅಲ್ಲದೆ ಹೊಮ್ಮದೇವನಹಳ್ಳಿಯನ್ನು ಪಂಚಾಯಿತಿಯನ್ನಾಗಿಸಲು ಅನುಮೋದನೆಗೆ ಕಳುಹಿಸಲಾಗಿತ್ತು. ಮೇ 2ರಂದು ಸಿಇಒ, ಇಒ ಜೊತೆ ಜಿಲ್ಲಾಧಿಕಾರಿ ಸಭೆ ನಡೆಸಿ ಪೂರ್ಣ ಪ್ರಮಾಣದ ಪಂಚಾಯಿತಿಯಾಗಿ ಮಾಡುವಂತೆ ಆದೇಶಿಸಿ ಆರ್.ಡಿ.ಪಿ.ಆರ್‌ಗೆ ಅನುಮೋದನೆಗಾಗಿ ಕಳುಹಿಸಲಾಗಿದ್ದು, ಆದೇಶ ಬಂದ ನಂತರ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ದೊಡ್ಡ ತೋಗೂರು ತಾತ್ಕಾಲಿಕ ಉಸ್ತುವಾರಿ ಹಾಗೂ ಪಿಡಿಒ ರವಿ ಗಣಿಗೇರ್ ಹೇಳಿದರು.
ಈಗಾಗಲೇ ಹಳೆಯ ಕಸ ಸಂಗ್ರಹಣೆ ಮಾಡುವವರಿಗೆ ಶೀಘ್ರದಲ್ಲಿಯೇ ಬಾಕಿ ಬಿಡುಗಡೆ ಮಾಡಲಾಗುವುದು ಎಂಬ ಭರವಸೆ ನೀಡಿರುವುದರಿಂದ ಎರಡ್ಮೂರು ದಿನಗಳಲ್ಲಿ ಕಸ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.