ಗ್ಯಾರೇಜಿಗೆ ತರುತ್ತಿದ್ದ ಐಷಾರಾಮಿ ಕಾರು ಹೆದ್ದಾರಿಯಲ್ಲೇ ಭಸ್ಮ

| Published : Sep 29 2024, 01:54 AM IST

ಸಾರಾಂಶ

ಬೆಂಕಿ ಅವಘಡಕ್ಕೆ ಶಾರ್ಟ್‌ಸರ್ಕ್ಯೂಟ್‌ ಕಾರಣ ಎಂದು ಹೇಳಲಾಗಿದೆ. ಕಾರು ಚಾಲಕ ಬಿ.ಸಿ.ರೋಡ್‌ನ ಗುರುದೀಪ್‌ ಅಪಾಯದಿಂದ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಗ್ಯಾರೇಜಿಗೆ ತರುತ್ತಿದ್ದ ಐಷಾರಾಮಿ ಬಿಎಂಡಬ್ಲ್ಯೂ ಕಾರೊಂದು ಹೊತ್ತಿ ಉರಿದ ಘಟನೆ ರಾಷ್ಟ್ರೀಯ ಹೆದ್ದಾರಿ-76ರ ಅಡ್ಯಾರಿನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಮಧ್ಯಾಹ್ನ 1.30ರ ಸುಮಾರಿಗೆ ಕಾರಿನಲ್ಲಿ ಹೊಗೆ ಕಾಣಿಸಿದೆ. ಕೂಡಲೇ ಚಾಲಕ ಕೆಳಗೆ ಇಳಿದಿದ್ದು, ಬೆಂಕಿ ಅವಘಡಕ್ಕೆ ಶಾರ್ಟ್‌ಸರ್ಕ್ಯೂಟ್‌ ಕಾರಣ ಎಂದು ಹೇಳಲಾಗಿದೆ. ಕಾರು ಚಾಲಕ ಬಿ.ಸಿ.ರೋಡ್‌ನ ಗುರುದೀಪ್‌ ಅಪಾಯದಿಂದ ಪಾರಾಗಿದ್ದಾರೆ.

ದೆಹಲಿ ನೋಂದಣಿಯ ಕಾರು ಇದಾಗಿದ್ದು, ಬಿ.ಸಿ.ರೋಡ್‌ ಕಡೆಯಿಂದ ಚಾಲಕ ಗುರುದೀಪ್‌ ಎಂಬವರು ಕಾರನ್ನು ಚಲಾಯಿಸುತ್ತಿದ್ದರು. ಕಾರಿನಲ್ಲಿ ಸಮಸ್ಯೆ ಇದೆ ಎಂದು ಅಡ್ಯಾರಿನ ಬಿಎಂಡಬ್ಲ್ಯೂ ಗ್ಯಾರೇಜ್‌ಗೆ ಕಾರು ತರುತ್ತಿರಬೇಕಾದರೆ ಮಾರ್ಗ ಮಧ್ಯೆ ಅವಘಡ ಸಂಭವಿಸಿದೆ. ಸುಮಾರು ಅರ್ಧ ಗಂಟೆ ಕಾಲ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿದೆ. ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸುವ ಮೊದಲೇ ಕಾರು ಭಸ್ಮಗೊಂಡಿದೆ. ಅಗ್ನಿ ಅವಘಡದಿಂದಾಗಿ ಹೆದ್ದಾರಿಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರಿಗೆ ದೂರು ನೀಡಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೆ ಸುರತ್ಕಲ್‌ ಎನ್‌ಐಟಿಕೆ ಬಳಿ ಬಿಎಂಡಬ್ಲ್ಯೂ ಕಾರೊಂದು ಇದೇ ರೀತಿ ಬೆಂಕಿಗೆ ಆಹುತಿಯಾಗಿತ್ತು.