ಮುಂಡರಗಿಯ ಶ್ರೀ ಜ. ಅನ್ನದಾನೀಶ್ವರ ಸಾಹಿತ್ಯ ಭವನದಲ್ಲಿ ಶರಣ ಚಿಂತನ ಮಾಲೆ-31ರ ಕಾರ್ಯಕ್ರಮದಲ್ಲಿ ಅಭಿನಯರತ್ನ ಪ್ರಶಸ್ತಿ ಪಡೆದ ಮಹಾಂತೇಶ ತ್ಯಾಮನವರ ಹಾಗೂ ಅಕಾಡೆಮಿ ಬಾಲಗೌರವ ಪ್ರಶಸ್ತಿ ಪಡೆದ ಸುಪ್ರಿಯಾ ಇಟಗಿ ಅವರನ್ನು ಸತ್ಕರಿಸಲಾಯಿತು.

ಮುಂಡರಗಿ: ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯ ಅಮೋಘವಾದ ಕೊಡುಗೆ ನೀಡಿದೆ. ಶರಣರು ಲೋಕದ ಡೊಂಕನ್ನು ಎತ್ತಿ ತೋರಿಸುವ ಜತೆಗೆ ಅವುಗಳನ್ನು ತಮ್ಮ ವಚನದಿಂದ ತಿದ್ದಲು ಪ್ರಯತ್ನ ಮಾಡಿದರು ಎಂದು ಗದಗ ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಎ.ಬಿ. ಹಿರೇಮಠ ಹೇಳಿದರು.

ಇಲ್ಲಿಯ ಶ್ರೀ ಜ. ಅನ್ನದಾನೀಶ್ವರ ಸಾಹಿತ್ಯ ಭವನದಲ್ಲಿ ತಾಲೂಕು ಕಸಾಪ, ಶಸಾಪ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಸೌರಭ ವಿಭಾಗ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶರಣ ಚಿಂತನ ಮಾಲೆ-31ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉಪೇಕ್ಷಿತ ಶರಣರ ಬಗ್ಗೆ ಶರಣ ಚಿಂತನ ಮಾಲೆ ಹಮ್ಮಿಕೊಂಡು ನಿರಂತರವಾಗಿ ನಡೆಸುತ್ತಾ ಬಂದಿರುವ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

12ನೇ ಶತಮಾನದಲ್ಲಿ ಆಗಿಹೋದ ಕೆಲವೊಂದು ಶರಣರ ಪರಿಚಯ ನಮಗಿದೆ, ಆದರೆ ಇನ್ನುಳಿದ 770 ಗಣಂಗಳ ಪರಿಚಯ, ಅವರ ಕಾಯಕ ನಿಷ್ಠೆಯ ಬೆಳಕು ಚೆಲ್ಲುವುದು ಅವಶ್ಯವಿತ್ತು. ಅನೇಕ ವಚನಗಳು ನಮಗೆ ಇನ್ನೂ ಸಿಕ್ಕಿಲ್ಲ, ಅವುಗಳನ್ನು ಬೆಳಕಿಗೆ ತರುವ ಕೆಲಸ ಇಂತಹ ಕಾರ್ಯಕ್ರಮಗಳ ಮೂಲಕ ನಡೆಯಲಿ ಎಂದರು.

ಅಮುಗಿ ದೇವಯ್ಯ ಕುರಿತು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಕನ್ನಡ ಶಿಕ್ಷಕ ಜಿ.ಎಂ. ಲಿಂಗಶೆಟ್ಟರ ಉಪನ್ಯಾಸ ನೀಡಿ, ಕನ್ನಡಿ ಕಾಯಕದ ಅಮುಗಿ ದೇವಯ್ಯ ಕಮಳೇಶ್ವರಲಿಂಗ ಎಂಬ ಅಂಕಿತದಿಂದ ವಚನಗಳನ್ನು ರಚಿಸಿದ್ದಾರೆ. ಸಿದ್ದರಾಮನೊಡನೆ ಸಂಬಂಧವನ್ನು ಪಡೆದು ಪ್ರಸಿದ್ಧನಾದ ಅಮುಗಿ ದೇವಯ್ಯ ನೇಯ್ಗ ಕಾಯಕದಿಂದ ಸೇವೆ ಮಾಡಿದವರು. ಶರಣರ ಲಕ್ಷಣವನ್ನು, ಸತಿಪತಿ ಭಾವವನ್ನು ಹಾಗೂ ಜ್ಞಾನ-ಕ್ರಿಯೆಗಳನ್ನು ತಮ್ಮ ವಚನದಲ್ಲಿ ಸೊಗಸಾಗಿ ಬಿಂಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಆರ್.ಎಲ್. ಪೊಲೀಸ್‌ಪಾಟೀಲ ಮಾತನಾಡಿ, ಸಮಾಜದ ಸ್ವಾಸ್ಥ್ಯ ಹದಗೆಡುತ್ತಿರುವ ಇಂದಿನ ದಿನಗಳಲ್ಲಿ ಶರಣರ ವಿಚಾರಗಳನ್ನು ತಿಳಿಸಿ ಅವರನ್ನು ಸರಿದಾರಿಗೆ ತರುವ ಪ್ರಯತ್ನವಿದು. ತಂದೆ-ತಾಯಿಗಳನ್ನು ಮಕ್ಕಳೆ ಕೊಲೆ ಮಾಡುವ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಇಂತಹ ವಾತಾವರಣ ತಿಳಿಗೊಳಿಸಿ, ಶರಣರ ತತ್ವಗಳನ್ನು ಅವರಲ್ಲಿ ಬೆಳೆಸುವ ಪ್ರಯತ್ನ ಇದು ಎಂದರು.

ಈ ವೇಳೆ ಅಭಿನಯರತ್ನ ಪ್ರಶಸ್ತಿ ಪಡೆದ ಮಹಾಂತೇಶ ತ್ಯಾಮನವರ ಹಾಗೂ ಅಕಾಡೆಮಿ ಬಾಲಗೌರವ ಪ್ರಶಸ್ತಿ ಪಡೆದ ಸುಪ್ರಿಯಾ ಇಟಗಿ ಅವರನ್ನು ಸತ್ಕರಿಸಲಾಯಿತು. ತಾಲೂಕು ಶಸಾಪ ಅಧ್ಯಕ್ಷ ಡಾ. ಸಂತೋಷ ಹಿರೇಮಠ ಇದ್ದರು. ತಾಲೂಕು ಕಸಾಪದ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪದ ಗೌರವ ಕಾರ್ಯದರ್ಶಿ ಮಂಜುನಾಥ ಮುಧೋಳ ಕಾರ್ಯಕ್ರಮ ನಿರೂಪಿಸಿದರು. ಕವಿ ಕೊಟ್ರೇಶ ಜವಳಿ ವಂದಿಸಿದರು.