ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ಗಂಬೀರ ಗಾಯ

| Published : Jan 21 2024, 01:35 AM IST

ಸಾರಾಂಶ

ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆಯೊಂದು ದಾಳಿ ನಡೆಸಿರುವ ಘಟನೆ ತಾಲೂಕಿನ ಬೊಮ್ಮಲಿಂಗನ ಹಳ್ಳಿಯಲ್ಲಿ ಶನಿವಾರ ನಡೆದಿದ್ದು, ಗ್ರಾಮಸ್ಥರು ಬಾರಿ ಆತಂಕಕ್ಕೊಳಗಾಗಿದ್ದಾರೆ.

ಮೊಳಕಾಲ್ಮರು: ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆಯೊಂದು ದಾಳಿ ನಡೆಸಿರುವ ಘಟನೆ ತಾಲೂಕಿನ ಬೊಮ್ಮಲಿಂಗನ ಹಳ್ಳಿಯಲ್ಲಿ ಶನಿವಾರ ನಡೆದಿದ್ದು, ಗ್ರಾಮಸ್ಥರು ಬಾರಿ ಆತಂಕಕ್ಕೊಳಗಾಗಿದ್ದಾರೆ.

ಬಸವರಾಜ(50) ಗಾಯಗೊಂಡಿರುವ ವ್ಯಕ್ತಿ. ಇವರು ಬೆಳಗ್ಗೆ ಬಹಿರ್ದೆಸೆಗೆಂದು ಹೋಗಿದ್ದಾಗ ಪೊದೆಯಲ್ಲಿದ್ದ ಚಿರತೆ ಏಕಾಏಕಿ ದಾಳಿ ನಡೆಸಿ ಎದೆ ಮತ್ತು ಹೊಟ್ಟೆ ಭಾಗದಲ್ಲಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದೆ. ಗಾಯಗೊಂಡ ವ್ಯಕ್ತಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‌ಗೆ ದಾಖಲು ಮಾಡಲಾಗಿದೆ. ಚಿರತೆ ಸೆರೆ ಹಿಡಿಯಲು ಈಗಾಗಲೇ ಗ್ರಾಮದ ಸುತ್ತ 3 ಕಡೆ ಬೋನ್ ಇರಿಸಲಾಗಿದ್ದು ಚಿರತೆ ಸೆರೆಗೆ ಮುಂದಾಗಿದ್ದಾರೆ.

ಆತಂಕಕ್ಕೆ ಒಳಗಾಗಿರುವ ಗ್ರಾಮಸ್ಥರು: ಗ್ರಾಮವನ್ನು ಅಂಟಿಕೊಂಡಂತೆ ಚಿರತೆ ದಾಳಿ ನಡೆಸಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಒಂಟಿಯಾಗಿ ಓಡಾಡುವಲ್ಲಿ ಭಯ ಪಡುವಂತಾಗಿದೆ. ರಾತ್ರಿ ವೇಳೆ ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆ ಸೆರೆ ಹಿಡಿಯಬೇಕೆನ್ನುವುದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಬಳ್ಳಾರಿ ವೃತ್ತದ ಮುಖ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ವಲಯ ಅರಣ್ಯಾಧಿಕಾರಿ ಹರ್ಷ, ಉಪ ವಲಯ ಅರಣ್ಯಾಧಿಕಾರಿ ಹಸನ್ ಭಾಷ ಇದ್ದರು.