ಸಾರಾಂಶ
ಚಿಕ್ಕಮಗಳೂರು: ದೆಹಲಿಯಲ್ಲಿ ನಡೆದ ರೈತ ಚಳವಳಿ ಮಾದರಿಯಲ್ಲಿ ನಿವೇಶನ ಮತ್ತು ವಸತಿ ರಹಿತರ ರಾಜ್ಯಮಟ್ಟದ ಜನಾಂದೋಲನ ರೂಪಿಸಲು ಭಾರತ ಕಮ್ಯುನಿಸ್ಟ್ ಪಕ್ಷ ನಿರ್ಧರಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ರಾಜ್ಯದಲ್ಲಿ 7 ಲಕ್ಷ ಜನ ನಿವೇಶನ ರಹಿತರು ಹಾಗೂ 26 ಲಕ್ಷ ಜನ ವಸತಿ ರಹಿತರು ಇದ್ದಾರೆ ಎಂದರು.ಪಕ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆಯೇ ಭೂಮಿ ಮತ್ತು ವಸತಿ ರಹಿತರ ಸಮಸ್ಯೆ ಕೈಗೆತ್ತಿಕೊಂಡು ಹೋರಾಟ ನಡೆಸಿದ್ದು, ಈಗ ಇದನ್ನು ರಾಜ್ಯಕ್ಕೂ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ರಾಷ್ಟ್ರೀಯ ಸಮ್ಮೇಳನ ಈ ಬಾರಿ ಪಂಜಾಬಿನ ಚಂಡಿಗಢದಲ್ಲಿ ನಡೆಯಲಿದ್ದು, ಬಹುತೇಕ ದಕ್ಷಿಣ ರಾಜ್ಯಗಳಲ್ಲಿಯೇ ನಡೆಯುತ್ತಿದ್ದ ಸಮ್ಮೇಳನವನ್ನು ಈ ಬಾರಿ ಉತ್ತರ ರಾಜ್ಯಕ್ಕೆ ವಿಸ್ತರಿಸಲಾಗಿದೆ ಎಂದರು.ಪಂಜಾಬ್, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜಾತಿ ಧ್ರುವೀಕರಣ ಇತರೆ ಕಾರಣಗಳಿಂದ ಪಕ್ಷ ಹಿನ್ನಡೆ ಅನುಭವಿಸಿದ್ದು, ರಾಷ್ಟ್ರೀಯ ಸಮ್ಮೇಳನ ಪಕ್ಷವನ್ನು ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಲಿದೆ ಎಂದು ಹೇಳಿದರು.
ಇತ್ತೀಚೆಗೆ ಕಲ್ಬುರ್ಗಿ ನಗರದಲ್ಲಿ ನಡೆದ ರಾಜ್ಯ ಸಮ್ಮೇಳನದಲ್ಲಿ ರಾಜ್ಯದ ಆರ್ಥಿಕ ಅಸಮಾನತೆ, ಸಾಮಾಜಿಕ ನ್ಯಾಯ, ಕುಸಿದಿರುವ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಜನಪರ ದಿಕ್ಕಿಗೆ ತರುವ ನಿಟ್ಟಿನಲ್ಲಿ ಹೋರಾಟ ರೂಪಿಸಲು ಚರ್ಚಿಸಿದೆ ಎಂದರು.ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ, ರಾಜ್ಯದ ಯುವ ಜನರ ಉದ್ಯೋಗ ಭದ್ರತೆಗೆ ಆಗ್ರಹಿಸಲು, ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣ ಖಾತ್ರಿಪಡಿಸಲು, ದಲಿತ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಲು, ಕಾರ್ಮಿಕ ವರ್ಗದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹೋರಾಟ ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ವಸತಿ ಮತ್ತು ಭೂ ರಹಿತರ ಹಕ್ಕಿಗಳಿಗಾಗಿ ಆಗ್ರಹಿಸಲು, ರಾಜ್ಯದ ರೈತರ ಹಿತಕಾಯಲು ಹಾಗೂ ಪರಿಸರವನ್ನು ರಕ್ಷಿಸುತ್ತಲೇ ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಗಳು ಸಮತೋಲಿತ ನಿಲುವನ್ನು ತೆಗೆದುಕೊಳ್ಳುವಂತೆ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ವಿವರಿಸಿದರು.ರಾಜ್ಯದಲ್ಲಿ ಬಲಿಷ್ಠ ಕಮ್ಯುನಿಸ್ಟ್ ಚಳುವಳಿ ಕಟ್ಟಲು, ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಟ್ಟುಗೂಡಿಸಿ ಕೋಮುವಾದಿ, ಫಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ಹಲವು ಸಂಘಟನಾ ನಿರ್ಣಯಗಳನ್ನೂ ಕೈಗೊಳ್ಳಲಾಯಿತು ಎಂದರು.
ರಾಜ್ಯದಲ್ಲಿ ಐಎನ್‌ಡಿಐಎ ಮೈತ್ರಿಕೂಟ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಈ ಚುನಾವಣೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದರೂ ನಂತರ ನಿಷ್ಕ್ರಿಯವಾಗಿದೆ ಎಂದು ಟೀಕಿಸಿದರು.ಕೂಡಲೇ ಈ ಮೈತ್ರಿ ಕೂಟವನ್ನು ಬಲಪಡಿಸಿ ಕೋಮುವಾದಿ ಫಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟ ರೂಪಿಸಲು ಮತ್ತು ಮುಂಬರುವ ಚುನಾವಣೆಯಲ್ಲಿ ಮೈತ್ರಿಕೂಟ ಒಂದಾಗಿ ಚುನಾವಣೆ ಎದುರಿಸಲು ಸಿಪಿಐ ರಾಜ್ಯ ಸಮ್ಮೇಳನ ಕರೆ ನೀಡಿದೆ ಎಂದು ಹೇಳಿದರು
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ರಘು, ಸೋಮೇಗೌಡ, ಕರೆಮಕ್ಕಿ ರಮೇಶ್, ರಾಮನಹಳ್ಳಿ ರಮೇಶ್‌ಕುಮಾರ್ ಉಪಸ್ಥಿತರಿದ್ದರು.