ಸಾರಾಂಶ
ಗಾಂಧಿ ವೃತ್ತದಲ್ಲಿ ಘಟನೆ । ಮೂವರಿಗೆ ತೀವ್ರ ಗಾಯ-ಕಾರ್, ಬೈಕ್ ಜಖಂ
ಕನ್ನಡಪ್ರಭ ವಾರ್ತೆ ಸಿಂಧನೂರುನಗರದ ಮಹಾತ್ಮಗಾಂಧಿ ವೃತ್ತದಲ್ಲಿ ವಿಧಾನ ಪರಿಷತ್ ನೂತನ ಸದಸ್ಯ ಬಸನಗೌಡ ಬಾದರ್ಲಿ ಅವರಿಗೆ ಸ್ವಾಗತ ಕೋರುವ ಬೃಹತ್ ಗಾತ್ರದ ಕಮಾನು ಸೋಮವಾರ ಗಾಳಿಯಿಂದ ನೆಲಕ್ಕುರುಳಿದ ಪರಿಣಾಮ ಮೂರು ಜನರಿಗೆ ತೀವ್ರ ಗಾಯಾಗಳಾಗಿದ್ದು, ಕಾರ್ ಹಾಗೂ ಬೈಕ್ ಜಖಂಗೊಂಡಿರುವ ಘಟನೆ ಜರುಗಿದೆ.
ವಿಧಾನ ಪರಿಷತ್ ಸದಸ್ಯರಾದ ನಂತರ ಪ್ರಥಮ ಬಾರಿಗೆ ಸಿಂಧನೂರಿಗೆ ಆಗಮಿಸುತ್ತಿರುವ ಬಸನಗೌಡ ಬಾದರ್ಲಿ ಅವರಿಗೆ ಸ್ವಾಗತ-ಸುಸ್ವಾಗತ ಎಂಬ ಬೃಹತ್ ಗಾತ್ರದ ಕಮಾನನ್ನು ಎರಡು ದಿನಗಳ ಹಿಂದೆ ನಿರ್ಮಿಸಲಾಗಿತ್ತು. ಸೋಮವಾರ ಮಧಾಹ್ನ 1 ಗಂಟೆ ಸುಮಾರಿಗೆ ಗಾಳಿ ಬೀಸಿದ ರಭಸಕ್ಕೆ ಏಕಾಏಕಿ ಸಿಗ್ನಿಲ್ ಕಂಬ ಮುರಿದುಕೊಂಡು ಕಬ್ಬಿಣದ ಕಮಾನು ನೆಲಕ್ಕೆ ಉರುಳಿದೆ. ಈ ಸಮಯದಲ್ಲಿಯೇ ಗ್ರೀನ್ ಸಿಗ್ನಲ್ ಬಿದ್ದಿದ್ದರಿಂದ ಈ ಕಮಾನಿನ ಅಡಿಯಲ್ಲಿ ನಿಂತಿದ್ದ ವಾಹನಗಳ ಸವಾರರು ಮುಂದೆ ಸಾಗಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಅನೇಕರು ಪಾರಾಗಿದ್ದಾರೆ.ಆದರೆ ಮಸ್ಕಿ ತಾಲೂಕಿನ ವೀರಾಪುರ ಗ್ರಾಮದ ಅಂಬಮ್ಮ ಮತ್ತು ಅವರ ಪತಿ ಯಮನಪ್ಪ ಬ್ಯಾಂಕ್ ಕೆಲಸಕ್ಕೆಂದು ಸಿಂಧನೂರಿಗೆ ಬಂದು ಪುನಃ ಸ್ವಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಕಮಾನು ಅವರ ಮೇಲೆ ಬಿದ್ದಿದೆ. ಅಲ್ಲದೆ ನ್ಯಾಯಾಲಯದ ಗೇಟ್ ಬಳಿ ಮಗನ ಬೈಕ್ ಹತ್ತಿ ಹೊರಟಿದ್ದ ಚಿಟ್ಟಿಬಾಬು ಬೂದಿಹಾಳ ಕ್ಯಾಂಪ್ ಅವರ ಕಾಲಿನ ಮೇಲೂ ಕಮಾನು ಬಿದ್ದಿದ್ದು, ಬೈಕ್ ಜಖಂಗೊಂಡಿದೆ. ಜೊತೆ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಬಡಿಗೇರ್ ಅವರ ಸಿಪ್ಟ್ ಡಿಜೈರ್ ಕಾರಿನ ಮೇಲೆ ಬಿದಿದ್ದರಿಂದ ಕಾರಿನ ಎರಡು ಹೆಡ್ಲೈಟ್, ಇಂಜಿನ್ ಡ್ಯಾಮೇಜ್ ಆಗಿದೆ. ಇದರಿಂದ ಸುಮಾರು ಒಂದು ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
ಕಮಾನು ಮೂರು ಜನರ ಮೇಲೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸಂಚಾರಿ ಮತ್ತು ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ಮೇಲಕ್ಕೆ ಎತ್ತಿ ಗಾಯಾಳುಗಳನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಅಂಬಮ್ಮ ವೀರಾಪುರ (36) ಅವರಿಗೆ ಬಲಗಾಲಿನ ತೊಡೆ ಭಾಗದಲ್ಲಿ ಎಲುಬು ಮುರಿದಿದ್ದು, ಯಮನಪ್ಪ (40) ಅವರಿಗೆ ಎಡಬುಜದ ಎಲುಬು ಮುರಿದಿದೆ, ನಡುವಿಗೂ ತೀವ್ರ ಪೆಟ್ಟಾಗಿದೆ. ಇನ್ನು ಚಿಟ್ಟಿಬಾಬು ಬೂದಿಹಾಳ ಕ್ಯಾಂಪ್ (54) ಅವರಿಗೆ ಬಲಕಾಲಿನ ಪಾದದ ಮೇಲ್ಭಾಗದಲ್ಲಿ ಒಳಪೆಟ್ಟಾಗಿ ಬಾವು ಬಂದಿದೆಂದು ಖಾಸಗಿ ವೈದ್ಯರು ತಿಳಿಸಿದರು.ಮುಖಂಡರೋಡನೆ ವಾಗ್ವಾದ:
ಮೂವರು ಗಾಯಾಳುಗಳನ್ನು ಶಾಂತಿ ಆಸ್ಪತ್ರೆಗೆ ದಾಖಲಿಸಿದಾಗ ಜಿಪಂ ಸದಸ್ಯ ಬಾಬುಗೌಡ ಬಾದರ್ಲಿ ಭೇಟಿ ನೀಡಿ ಸಾಂತ್ವನ ಹೇಳಿ ತೆರಳಿದರು. ಈ ವೇಳೆ ಬಾಲಸ್ವಾಮಿ ವಕೀಲ ಹಾಗೂ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಎಂಎಲ್ಸಿ ಮಾಡಿಕೊಳ್ಳಲು ಗಾಯಾಳುಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಆಗ ಬಂದ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ‘ನಾವು ಗಾಯಾಳುಗಳಿಗೆ ತೋರಿಸುತ್ತೇವೆ, ಅದರ ಖರ್ಚು ಭರಿಸುತ್ತೇವೆ ಎಂದು ಹೇಳಿದಾರೂ ಕೇಸ್ ಮಾಡುತ್ತೀರೇನು, ಇದರಲ್ಲಿ ರಾಜಕೀಯ ಮಾಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಕೀಲರು, ದಲಿತ ಮುಖಂಡರು ಹಾಗೂ ಸೋಮನಗೌಡರ ನಡುವೆ ವಾಗ್ವಾದ ನಡೆಯಿತು.
ಅನುಮತಿ ಪಡೆದಿಲ್ಲ:ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರಿಗೆ ಸ್ವಾಗತ ಕೋರುವ ಬ್ಯಾನರ್‌ಗಳು, ಪ್ಲೆಕ್ಸ್ ಹಾಗೂ ಗಾಂಧಿ ವೃತ್ತದಲ್ಲಿ ಬೃಹತ್ ಗಾತ್ರದ ಸ್ವಾಗತ ಕಮಾನು ಹಾಕಲು ಅವರ ಬೆಂಬಲಿಗರು ಕೇವಲ ಅರ್ಜಿ ಸಲ್ಲಿಸಿದ್ದಾರೆ. ಆದರೆ ಶುಲ್ಕವನ್ನು ಪಾವತಿಸಿ ಅನುಮತಿ ಪತ್ರದ ಆದೇಶವನ್ನು ಪಡೆದುಕೊಂಡಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದರು.