ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಪೈಪೋಟಿಯಲ್ಲಿ ಹಗರಣ ನಡೆಯುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಆರೋಪಿಸಿದರು.ನಗರದಲ್ಲಿ ಶನಿವಾರ ಸಂಜೆ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಹಗರಣಗಳ ಬಗ್ಗೆ ಪಕ್ಷದಿಂದ ಪಾದಯಾತ್ರೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ವಾಲ್ಮೀಕಿ ನಿಗಮ, ಎಂಡಿಎಯಲ್ಲಿ ಅವ್ಯವಹಾರ ನಡೆದಿದ್ದು, ವಾಲ್ಮೀಕಿ ನಿಗಮದ ಹಗರಣದ ಕುರಿತಂತೆ ಸದನದಲ್ಲಿ ಚರ್ಚೆ ನಡೆಯಿತು. 87 ಕೋಟಿ ಹಗರಣ ಆಗಿರುವ ಬಗ್ಗೆ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಲೂಟಿ ಮಾಡಿ, ರಾಜ್ಯದ ಬೊಕ್ಕಸವನ್ನು ಲೋಕಸಭಾ ಚುನಾವಣೆಗೆ ಬೇರೆ ಬೇರೆ ರಾಜ್ಯಗಳಿಗೆ ಬಳಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.ಎಂಡಿಎ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬದವರು ಭಾಗಿಯಾಗಿದ್ದು, ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಹಗರಣದಲ್ಲಿ ಭಾಗಿಯಾದವರಿಗೆ ಕಾನೂನು ಮೂಲಕ ಶಿಕ್ಷೆ ಕೊಡಿಸಬೇಕು ಎಂದು ಅವರು ಆಗ್ರಹಿಸಿದರು.
ಮೈಸೂರು ಭಾಗದಲ್ಲಿ ಜೆಡಿಎಸ್ಪ್ರಾಬಲ್ಯವಿದ್ದು, ಮಂಡ್ಯದ ಜನರು ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ ಕಾರಣ ಇಂಡಿಯಾದಲ್ಲಿ ಒಳ್ಳೆಯ ಹೆಸರು ಸಿಕ್ಕಿದೆ. ದೇಶಕ್ಕೆ ಗೌರವ ತರುವ ನಿಟ್ಟಿನಲ್ಲಿ ಎಚ್.ಡಿ. ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ. ಅದರಂತೆ ನಿಖಿಲ್ ಕುಮಾರಸ್ವಾಮಿ ಅವರು 24 ಗಂಟೆ ಕೆಲಸ ಮಾಡುವ ಮೂಲಕ ಕುಮಾರಸ್ವಾಮಿ ನಂತರದಲ್ಲಿ ಪಕ್ಷ ಸಂಘಟಿಸತ್ತಿದ್ದಾರೆ. ಜೆಡಿಎಸ್ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.ರಾಜ್ಯ ಪ್ರವಾಸ
ಜೆಡಿಎಸ್ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಮಾತನಾಡಿ, ಲೋಕಸಭಾ ಚುನಾವಣೆ ವೇಳೆ ತೆಗೆದುಕೊಂಡ ನಿರ್ಧಾರವನ್ನು ವಿಧಾನಸಭಾ ಚುನಾವಣೆಯಲ್ಲಿ ತೆಗೆದುಕೊಂಡಿದ್ದರೆ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಅಧಿಕಾರದಲ್ಲಿ ಇರುತ್ತಿತ್ತು. ಸದ್ಯ ಜೆಡಿಎಸ್ ಗೆ ಹೊಸ ಹುರುಪು ಬಂದಿದ್ದು, ಇದಕ್ಕೆ ಮಂಡ್ಯ ಜನರ ಆಶಿರ್ವಾದವೇ ಕಾರಣವಾಗಿದೆ ಎಂದರು.ಪಕ್ಷದಲ್ಲಿ ಯುವಕರಿಗೆ ಅವಕಾಶ ಕೊಡಬೇಕೆಂಬ ಆಶಯದಲ್ಲಿ ನನಗೆ ಟಿಕೆಟ್ ನೀಡಲಾಗಿತ್ತು. ಆದರೆ ಕೆಲವು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿದ್ದು, ಈ ಕುರಿತಾಗಿ ನಾನು ಮಾತನಾಡುವುದಿಲ್ಲ. ಸದ್ಯ ಹಿರಿಯ ನಾಯಕರ ಸಲಹೆ, ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಆಷಾಢದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಅವರು ಹೇಳಿದರು.
ಶಾಸಕರಾದ ಜಿ.ಡಿ. ಹರೀಶ್ಗೌಡ, ಸಿ.ಎನ್. ಮಂಜೇಗೌಡ, ವಿವೇಕಾನಂದ, ಮಾಜಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕರಾದ ಅಶ್ವಿನ್ ಕುಮಾರ್, ಅನ್ನದಾನಿ, ಕೆ. ಮಹದೇವ್, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಮಾಜಿ ಮೇಯರ್ ಎಂ.ಜೆ. ರವಿಕುಮಾರ್ ಮೊದಲಾದವರು ಇದ್ದರು.----ಬಾಕ್ಸ್...
ಇಲ್ಲದ ಆರೋಪ ಸರಿಯಲ್ಲ: ಜಿ.ಡಿ. ಹರೀಶ್ ಗೌಡಎಂಡಿಎ ಹಗರಣದಲ್ಲಿ ರಾಜ್ಯ ಸರ್ಕಾರ ತನಿಖೆ ಮಾಡಿ, ಕ್ರಮ ಕೈಗೊಳ್ಳದೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಖಂಡಿಸಿದರು.
ಎಂಡಿಎ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತದಲ್ಲಿ ಕೈಗೊಂಡಿರುವ ಪಾದಯಾತ್ರೆಗೆ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿ, ಸರ್ಕಾರದ ಹೊಣೆಗಾರಿಕೆಯನ್ನು ಎತ್ತಿ ಹಿಡಿಯಲು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.