ಸಾರಾಂಶ
ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಈ ಆವರಣದಲ್ಲಿ ಕಾಲಿಟ್ಟರೆ ಸಾಕು ಬಗೆಬಗೆಯ ಸುಂದರ ಸಸಿಗಳೇ ಕಾಣಸಿಗುತ್ತವೆ. ಕಟ್ಟಡದ ಆವರಣದಲ್ಲೂ ಹಲವು ತಳಿಗಳ ಹೂವಿನ ಗಿಡಗಳ ಗುಚ್ಚ. ಇದು ಯಾವುದೋ ಸಸ್ಯ ತೋಟವಲ್ಲ, ಇದು ಇಲ್ಲಿನ ಹಳೇ ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆಯ ನೋಟ.
ಈ ಠಾಣೆಯು ಜನಸ್ನೇಹಿಯೊಂದಿಗೆ ಪರಿಸರಸ್ನೇಹಿಯಾಗಿ ಕಂಗೊಳಿಸುತ್ತಿದೆ. ಠಾಣೆಯ ಇನಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ರಾಘವೇಂದ್ರ ಹಳ್ಳೂರ ಅವರ ವಿಶೇಷ ಕಾಳಜಿಯಿಂದಾಗಿ ಇಂದು ಠಾಣೆಯ ಆವರಣದಲ್ಲಿ ಒಂದು ಸುಂದರ ಉದ್ಯಾನವನ್ನೇ ನಿರ್ಮಿಸಲಾಗಿದೆ. ಇಲ್ಲಿ ವಿವಿಧ ಬಗೆಬಗೆಯ ಹಣ್ಣು, ಹೂವುಗಳ ಸಸಿಗಳು ಕಾಣಸಿಗುತ್ತವೆ.ಹಳೇ ಹುಬ್ಬಳ್ಳಿಯ ಬಾಣತಿಕಟ್ಟೆ ವೃತ್ತದ ಬಳಿ ಇರುವ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿ ಒಂದು ವರ್ಷವಾಯಿತು. ಪೊಲೀಸ್ ಇನಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿಶೇಷ ಕಾಳಜಿಯಿಂದಾಗಿ ಒಂದೇ ವರ್ಷದಲ್ಲಿ ಸುಂದರ ಉದ್ಯಾನ ಹೊಂದಿರುವ ಮಾದರಿ ಪೊಲೀಸ್ ಠಾಣೆಯಾಗಿ ಜನಮೆಚ್ಚುಗೆಗೆ ಪಾತ್ರವಾಗಿದೆ.
ಠಾಣೆಯ ಒಳಗೂ ಹಸಿರು:ಠಾಣೆಯ ಹೊರಭಾಗದಲ್ಲಿ ಅಷ್ಟೇ ಅಲ್ಲ ಒಳಭಾಗವೂ ಸಸಿಗಳಿಂದ ಕಂಗೊಳಿಸುತ್ತಿದೆ. ಠಾಣೆಯ ಒಳಗೆ ಹೋದರೆ ಸಾಕು ನಮಗೆ ಮೊದಲು ಕಾಣಸಿಗುವುದು ವಿವಿಧ ಬಗೆಬಗೆಯ ಸಸಿಗಳು. ಠಾಣೆಯ ಒಳಾಂಗಣ, ಅಧಿಕಾರಿಗಳ ಕೋಣೆಯಲ್ಲೂ ಬಗೆಬಗೆಯ ಸುಂದರವಾದ ಸಸಿಗಳನ್ನು ಕಾಣಬಹುದಾಗಿದೆ.
ಸಿಬ್ಬಂದಿಗಳಿಂದಲೇ ನಿರ್ವಹಣೆ:ವಿಶೇಷವೆಂದರೆ ಈ ಉದ್ಯಾನದ ಸಂಪೂರ್ಣ ನಿರ್ವಹಣೆ ಮಾಡುವುದು ಇಲ್ಲಿನ ಪೊಲೀಸ್ ಸಿಬ್ಬಂದಿಗಳೆ. ನಿತ್ಯವೂ ಪೊಲೀಸರು ತಮ್ಮ ಬಿಡುವಿನ ವೇಳೆಯಲ್ಲಿ ಉದ್ಯಾನದಲ್ಲಿರುವ ಸಸಿಗಳಿಗೆ ನೀರುಣಿಸುವುದು, ಶುಚಿಗೊಳಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ.
ಎಲ್ಲೆಲ್ಲೂ ಹಸಿರೇ ಹಸಿರು:ಇಲ್ಲಿ ಒಟ್ಟು 75 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 36 ಗುಂಟೆ ಜಾಗ ಹೊಂದಿದ್ದು, ಠಾಣೆಯ ಸುತ್ತಲೂ ತೆಂಗು, ಸಂಪಿಗೆ, ಪೇರಲ ಸೇರಿದಂತೆ ವಿವಿಧ ಬಗೆಯ ಗಿಡಗಳನ್ನು ಬೆಳೆಸಲಾಗಿದೆ. 5 ಗುಂಟೆ ಜಾಗದಲ್ಲಿ ಠಾಣೆಯ ಕಟ್ಟಡ ಹೊಂದಿದೆ. 5-6 ಗುಂಟೆ ಜಾಗದಲ್ಲಿ ಈಗಾಗಲೇ ಸುಂದರ ಉದ್ಯಾನ ನಿರ್ಮಿಸಲಾಗಿದೆ. ಉಳಿದ ಜಾಗವನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗಿದ್ದು, ವಾಲಿಬಾಲ್, ಕಬ್ಬಡ್ಡಿ ಗ್ರೌಂಡ್ ಮಾಡುವ ಉದ್ದೇಶ ಹೊಂದಲಾಗಿದೆ. ಪ್ರತಿ ಭಾನುವಾರ ಎಲ್ಲ ಸಿಬ್ಬಂದಿಗಳಿಂದ ಉದ್ಯಾನದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ.
ಸಸಿ ನೆಡುವ ಕಾರ್ಯ:ಠಾಣೆಯ ಸಿಬ್ಬಂದಿ ಜನ್ಮದಿನಾಚರಣೆ, ಮದುವೆ, ಸಭೆ ಸಮಾರಂಭಗಳು ಏನೆ ಇರಲಿ ಇಲ್ಲಿನ ಉದ್ಯಾನದಲ್ಲಿ ಸಸಿ ನೆಡುವ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ವಿಶೇಷ. ಹಾಗಾಗಿ ಪ್ರತಿಯೊಬ್ಬ ಸಿಬ್ಬಂದಿಯೂ ಇಲ್ಲಿ ಹಲವು ಬಣ್ಣಗಳ ಗುಲಾಬಿ, ಸೇವಂತಿಗೆ, ಮಲ್ಲಿಗೆ, ತುಳಸಿ, ಅಮೃತಬಳ್ಳಿ, ಮೆಂಥಾಲ್, ಅಲೊವೇರಾ ಸೇರಿದಂತೆ ನೂರಾರು ಬಗೆಬಗೆಯ ಸಸಿಗಳನ್ನು ಇಲ್ಲಿ ನೆಟ್ಟು ಪೋಷಿಸುತ್ತಿದ್ದಾರೆ. ಸಾರ್ವಜನಿಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಠಾಣೆಯ ಆವರಣದಲ್ಲಿ ಸುಂದರ ಉದ್ಯಾನ ನಿರ್ಮಿಸಲು ಇಲ್ಲಿನ ಸಿಬ್ಬಂದಿ ಕಾರ್ಯ ಪ್ರಮುಖವಾಗಿದೆ. ಠಾಣೆಗೆ ಬರುವವರಿಗೆ ಇಲ್ಲಿನ ಪರಿಸರ ನೋಡಿ ಸಂತಸ ಮೂಡಬೇಕು. ಠಾಣೆಯ ಶುಚಿತ್ವಕ್ಕೂ ಹೆಚ್ಚಿನ ಕಾಳಜಿ ನೀಡಲಾಗಿದೆ ಎನ್ನುತ್ತಾರೆ ಠಾಣೆಯ ಇನಸ್ಪೆಕ್ಟರ್ ರಾಘವೇಂದ್ರ ಹಳ್ಳೂರ.ಪೊಲೀಸ್ ಠಾಣೆ ಜನಸ್ನೇಹಿಯೊಂದಿಗೆ ಪರಿಸರಸ್ನೇಹಿಯಾಗಿ ಕಂಗೊಳಿಸುತ್ತಿರುವುದಕ್ಕೆ ಪೊಲೀಸ್ ಇನಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಅವರ ವಿಶೇಷ ಕಾಳಜಿಯೇ ಕಾರಣ. ಠಾಣೆಯ ಎಲ್ಲ ಸಿಬ್ಬಂದಿ ಇದಕ್ಕೆ ಕೈಜೋಡಿಸಿದ್ದಾರೆ ಎಂದು ಮಾಹಿತಿ ನೀಡಿದರು ಠಾಣೆಯ ಪಿಎಸ್‌ಐ ವಿಶ್ವನಾಥ.
ಹು-ಧಾ ಮಹಾನಗರದಲ್ಲಿ ಇಷ್ಟೊಂದು ಸುಂದರವಾದ ಪೊಲೀಸ್ ಠಾಣೆ ಎಲ್ಲಿಯೂ ಇಲ್ಲ. ಠಾಣೆಯ ಒಳಗೆ ಕಾಲಿಟ್ಟರೆ ಸಾಕು ಎಲ್ಲೆಲ್ಲೂ ಹಸಿರೇ ಹಸಿರು. ಪರಿಸರಸ್ನೇಹಿ ಠಾಣೆಯಾಗಿಸಿದ ಪೊಲೀಸರ ಕಾರ್ಯ ಅಭಿನಂದನಾರ್ಹ ಎನ್ನತ್ತಾರೆ ಸ್ಥಳೀಯ ನಿವಾಸಿ ಕಾಶೀಮ ನದಾಫ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))