ಶ್ರೀರಾಮನ ಪ್ರತಿಷ್ಠಾಪನೆಗೆ ಮುಹೂರ್ತ ತಯಾರಾಗಿದ್ದು ಬೆಳಗಾವಿಯಲ್ಲೇ

| Published : Jan 21 2024, 01:35 AM IST

ಶ್ರೀರಾಮನ ಪ್ರತಿಷ್ಠಾಪನೆಗೆ ಮುಹೂರ್ತ ತಯಾರಾಗಿದ್ದು ಬೆಳಗಾವಿಯಲ್ಲೇ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾವಿಹಾರ ವಿದ್ಯಾಲಯ ಕುಲಪತಿ, ವಿಜಯೇಂದ್ರ ಶರ್ಮಾರಿಂದ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ತಯಾರಿಸಿಕೊಟ್ಟಿದ್ದಾರೆ ಎನ್ನುವುದು ಈಗ ವಿಶೇಷ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಯೋಧ್ಯೆ ಶ್ರೀರಾಮಚಂದ್ರನ ಭವ್ಯ ಮಂದಿರದ ಶಂಕುಸ್ಥಾಪನೆಗೆ ಹಾಗೂ ಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಮುಹೂರ್ತ ಗಡಿ ಜಿಲ್ಲೆ ಬೆಳಗಾವಿಯಲ್ಲೇ ನಿಗದಿಯಾಗಿದೆ.

ಬೆಳಗಾವಿಯ ನವ ಬೃಂದಾವನ ನಿವಾಸಿ ವಿಜಯೇಂದ್ರ ಶರ್ಮಾ ಅವರು ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸಿದ್ದಾರೆ. ವಿಜಯೇಂದ್ರ ಶರ್ಮಾ ಅವರು ವಿದ್ಯಾವಿಹಾರ ವಿದ್ಯಾಲಯ ಕುಲಪತಿಯೂ ಆಗಿದ್ದಾರೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಪ್ಠಾಪನೆಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ ಕೋಶ್ಯಾಧ್ಯಕ್ಷ ಸ್ವಾಮಿ ಗೋವಿಂದ್ ದೇವಗಿರಿ ಅವರು ವಿಜಯೇಂದ್ರ ಶರ್ಮಾ ಅವರ ಬಳಿ ಮುಹೂರ್ತ ಕೇಳಿದ್ದರು.

ಬಳಿಕ ವಿಜಯೇಂದ್ರ ಶರ್ಮಾ ಅವರು ದೇವಾಲಯದ ಒಳಗೆ ಮೂರ್ತಿ ಪ್ರವೇಶ ಜ.18 ಮತ್ತು ಪ್ರಾಣ ಪ್ರತಿಷ್ಠಾಪನೆಗೆ ಜ.22ರ ಈ ಎರಡು ದಿನದ ಮುಹೂರ್ತವನ್ನು ನಿಗದಿಪಡಿಸಿ 2023ರ ಏಪ್ರಿಲ್‌ 15ರಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ಗೆ ಪತ್ರದ ಮೂಲಕ ಕಳುಹಿಸಿದ್ದರು.

ಜ.22 ರಂದು ರಾಮಲಲ್ಲಾನ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಜ.22ರಂದು ಪಂಚಾಂಗದ ಪ್ರಕಾರ ಮೃಗಶಿರಾ ನಕ್ಷತ್ರವಿದ್ದು, ಮಧ್ಯಾಹ್ನ 12.15 ರಿಂದ 12.45ರ ನಡುವೆ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರಾಣ ತುಂಬಲಾಗುತ್ತದೆ. ಈ ಸಮಯದಲ್ಲಿ ಅಭಿಜಿನ್ ಮುಹೂರ್ತವಿದೆ. ಇದೇ ಸಮಯದಲ್ಲಿ ರಾಮನ ಜನನವಾಯಿತು ಎಂಬ ಕಾರಣದ ಜತೆಗೆ, ಈ ವೇಳೆ ಅಮೃತ ಸಿದ್ಧಿಯೋಗ, ಸರ್ವಾರ್ಥ ಸಿದ್ಧಿಯೋಗಗಳಿವೆ.

ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರ ಭವ್ಯ ಮಂದಿರದ ಶಂಕುಸ್ಥಾಪನೆಗೂ ವಿಜಯೇಂದ್ರ ಶರ್ಮಾ ಅವರೇ ಮುಹೂರ್ತವನ್ನು ನೀಡಿದ್ದರು ಎಂಬುವುದು ವಿಶೇಷ. 2020ರ ಆ.5 ರಂದು ಭದ್ರಯೋಗದಲ್ಲಿ ರಾಮಮಂದಿರದ ನಿರ್ಮಾಣದ ಶಂಕುಸ್ಥಾಪನೆಗೆ ಭೂಮಿ ಪೂಜೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೆರವೇರಿಸಿದ್ದರು.

--------

ಕೋಟ್‌....

ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ ಕೋಶ್ಯಾಧ್ಯಕ್ಷ ಸ್ವಾಮಿ ಗೋವಿಂದ್ ದೇವಗಿರಿ ಅವರ ಕೋರಿಕೆಯ ಮೇರೆಗೆ ನಾನು ಮುಹೂರ್ತ ನಿಗದಿಪಡಿಸಿ, ಅದನ್ನು ಅವರಿಗೆ ಕಳುಹಿಸಿದ್ದೆ. ಇದು ಹೆಮ್ಮೆಯ ವಿಚಾರ. ಆದರೆ, ಅನಾರೋಗ್ಯದ ಕಾರಣ ನಾನು ಅಯೋಧ್ಯೆಗೆ ತೆರಳುತ್ತಿಲ್ಲ.

- ವಿಜಯೇಂದ್ರ ಶರ್ಮಾ, ಕುಲಪತಿ ವಿದ್ಯಾ ವಿಹಾರ ವಿದ್ಯಾಲಯ ಬೆಳಗಾವಿ