ಸಾರಾಂಶ
ಛಂದಸ್ಸು, ಸಂಧಿ, ವ್ಯಾಕರಣ ಸೃಷ್ಠಿಗೆ ಹೊಸ ತಂತ್ರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಎರಡು ಸಾವಿರ ವರ್ಷಗಳ ಹಿಂದೆ ನಮ್ಮ ಶಾಸ್ತ್ರಜ್ಞರು 1 ಮತ್ತು 0 ಅಂಕಿಗಳನ್ನು ಬಳಸಿಕೊಂಡು ಎಡದಿಂದ ಬಲಕ್ಕೆ ಗುಣಾತ್ಮಕತೆ ಮಾಡುವ ಮೂಲಕ ಛಂದಸ್ಸನ್ನು ರಚಿಸಿದರು ಎಂದು ಜರ್ಮನಿಯ ಮ್ಯೂನಿಚ್‌ನ ಸ್ಟ್ರೆಸ್ ಅಥಾರಿಟಿಯ ಏರೋಸ್ಪೇಸ್ ಪ್ರೊಫೆಶನಲ್ ರಾಘವೇಂದ್ರ ಪ್ರಸಾದ್ ಲಕ್ಷ್ಮಣ್‌ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಮಂಗಳವಾರ ಆಯೋಜಿಸಿದ್ದ ಶಾಸ್ತ್ರಜ್ಞಾನಕ್ಕೆ ತಂತ್ರಜ್ಞಾನದ ಚೌಕಟ್ಟು, ತಂತ್ರಾಂಶದಿಂದ ಕನ್ನಡ ವ್ಯಾಕರಣ ಹಾಗೂ ಛಂದಸ್ಸಿನ ವಿಶ್ಲೇಷಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಾಹ್ಮಿ ತಂತ್ರಾಂಶವನ್ನು ಬಳಸಿಕೊಂಡು ವ್ಯಾಕರಣ ತಂತ್ರಾಂಶ ಮತ್ತು ಕವನ ಎಂಬ ಎರಡು ತಂತ್ರಾಂಶವನ್ನು ಕನ್ನಡ ಭಾಷೆಯಲ್ಲಿಯೇ ಸೃಷ್ಟಿ ಮಾಡಲಾಗಿದೆ. ಈ ಎರಡು ತಂತ್ರಾಂಶಗಳನ್ನು ಬಳಸಿಕೊಂಡು ಕನ್ನಡದಲ್ಲಿ ಛಂದಸ್ಸು, ಸಂಧಿ, ವ್ಯಾಕರಣ, ಅಲಂಕಾರಗಳನ್ನು ಹಾಗೂ ಕರ್ಣಾಟಕ ಸಂಗೀತದ ರಾಗವನ್ನು ಸೃಷ್ಟಿ ಮಾಡಬಹುದಾಗಿದೆ ಎಂದು ಹೇಳಿದರು.ಕವನ ತಂತ್ರಾಂಶವನ್ನು ಬಳಸಿಕೊಂಡು ತತ್ಸಮ, ವೈದಿಕ ಹಾಗೂ ಮಾತ್ರೆ ಛಂದಸ್ಸುಗಳ ಜೊತೆಗೆ ಹೊಸ ಛಂದಸ್ಸುಗಳನ್ನು ಸೃಷ್ಟಿಸಬಹುದಾಗಿದೆ. ಛಂದಸ್ಸುಗಳ ಲಕ್ಷಣಗಳಿಗೆ ಅನುಗುಣವಾಗಿ ರಚನೆಯನ್ನು ಮಾಡಬಹುದು. ಕವನ ತಂತ್ರಾಂಶವು ಆದಿ ಮತ್ತು ಅಂತ್ಯ ಪ್ರಾಸಗಳೊಂದಿಗೆ ಸಗಣ, ಜಗಣಗಳ ಲಕ್ಷಣಗಳನ್ನು ಗುರುತಿಸುತ್ತದೆ. ನಾವು ಬರೆದ ಪದ್ಯಕ್ಕೆ, ಪದ್ಯದ ಲಕ್ಷಣ ಹಾಗೂ ಛಂದಸ್ಸಿನ ಗುಂಪನ್ನು ಗುರುತಿಸಿ, ಅದರ ಶಿಥಿಲದ್ವಿತ್ವವನ್ನು ತೋರಿಸುತ್ತದೆ. ಈ ತಂತ್ರಾಂಶದಲ್ಲಿ 8193 ಬೇರೆ ಬೇರೆಯ ಛಂದಸ್ಸನ್ನು ಸೃಷ್ಟಿ ಮಾಡಬಹುದು ಎಂದರು.ಈ ತಂತ್ರಾಂಶದಲ್ಲಿ 32 ಸಾವಿರ ಛಂದಸ್ಸುಗಳು ಇದ್ದು, ಛಂದಸ್ಸಿಗೆ ಅನ್ವಯವಾಗುವಂತೆ ಪದ್ಯಗಳನ್ನು ರಚನೆ ಮಾಡಬಹುದಾಗಿದೆ. ಪದವನ್ನು ಬಿಡಿಸಿ ಸಂಧಿಗಳನ್ನು ವಿಭಾಗಿಸಿ ಸಂಧಿಯ ಹೆಸರನ್ನುಗುರುತಿಸಬಹುದು. ಈ ತಂತ್ರಾಂಶದಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತ ಪದ ಪುಂಜಗಳನ್ನು ಸೇರಿಸಲಾಗುವುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ನಮ್ಮಲ್ಲಿ ನಡೆಯುವ ಆಂತರಿಕ ಕಲಹಗಳೇ ನಮ್ಮ ಅವನತಿಗೆ ಕಾರಣವಾಗುತ್ತಿವೆ. ಭಾರತದಲ್ಲಿದ್ದಾಗ ನಾವು ಭಾರತೀಯರಾಗಿರುವುದಿಲ್ಲ. ಭಾರತ ಬಿಟ್ಟು ಹೊರ ದೇಶಗಳಿಗೆ ಹೋದ ಮೇಲೆ ನಿಜವಾದ ಭಾರತೀಯರಾಗುತ್ತೇವೆ. ಆಗ ನಮ್ಮಲ್ಲಿ ದೇಶದ ಪ್ರಜ್ಞೆ ಮೂಡುತ್ತದೆ ಎಂದರು.ವಿವಿಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಗಳು ನಡೆಯಬೇಕು. ಕನ್ನಡದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ತುಮಕೂರು ವಿವಿಯಲ್ಲಿ ಶೀಘ್ರದಲ್ಲೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನ ಪದವಿ ಹಾಗೂ ಸಂಶೋಧನ ಕೇಂದ್ರವನ್ನು ಶುರುಮಾಡಲಿದ್ದೇವೆ ಎಂದು ತಿಳಿಸಿದರು.ಕುಲಸಚಿವೆ ನಾಹಿದಾ ಜಮ್‌ಜಮ್ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಡೀಪ್ ಫೇಕ್, ಹ್ಯಾಕಿಂಗ್, ಸಮಸ್ಯೆಗಳು ಹೆಚ್ಚುತ್ತಿವೆ. ಎಐ ಬಳಕೆ ಮಾಡಿಕೊಂಡು ಇವುಗಳನ್ನು ಪತ್ತೆ ಹಚ್ಚುವ ಪ್ಯಾಕ್ಟ್ಚೆಕ್ಕಿಂಗ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕು ಎಂದರು.ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ, ಭಾರತಕ್ಕೆ ಬಂದ ಕಂಪ್ಯೂಟರ್‌ಗೆ ಕನ್ನಡ ಭಾಷೆಯನ್ನು ಒಗ್ಗಿಸುವ ಕೆಲಸ ಸಾಕಷ್ಟು ವರ್ಷಗಳು ನಡೆದವು. ಹಾಗೇ ಎಐಗೆ ಸಹ ಕನ್ನಡವನ್ನು ಒಗ್ಗಿಸುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ಕನ್ನಡ ಭಾಷೆಯು ಉನ್ನತ ಮಟ್ಟಕ್ಕೆತಲುಪಲಿದೆ. ಎಐ ಅನ್ನು ಕಂಪ್ಯೂಟರ್‌ನಲ್ಲಿ ಅನ್ವಯಿಸಿಕೊಂಡ ಮೊದಲ ವಿಶ್ವವಿದ್ಯಾನಿಲಯ ಎಂಬ ಕೀರ್ತಿಗೆ ತುಮಕೂರು ವಿವಿ ಭಾಜನವಾಗಲಿದೆ ಎಂದು ಹೇಳಿದರು.ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ. ಗೀತಾ ವಸಂತ ಉಪಸ್ಥಿತರಿದ್ದರು.