ಜಿಲ್ಲೆಯ ಕಲಾ ರಸಿಕರ ಕಣ್ಮನ ಸೆಳೆದ ಚಿತ್ರಸಂತೆ

| Published : Mar 04 2024, 01:21 AM IST

ಸಾರಾಂಶ

ಕೊಡಗಿನ ರಾಜೇಶ್ವರಿ ಮಣ್ಣಿನ ಆಭರಣ, ಹರಿಹರದ ಅಶ್ವಥ್ ಹಳೆಯ ರದ್ದಿ ಪೇಪರ್‌ನಿಂದ ದೀಪ, ಕಮಲ, ಕಳಸ, ಪಾಟ್, ಬಾಲ್, ಕೇರಳದ ನಟ್ಟಪಟ್ಟಂ ಕಲೆ, ಅಲಂಕಾರಿಕ ವಿವಿಧ ರೀತಿ ಕಲಾಕೃತಿ, ಬೆಂಗಳೂರಿನ ಕಲಾವಿದ ಎಲ್. ರವಿ ತಂಜಾವೂರು ಪೇಂಟಿಂಗ್‌ನಲ್ಲಿ ನಂದಿ, ಗಣೇಶ, ಪಂಚಮುಖಿ ಗಣಪತಿ, ತಾಮ್ರದ ಗೊಂಬೆಗಳ ತಯಾರಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಚಿತ್ರಕಲಾ ಪರಿಷತ್‌ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 3ನೇ ವರ್ಷದ ಚಿತ್ರ ಸಂತೆಗೆ ಕಲಾ ಪೋಷಕರ ಊರಿನ ಜನತೆ ಉತ್ತಮವಾಗಿ ಸ್ಪಂದಿಸಿದರು.

ಪರಿಷತ್‌ನಿಂದ ರಾಜ್ಯ, ಪರ ರಾಜ್ಯಗಳ ಕಲಾವಿದರ ಚಿತ್ರಕಲೆ, ಕಲಾಕೃತಿಗಳ ಪ್ರದರ್ಶನದ ಜೊತೆಗೆ ಮಾರಾಟಕ್ಕೂ ಅವಕಾಶ ಮಾಡಿಕೊಟ್ಟಿದ್ದು, ಬೆಂಗಳೂರಿನ ಚಿತ್ರಸಂತೆ ಮಾದರಿಯಲ್ಲಿ ಜಿಲ್ಲಾ ಕೇಂದ್ರದ ಚಿತ್ರಸಂತೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಚಿತ್ರಸಂತೆಯಲ್ಲಿ 101 ಮಳಿಗೆ ಸ್ಥಾಪಿಸಲಾಗಿತ್ತು. ಹೊಳಲ್ಕೆರೆ ಸ್ನೇಹ ಪಬ್ಲಿಕ್ ಶಾಲೆಯ 5ರಿಂದ 8ನೇ ತರಗತಿ ವಿದ್ಯಾರ್ಥಿಗಳು ತಾವು ರಚಿಸಿದ ಕ್ಲೇ, ಪೋಸ್ಟರ್ ಕಲರ್, ಅಮೂರ್ತ ಚಿತ್ರಕಲೆ, ಪೆನ್ಸಿಲ್ ಸ್ಕೆಚ್ ಚಿತ್ರಗಳ, ಗದಗ್‌ನ ವಿಜಯ ಕಲಾ ಮಂದಿರದ ವಿದ್ಯಾರ್ಥಿಗಳು ಸಾಂಪ್ರದಾಯಿಕ ಕಲೆ, ಪೆನ್ ವರ್ಕ್, ಮಂಡಲ್ ವರ್ಕ್, ಕ್ರಿಯೇಟಿವ್ ವರ್ಕ್‌, ರಾಜಾಸ್ಥಾನದಿಂದ ಬಂದ ರಿಯಾಜ್ ಮೆಟಲ್‌ನಿಂದ ತಯಾರಿಸಿದ ಅಲಂಕಾರಿಕ ಕಲಾಕೃತಿ ಪ್ರದರ್ಶಿಸಿದರು.

ಒಡಿಶಾದ ಕಲಾವಿದ ಸನಾತನ್ ನಾಯಕ್ ಪಾಲ್ಮ್ ಟ್ರೀ ಎನ್‌ಗ್ರೇವಿಂಗ್‌ನಿಂದ ಟಾಸರ್ ಪೇಯಿಂಟ್‌ನಿಂದ ಪಟ್ಟಾ ಚಿತ್ರಗಳ ತಯಾರಿಸಿ ಅದರಲ್ಲಿ ಶ್ರೀಕೃಷ್ಣ, ದುರ್ಗಾಮಾತೆ, ಗಣೇಶ ಸೇರಿ ಅನೇಕ ದೇವರ ಚಿತ್ರ ಬಿಡಿಸಿ, ಪ್ರದರ್ಶಿಸಿದರು. ಕೊಡಗಿನ ರಾಜೇಶ್ವರಿ ಮಣ್ಣಿನ ಆಭರಣ, ಹರಿಹರದ ಅಶ್ವಥ್ ಹಳೆಯ ರದ್ದಿ ಪೇಪರ್‌ನಿಂದ ದೀಪ, ಕಮಲ, ಕಳಸ, ಪಾಟ್, ಬಾಲ್, ಕೇರಳದ ನಟ್ಟಪಟ್ಟಂ ಕಲೆ, ಅಲಂಕಾರಿಕ ವಿವಿಧ ರೀತಿ ಕಲಾಕೃತಿ, ಬೆಂಗಳೂರಿನ ಕಲಾವಿದ ಎಲ್. ರವಿ ತಂಜಾವೂರು ಪೇಂಟಿಂಗ್‌ನಲ್ಲಿ ನಂದಿ, ಗಣೇಶ, ಪಂಚಮುಖಿ ಗಣಪತಿ, ತಾಮ್ರದ ಗೊಂಬೆಗಳ ತಯಾರಿಸಿದರು.

ಬ್ಯಾಡಗಿಯ ಕಲಾವಿದ ಹರೀಶ ಮಾಳಪ್ಪ ಪೈಬರ್‌ನಿಂದ ಮಾಡಿದ ಕಲಾಕೃತಿಗಳು, ಬೆಂಗಳೂರಿನ ಮಂಜುನಾಥ ಕಲಾಲ್ ಒಡಿಶಾದಲ್ಲಿ ಬೆಳೆಯುವ ಮರದಿಂದ ವಿವಿಧ ಬಗೆಯ ಹೂವು, ಅಲಂಕಾರಿಕ ವಸ್ತುಗಳ ಪ್ರದರ್ಶಿಸಿದರು. ಬೆಂಗಳೂರಿನ ಕಲಾವಿದ ರವೀಶ್ ಒಣ ತೆಂಗಿನಕಾಯಿಯಲ್ಲಿ ಗಣೇಶ ಮೂರ್ತಿ ರಚಿಸಿದ್ದರು. ಕಾರಿಗನೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಜಿ.ಎಸ್.ಕೃಷ್ಣ ಹರಿಹರ ಅಕ್ರಾಲಿಕ್ ಪೇಂಟಿಂಗ್, ನೈಫ್ ಪೇಯಿಂಗ್‌ನಿಂದ ಕ್ಯಾನ್ವಸ್ ಮೇಲೆ ಮಹಾರಾಷ್ಟ್ರದ ಎಲೆಫೆಂಟ್ ಕೇವ್‌ನಲ್ಲಿರುವ ಶಿಲ್ಪಕಲೆ, ಬೇಲೂರು ಹಳೇ ಬೀಡು, ಸೋಮನಾಥಪುರದಲ್ಲಿರುವ ಹಳೆಯ ಕಾಲದ ದೇವಾಲಯ ಕೆತ್ತನೆ ನೈಫ್‌ಕಲೆಯಿಂದ ಚಿತ್ರಿಸಿರುವುದು. ಸಾಲುಮರದ ತಿಮ್ಮಕ್ಕನವರ ಚಿತ್ರ ರಚಿಸಿ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದೇನೆ ಎಂದು ಹೇಳಿದರು.

ಸಾಯಿ ಬ್ರೆಶ್ ಪ್ಲೇಯ ಶಿಕ್ಷಕರಾದ ರೂಪಶ್ರೀ ತಾವು ತಮ್ಮ ವಿದ್ಯಾರ್ಥಿಗಳೊಂದಿಗೆ ರಚಿಸಿದ ಟೆಕ್ಸಚರ್ ಪೇಂಟಿಂಗ್, ಗೋಂದ್ ಆರ್ಟ್, ಮಂದುಬನಿ ಪೇಯಿಂಟ್, ಕೇರಳ ಮುರಲ್ ಆರ್ಟ್‌ಗಳು ಸೇರಿ ಸಾಂಪ್ರದಾಯಿಕ ವರ್ಕ್ ಆರ್ಟ್ ಗಳ ರಚಿಸಿ ಪ್ರದರ್ಶಿಸುತ್ತಿರುವುದಾಗಿ ತಿಳಿಸಿದರು.

ಸ್ಥಳೀಯ ಕಲಾವಿದರಿಂದ ವಿವಿಧ ಚಿತ್ರಗಳ ರಚನೆ

ಬಸವಾಪಟ್ಟಣದ ಡಿ.ಕೆ.ಅಶೋಕ್ ಕಪ್ಪು ನೀಲಿ, ಕೆಂಪು ಶಾಯಿ ಬಳಸಿ ಚುಕ್ಕೆ ಚಿತ್ರಗಳನ್ನು ರಚಿಸಿದ್ದರು. ಬಸವಣ್ಣನವರ ಚಿತ್ರ ರಚಿಸಿ ಚಿತ್ರದ ಸುತ್ತಲೂ ಬಸವಣ್ಣನವರ ವಚನ ಕಾಣುವಂತೆ ಬರೆದಿದ್ದರು. ಅಪ್ಪು ಎಂಬ ಅಕ್ಷರಗಳನ್ನು ಬಳಸಿ ಪುನೀತ್ ರಾಜಕುಮಾರ್‌ರ ಚುಕ್ಕೆ ಚಿತ್ರ ರಚಿಸಿದ್ದು ವಿಶೇಷವಾಗಿತ್ತು. ಸ್ಥಳೀಯ ಕಲಾವಿದರಾದ ಗಣೇಶ ಚಿನ್ನಿಕಟ್ಟಿ, ಅಶೋಕ, ಮಂಜುನಾಥ ಶಿಲ್ಪಿ ಇವರ ಮ್ಯುರಲ್ ಆರ್ಟ್, ಫೈಬರ್‌ನಿಂದ ಬಸವಣ್ಣ, ರಾಘವೇಂದ್ರ ಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಅನೇಕ ಗಣ್ಯರ ಫೈಬರ್ ಆರ್ಟ್‌, ಚಿತ್ರಕಲಾ ಶಿಕ್ಷಕಿ ಉಮಾ ಮಹೇಶ್ವರಿ ತಂಡ ಎಲ್ಲವನ್ನೂ ಕೈಯಿಂದಲೇ ಮಾಡಿದ್ದು, ಜೊತೆಗೆ ಫೇಸ್ ಪೇಂಟಿಂಗ್, ಜ್ಯುವೆಲರಿ, ಡಾಲ್ಸ್, ಕೀ ಚೈನ್, ಅಸ್ತೆಟಿಕ್ ಮಿರರ್‌ಗಳ ಮಾರಾಟಕ್ಕೆ ಇಟ್ಟಿದ್ದರು.