ವರ್ಷ ಕಳೆದರೂ ದುರಸ್ತಿಯಾಗದ ಶುದ್ಧ ನೀರಿನ ಘಟಕಗಳು!

| Published : Mar 04 2024, 01:21 AM IST

ವರ್ಷ ಕಳೆದರೂ ದುರಸ್ತಿಯಾಗದ ಶುದ್ಧ ನೀರಿನ ಘಟಕಗಳು!
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿ ಮಾತ್ರ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳು ಮುಚ್ಚಿವೆ. ಈ ಕುರಿತು ಕ್ರಮ ಕೈಗೊಂಡು ಅದನ್ನು ತೆರೆಯಲು ಮುಂದಾಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಗರಂ ಆಗಿದ್ದಾರೆ.

ಬಿ.ಎಚ್.ಎಂ. ಅಮರನಾಥಶಾಸ್ತ್ರಿಕಂಪ್ಲಿ: ಪಟ್ಟಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡು ಹಲವು ತಿಂಗಳು ಕಳೆದರೂ ದುರಸ್ತಿಗೊಳಿಸಲು ಮುಂದಾಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ಸೂಕ್ತ ಕ್ರಮ ಜರುಗಿಸುವ ಮೂಲಕ ಘಟಕಗಳನ್ನು ಮರು ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ಬರ ತಾಂಡವವಾಡುತ್ತಿದ್ದು, ಪಟ್ಟಣದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಟ್ಟಣದ ಜನತೆಗೆ ಬೇಕಾಗುವ ಮೂಲ ಸೌಕರ್ಯಗಳಲ್ಲೊಂದಾದ ನೀರಿನ ಪೂರೈಕೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಆದರೆ ಪಟ್ಟಣದಲ್ಲಿ ಮಾತ್ರ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳು ಮುಚ್ಚಿವೆ. ಈ ಕುರಿತು ಕ್ರಮ ಕೈಗೊಂಡು ಅದನ್ನು ತೆರೆಯಲು ಮುಂದಾಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಗರಂ ಆಗಿದ್ದಾರೆ.

ಪಟ್ಟಣದ ಉದ್ಭವ ಮಹಾ ಗಣಪತಿ ದೇವಸ್ಥಾನ, ಸಂತೆ ಮಾರುಕಟ್ಟೆ, ಚಪ್ಪರದಹಳ್ಳಿ, ಕೋಟೆ, ಮಾರುತಿ ನಗರ, ಶುಗರ್ ಫ್ಯಾಕ್ಟರಿ, ಎಂಡಿ ಕ್ಯಾಂಪ್, ಕೆಇಬಿ ಬಳಿ ಸೇರಿ ಪುರಸಭೆ ವ್ಯಾಪ್ತಿಯಲ್ಲಿನ ಐದು ಸ್ಲಂ ಬೋರ್ಡ್, ಆರ್‌ಡಬ್ಲ್ಯುಎಸ್‌ಗೆ ಒಳಪಡುವ ಒಟ್ಟು 12 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಉದ್ಭವ ಮಹಾಗಣಪತಿ ದೇವಸ್ಥಾನದ ಬಳಿಯ ಶುದ್ಧ ಕುಡಿಯುವ ನೀರಿನ ಘಟಕಗಳು ಗುತ್ತಿಗೆ ಪಡೆದವರ ನಿರ್ವಹಣೆ ಇಲ್ಲದೆ ಬಳಕೆಯಲ್ಲಿಲ್ಲ. ಇನ್ನು ಎಂಡಿ ಕ್ಯಾಂಪ್ ಹಾಗೂ 23ನೇ ವಾರ್ಡ್‌ನಲ್ಲಿನ ಸೇರಿ 2 ಘಟಕಗಳು ಕೆಟ್ಟು ನಿಂತಿದ್ದು, ಈ ವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ. ಒಟ್ಟಾರೆ ಪಟ್ಟಣದಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳು ತೆರೆಯದೇ, ಇದ್ದರೂ ಇಲ್ಲದಂತಾಗಿ ಹೋಗಿವೆ.

ಖಾಸಗಿ ನೀರಿನ ಘಟಕಗಳ ಮೊರೆ: ಪಟ್ಟಣದಲ್ಲಿನ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳು ತೆರೆಯದ ಕಾರಣ ಸ್ಥಳೀಯರು ಹತ್ತಿರದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ತೆರಳಿ ಹೆಚ್ಚಿನ ಹಣ ನೀಡಿ ನೀರನ್ನು ಖರೀದಿಸುವ ಸಂದಿಗ್ಧ ಪರಿಸ್ಥಿತಿ ಉಲ್ಬಣವಾಗಿದೆ. ಇದಕ್ಕೆಲ್ಲ ಕಾರಣ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯವೇ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೆಟ್ಟು ನಿಂತ ಘಟಕಗಳನ್ನು ದುರಸ್ತಿಗೊಳಿಸಬೇಕು ಹಾಗೂ ಗುತ್ತಿಗೆ ಪಡೆದು ಮುಚ್ಚಿ ಕುಳಿತವರ ವಿರುದ್ಧ ಕ್ರಮ ಜರುಗಿಸಿ ಬೇರೆಯವರಿಗೆ ಟೆಂಡರ್ ನೀಡಿ ನೀರಿನ ಘಟಕಗಳನ್ನು ತೆರೆಯಲು ಮುಂದಾಗಬೇಕು. ಇನ್ನು ಪಟ್ಟಣದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ವಾರ್ಡ್‌ಗಳು ಹಾಗೂ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡುವ ಜತೆಗೆ ಸ್ಥಗಿತಗೊಳ್ಳದಂತೆ ಉತ್ತಮವಾಗಿ ನಿರ್ವಹಣೆ ಮಾಡಬೇಕು ಎನ್ನುವುದು ಪಟ್ಟಣದ ಜನತೆಯ ಹಕ್ಕೊತ್ತಾಯ.

ಪರಿಸ್ಥಿತಿ ಉಲ್ಬಣ: ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿರುವ ಹಿನ್ನೆಲೆ ಖಾಸಗಿ ಘಟಕಗಳಿಂದ ಹೆಚ್ಚು ಹಣ ನೀಡಿ ನೀರನ್ನು ಖರೀದಿಸುವ ಪರಿಸ್ಥಿತಿ ಉಲ್ಬಣವಾಗಿದೆ. ಅಧಿಕಾರಿಗಳು ಎಚ್ಚೆತ್ತು ದುರಸ್ತಿಗೆ ಮುಂದಾಗುವ ಮೂಲಕ ಸಾರ್ವಜನಿಕರಿಗೆ ಅನುಕೂಲತೆ ಕಲ್ಪಿಸಿಕೊಡಬೇಕು ಎಂದು ಕಂಪ್ಲಿ ನಿವಾಸಿಗಳಾದ ವೆಂಕಟೇಶ್, ನವೀನ್ ಕಟ್ಟೆ, ರಾಘವೇಂದ್ರ, ರವಿ ತಿಳಿಸಿದರು.ಸೂಕ್ತ ಕ್ರಮ: ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತಾಗಿ ಸೂಕ್ತ ಕ್ರಮ ಜರುಗಿಸಿ ಮರು ಪ್ರಾರಂಭಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಪುರಸಭೆ ಮುಖ್ಯಧಿಕಾರಿ ಕೆ. ದುರುಗಣ್ಣ ತಿಳಿಸಿದರು.