ಸಾರಾಂಶ
- ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಉದ್ಘಾಟನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಮಂಗನ ಕಾಯಿಲೆ (ಕೆಎಫ್ ಡಿ) ಬಗ್ಗೆ ಜಾಗರೂಕತೆ ಅಗತ್ಯವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ಭಾನುವಾರ ಸಾರ್ವಜನಿಕ ಆಸ್ಪತ್ರೆ, ಎಲ್ಲ ಇಲಾಖೆಗಳ ಸಹಕಾರದಿಂದ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಕೆಲವು ತಾಲೂಕಿನಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದು, ತರೀಕೆರೆ ತಾಲೂಕಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳಬೇಕೆಂದು ಆರೋಗ್ಯ ಇಲಾಖೆಗೆ ತಿಳಿಸಿದರು.ದೇಶದಲ್ಲಿ ಇಂದು ಪೋಲಿಯೋ ನಿರ್ಮೂಲನೆಯಲ್ಲಿ ಆರೋಗ್ಯ ಇಲಾಖೆ, ರೋಟರಿ ಸಂಸ್ಥೆ, ಶಿಶು ಅಭಿವೃದ್ದಿ ಇಲಾಖೆ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ, ಮಕ್ಕಳ ಭವಿಷ್ಯ ಉತ್ತಮವಾಗಬೇಕು, ಪೋಲಿಯೋ ನಿರ್ಮೂಲನೆಗೆ ಕಾರಣರಾದ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಇತರರ ಶ್ರಮ ಶ್ಲಾಘನೀಯ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿ ಪೋಲಿಯೋ ರೋಗ ಈಗಾಗಲೇ ನಮ್ಮ ದೇಶ ದಿಂದ ನಿರ್ಮೂಲನೆಯಾಗಿದ್ದು, ಕಳೆದ 13 ವರ್ಷಗಳಿಂದ ಒಂದು ಪ್ರಕರಣವೂ ವರದಿಯಾಗಿಲ್ಲ, ಪೋಲಿಯೋ ನಿರ್ಮೂಲನೆಗೆ ಜನಪ್ರತಿನಿಧಿಗಳು ರೋಟರಿ ಸಂಸ್ಥೆ, ತಾಲೂಕು ಅಡಳಿತ ಮತ್ತು ವಿವಿಧ ಇಲಾಖೆಗಳ ಸಹಕಾರದಿಂದ ಮತ್ತು ಆರೋಗ್ಯ ಇಲಾಖೆ ನಿರಂತರ ಶ್ರಮದಿಂದ ಸಾಧ್ಯವಾಗಿದೆ. ತರೀಕೆರೆ ತಾಲೂಕಿನಲ್ಲಿ 10995 ಮತ್ತು ಅಜ್ಜಂಪುರ ತಾಲೂಕಿನಲ್ಲಿ 5527 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ 77 ಸ್ಥಿರ ಬೂತ್ ಗಳು ಹಾಗೂ 3 ಮೊಬೈಲ್, 10 ಟ್ರಾನ್ಸಿಟ್ ಬೂತ್ ಗಳಲ್ಲಿ ಒಟ್ಟು 360 ಲಸಿಕೆದಾರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಅಜ್ಜಂಪುರ ತಾಲೂಕಿನಲ್ಲಿ 37 ಸ್ಥಿರ ಬೂತ್ ಗಳು ಮತ್ತು 5 ಟ್ರಾನ್ಸಿಟ್ ಬೂತ್ ಗಳಲ್ಲಿ ಒಟ್ಟು 168 ಲಸಿಕೆದಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಾ ಪೋಷಕರು ಐದು ವರ್ಷದೊಳಗಿನ ಮಕ್ಕಳಿಗೆ ಜೀವದ 2 ಪೋಲಿಯೋ ಹನಿಗಳನ್ನು ಹಾಕಿಸಿ ಪೋಲಿಯೋ ಮರುಕಳಿಸಲು ಅವಕಾಶ ಕೊಡದಂತೆ ಪೋಲಿಯೋ ಮೇಲಿನ ಗೆಲುವನ್ನು ಮುಂದುವರೆಸಬೇಕೆಂದು ಮನವಿ ಮಾಡಿದರು.ಪುರಸಭೆ ಉಪಾಧ್ಯಕ್ಷೆ ದಿವ್ಯ ರವಿ, ರೋಟರಿ ಕ್ಲಬ್ ಮಾಜಿ ಸಹಾಯಕ ಗವರ್ನರ್ ಡಾ.ಜೆ.ಸಿ.ಶರತ್, ಗೋವರ್ಧನ್, ಸದಸ್ಯರಾದ ಪ್ರವೀಣ್ ನಾಹರ್, ಪ್ರವೀಣ್ ತಂಬಿ ಜಯರಾಮ್, ವೈದ್ಯರಾದ ಡಾ.ಮೋಹನ್, ಡಾ.ಮಂಜುನಾಥ್, ಡಾ.ನಾಗರಾಜ್, ಡಾ.ರವಿಶಂಕರ್, ಡಾ.ಚನ್ನಬಸಪ್ಪ, ಡಾ.ಕಿಶೋರ್ ಬಿ.ವಿ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.3ಕೆಟಿಆರ್.ಕೆ.1ಃ
ತರೀಕೆರೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಿದರು. ಪುರಸಭೆ ಉಪಾಧ್ಯಕ್ಷೆ ದಿವ್ಯ ರವಿ, ಪುರಸಭೆ ಸದಸ್ಯ ಟಿ.ಜಿ.ಲೋಕೇಶ್, ರೋಟರಿ ಕ್ಲಬ್ ಮಾಜಿ ಸಹಾಯಕ ಗವರ್ನರ್ ಡಾ.ಜೆ.ಸಿ.ಶರತ್ ತಾ.ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮತ್ತಿತರರು ಇದ್ದರು.