ರಿಪ್ಪನ್‌ಪೇಟೆ ಗ್ರಾಪಂ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿರುವ ಲೇಔಟ್‌ಗಳು

| Published : Mar 04 2024, 01:21 AM IST / Updated: Mar 04 2024, 03:35 PM IST

ಸಾರಾಂಶ

ರಿಪ್ಪನ್‍ಪೇಟೆ ಗ್ರಾಮ ಪಂಚಾಯಿತಿ ವಸತಿ ನಿವೇಶನ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿರುವ ಕೆಲವು ಲೇಔಟ್‍ಗಳು ನಿಯಮ ಉಲ್ಲಂಘಿಸಿವೆ. ಈ ಕುರಿತು ಜಿಲ್ಲಾಧಿಕಾರಿ ಅವರು ಸಮಗ್ರ ತನಿಖೆ ನಡೆಸಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಇಲ್ಲಿನ ಗ್ರಾಮ ಪಂಚಾಯಿತಿ ವಸತಿ ನಿವೇಶನ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿರುವ ಕೆಲವು ಲೇಔಟ್‍ಗಳು ನಿಯಮ ಉಲ್ಲಂಘಿಸಿವೆ. ಈ ಕುರಿತು ಜಿಲ್ಲಾಧಿಕಾರಿ ಅವರು ಸಮಗ್ರ ತನಿಖೆ ನಡೆಸಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗವಟೂರು ಗ್ರಾಮದ ಸರ್ವೇ ನಂ. 361/2 ರಲ್ಲಿ 1.09 ಎಕರೆ ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತಿಸಲು ಅರ್ಜಿ ಸಲ್ಲಿಸಿದ್ದಾರೆ. 

ಅದರೆ ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನಿಯಾಮಾನುಸಾರ ಇಲ್ಲದೇ ಇರುವುದು ವಾಸ್ತವ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಆಧಿಕಾರಿಗಳು 30 ಅಡಿ ರಸ್ತೆ ಇರುವುದಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ್ದಾರೆ ಎಂದು ತಿಳಿಸಿದರು.

ಅರ್ಜಿದಾರರು ಭೂ ಪರಿವರ್ತನೆ ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ಪ್ರಯುಕ್ತ 2022ರ ಮಾರ್ಚ್‌ 23ರಂದು ಒಂದೇ ದಿನ ಗ್ರಾಮ ಪಂಚಾಯಿತಿ ಎರಡು ನಿರಾಕ್ಷೇಪಣಾ ಪತ್ರವನ್ನು ನೀಡಿದೆ. 

ಆದರೆ ಎರಡೂ ಪತ್ರದಲ್ಲಿಯೂ ರಸ್ತೆಯ ಬಗ್ಗೆ ಎರಡು ಆಭಿಪ್ರಾಯ ನೀಡಿದ್ದಾರೆ. ಒಂದರಲ್ಲಿ 30 ಅಡಿ ರಸ್ತೆಯಿದೆ ಎಂದು ದೃಢೀಕರಿಸಿದರೆ, ಇನ್ನೊಂದರಲ್ಲಿ ರಸ್ತೆಯ ಉಲ್ಲೇಖವೇ ಇದಿಲ್ಲ. ಇದರಿಂದ ದಲ್ಲಾಳಿಗಳು ದಾಖಲೆ ಸೃಷ್ಟಿಸುವಲ್ಲಿ ಅಸಲಿ-ನಕಲಿ ಆಟವಾಡಿದ್ದಾರೆ ಎಂಬ ಅನುಮಾನ ಮೂಡಿದೆ ಎಂದು ದೂರಿದರು.

ಮಾಹಿತಿ ಹಕ್ಕಿನಡಿ ದಾಖಲಾತಿ ಪಡೆದಾಗ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ದಾಖಲಾತಿಯಲ್ಲಿ ಮಾತ್ರ 30 ಅಡಿ ರಸ್ತೆ ಇರುವ ಗ್ರಾಮ ಪಂಚಾಯಿತಿ ದೃಢೀಕೃತ ಪತ್ರವಿದ್ದು, ಗ್ರಾಪಂ ಕಡತದಲ್ಲಿ ಈ ದಾಖಲೆಯೇ ಇಲ್ಲ. 

ಇದರ ನ್ಯೂನತೆ ಅರಿತು ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡುವಂತೆ ಅರ್ಜಿ ಸಲ್ಲಿಸಿದಾಗ, ಪಂಚಾಯಿತಿ ಅಭಿವೃದ್ಧಿ ಆಧಿಕಾರಿಗಳು ಸ್ಥಳ ಪರಿಶೀಲನೆಯಲ್ಲಿ 22 ಅಡಿ ರಸ್ತೆಯಿದೆ ಎಂದು ವರದಿ ನೀಡಿದ್ದಾರೆ. 

ಗ್ರಾಮ ಪಂಚಾಯಿತಿ ವ್ಯಾಪ್ತಿಯಾದ್ಯಂತ ಹಲವು ಲೇಔಟ್‍ಗಳಲ್ಲಿಯೂ ಇದೇ ರೀತಿಯ ನಿಮಯ ಉಲ್ಲಂಘನೆ ಆಗಿರುವುದು ಕಾಣಬಹುದು. ಈ ಎಲ್ಲ ದಾಖಲಾತಿಗಳ ಮರುಸೃಷ್ಠಿಯಲ್ಲಿ ಭೂ ಮಾಫಿಯಾ ತಂಡ ಕಾರ್ಯನಿರ್ವಹಿಸುತ್ತಿದೆ. ಜನಸಾಮಾನ್ಯರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಪಂಚಾಯಿತಿ ವ್ಯಾಪ್ತಿಯ ಎಲ್ಲ ಲೇಔಟ್‍ಗಳ ಭೂ ಪರಿವರ್ತನೆಯನ್ನು ಉನ್ನತಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಬೇಕು. ಪ್ರತಿನಿತ್ಯ ಗ್ರಾಮ ಪಂಚಾಯಿತಿಯಲ್ಲಿ ಭೂ ಮಾಫಿಯಾದವರೆ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದು, ಜನಸಾಮಾನ್ಯರನ್ನು ಕಡೆಗಣಿಸಲಾಗುತ್ತಿದೆ. 

ಸಮಗ್ರ ತನಿಖೆಯೊಂದಿಗೆ ಭೂ ಮಾಫಿಯಾದವರ ಆಟಾಟೋಪಕ್ಕೆ ಕಡಿವಾಣ ಹಾಕಿ, ನಿವೇಶನ ಖರೀದಿದಾರರಿಗೆ ನಿಯಮಾನುಸಾರ ಮೂಲಸೌಕರ್ಯ ಒದಗಿಸುವಂತಾಗಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಗಂಭೀರ ಆರೋಪದಲ್ಲಿ ಆಗ್ರಹಿಸಿದ್ದಾರೆ.