ಮೊದಲ ದಿನವೇ 96% ಮಕ್ಕಳಿಗೆ ಪೋಲಿಯೋ ಲಸಿಕೆ

| Published : Mar 04 2024, 01:21 AM IST / Updated: Mar 04 2024, 12:25 PM IST

ಸಾರಾಂಶ

ರಾಜ್ಯಾದ್ಯಂತ ಭಾನುವಾರದಿಂದ ಪಲ್ಸ್‌ ಪೋಲಿಯೋ ಅಭಿಯಾನ ಆರಂಭವಾಗಿದ್ದು, ಮೊದಲ ದಿನ ನಿರ್ದಿಷ್ಟ ಗುರಿಯ ಶೇ.96ರಷ್ಟು ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು 

ರಾಜ್ಯಾದ್ಯಂತ ಭಾನುವಾರದಿಂದ ಪಲ್ಸ್‌ ಪೋಲಿಯೋ ಅಭಿಯಾನ ಆರಂಭವಾಗಿದ್ದು, ಮೊದಲ ದಿನ ನಿರ್ದಿಷ್ಟ ಗುರಿಯ ಶೇ.96ರಷ್ಟು ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಲಸಿಕೆ ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹೊಸಪೇಟೆಯ ಕಮಲಾಪುರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಗುವಿಗೆ ಹನಿಹಾಕುವ ಮೂಲಕ ಚಾಲನೆ ನೀಡಿದರು. 

ಈ ಸಂಬಂಧ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿರುವ ಇಲಾಖೆಯ ಉಪ ನಿರ್ದೇಶಕರು(ರೋಗನಿರೋಧಕಗಳು), ರಾಜ್ಯದ ಒಟ್ಟು 32 ಜಿಲ್ಲೆಗಳಲ್ಲಿನ 5 ವರ್ಷದೊಳಗಿನ 62,85,880 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿತ್ತು. 

ಈ ಪೈಕಿ ಮೊದಲ ದಿನ ರಾಜ್ಯಾದ್ಯಂತ 33,712 ಬೂತ್‌ಗಳಲ್ಲಿ 60,41,483 ಮಕ್ಕಳಿಗೆ (ಶೇ.96) ಪೋಲಿಯೋ ಹನಿ ಹಾಕಲಾಗಿದೆ. 

ವಿಜಯನಗರ, ಮಂಡ್ಯ, ಚಿಕ್ಕಮಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪೋಲಿಯೋ ಹನಿ ಹಾಕಿಸಿಕೊಂಡ ಮಕ್ಕಳ ಸಂಖ್ಯೆ ಇಲಾಖೆಯು ಅಂದಾಜಿಸಿದ್ದ ಮಕ್ಕಳ ಸಂಖ್ಯೆಗಿಂತ ಮೀರಿದೆ ಎಂದು ತಿಳಿಸಿದ್ದಾರೆ.

ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ಶೇ.92ರಿಂದ ಗರಿಷ್ಠ ಶೇ.98ರಷ್ಟು ಗುರಿ ಸಾಧಿಸಲಾಗಿದೆ. ಬಾಕಿ ಉಳಿದಿರುವ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರದಿಂದ ಮನೆ ಮನೆಗೆ ತೆರಳಿ ಪೋಲಿಯೋ ಹನಿ ಹಾಕಲಾಗುವುದು

ರಾಜ್ಯದಲ್ಲಿ ಪೋಲಿಯೋ ಹನಿ ವಿತರಣೆಗೆ ಭಾನುವಾರ 33,712 ಬೂತ್‌ಗಳು, 963 ಸಂಚಾರಿ ತಂಡಗಳು ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ವಿತರಿಸಿವೆ. ಈ ಕಾರ್ಯಕ್ರಮದಲ್ಲಿ 11 ಲಕ್ಷ ಕಾರ್ಯಕರ್ತರು ಭಾಗಿಯಾಗಿದ್ದರು ಎಂದು ಇಲಾಖೆ ತಿಳಿಸಿದೆ.