ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದಲ್ಲಿ ಅದರಲ್ಲಿಯೂ ವಿಜಯಪುರದ ಸಾಂಸ್ಕೃತಿಕ ನಗರದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ. ಇಂದಿನ ಈ‌ ಕಾರ್ಯಕ್ರಮ ಬುಕ್ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲೆ ಆಗಲು ಯಾವುದೇ ಸಂಶಯವಿಲ್ಲ ಎಂದು ಬುಕ್ ಆಫ್‌ ರೆಕಾರ್ಡ್ಸ್ ನಿರ್ದೇಶಕಿ ಡಾ.ಸ್ವಾತಿ ಭಾರದ್ವಾಜ ಹೇಳಿದರು.

ಅಂತಾರಾಷ್ಟ್ರೀಯ ನೃತ್ಯ ದಿನದಂದು ನಟರಾಜನಿಗೆ ನೃತ್ಯಸಭಾ ಸಮರ್ಪಣೆಗಾಗಿ ನಗರದ ಅಂಬೇಡ್ಕರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಶ್ವದಾಖಲೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಏಕಕಾಲಕ್ಕೆ 300 ನುರಿತ ಭರತನಾಟ್ಯ ಕಲಾವಿದರು ಸತತ 30 ನಿಮಿಷಗಳ ಕಾಲ ನಿರಂತರ ಭರತನಾಟ್ಯ ನೃತ್ಯ ಪ್ರದರ್ಶಿಸಿರುವುದು ಹೊಸ ದಾಖಲೆಯಾಗಲಿದೆ ಎಂದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಜಗತ್ತಿನ ಇತಿಹಾಸದಲ್ಲಿ ನಾಟ್ಯಕಲೆಗೆ ಇರುವ ಬೆಲೆ ಯಾವುದೇ ನೃತ್ಯಕ್ಕೆ ಇಲ್ಲ. ಇಂದಿನ ಈ ಕಾರ್ಯಕ್ರಮದ ಆಯೋಜಕಿ ಲಕ್ಷ್ಮೀ ತೆರದಾಳಮಠ ಅವರು ಸಾಮೂಹಿಕ‌ ನೃತ್ಯ ಪ್ರದರ್ಶಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅವರ ಈ ನಾಟ್ಯಕಲಾ ಅಕಾಡೆಮಿಯೂ ಬರುವಂತಹ ದಿನಗಳಲ್ಲಿ ಇನ್ನೂ ಹೆಚ್ಚಿನ‌ ವಿದ್ಯಾರ್ಥಿಗಳನ್ನು ಒಳಗೊಂಡು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಡುವಂತಾಗಲಿ ಎಂದರು.

ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಮಾತನಾಡಿ, ಇಂದಿನ ಪೀಳಿಗೆ ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇಂತಹ ನಾಟ್ಯಕಲಾ ಅಕಾಡೆಮಿ ಪ್ರವೇಶ ಪಡೆದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ತಂದೆ ತಾಯಿಗೆ ಹಾಗೂ ಜಿಲ್ಲೆಗೆ ಹೆಸರು ತರುವಂತಾಗಬೇಕು. ಮುಂಬರುವ ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಇಂತಹ ವಿದ್ಯಾರ್ಥಿಗಳ ಭರತನಾಟ್ಯ ಕಲೆಯನ್ನು ಸಾದರಪಡಿಸಲು ಅವಕಾಶಗಳು ನೀಡಲಾಗುವುದು ಎಂದರು.


ಈ ವೇಳೆ ಜಿಲ್ಲಾ ನಾಟ್ಯಕಲಾ ಅಕಾಡೆಮಿ ಸಂಸ್ಥಾಪಕಿ ಲಕ್ಷ್ಮೀ‌ ತೆರದಾಳಮಠ, ಯುವ ಪರಿಷತ್‌ ಶರಣು ಸಬರದ, ಸುರೇಶ ಜತ್ತಿ, ರಾಜಶೇಖರ ಕುಚಬಾಳ, ಭೀಮಸಿಂಗ ಕಾಖಂಡಕಿ, ಕರುಣಾ ಬಾಂಬಿರೇ, ರಾಜ್ಯದ ವಿವಿಧೆಡೆಯಿಂದ ಹಾಗೂ ಅಂತರರಾಜ್ಯಗಳಿಂದ ಆಗಮಿಸಿದ್ದ ಕಲಾವಿದರು ಇದ್ದರು.