ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ದೌರ್ಭಾಗ್ಯ ವಿದ್ಯಾರ್ಥಿಗಳಿಗೆ ಎಂದಿಗೂ ಬರಬಾರದು. ಶಾಲಾ ಶೌಚಾಲಯಗಳ ಸ್ವಚ್ಚತೆ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.ತಾಲೂಕಿನ ಸಿಂಗನಬಿದಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಗಾರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಸಂಜೆ ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆಯ ಕೆಲಸಕ್ಕೆ ನಿಗದಿತ ಸಿಬ್ಬಂದಿ ಇಲ್ಲ. ಇದರಿಂದಾಗಿ ಈ ಸಮಸ್ಯೆ ಎದುರಾಗಿದೆ. ಸಂಬಂಧಿಸಿದ ಗ್ರಾಮ ಪಂಚಾಯಿತಿ ಹಾಗೂ ಶಾಲಾಭಿವೃದ್ಧಿ ಸಮಿತಿ ಕೂಡ ಸ್ವಚ್ಛತೆ ಸೇರಿದಂತೆ ಶಾಲೆಗಳ ಮೂಲಸೌಕರ್ಯಗಳ ಕಡೆಗೆ ಗಮನಹರಿಸಬೇಕಿದೆ. ಇದಕ್ಕೆ ಯಾರನ್ನೂ ಹೊಣೆ ಮಾಡುವುದು ಕಷ್ಟದ ಕೆಲಸ ಎಂದು ಹೇಳಿದರು.
ಯಾವುದೇ ಕೊರತೆ ಆಗಬಾರದು:ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ 1ರಿಂದ ದ್ವಿತೀಯ ಪಿಯುಸಿ ತರಗತಿವರೆಗಿನ ಮಕ್ಕಳಿಗೆ ಯಾವುದೇ ಕೊರತೆ ಆಗಕೂಡದು ಎಂಬುದು ನನ್ನ ನಿಲುವಾಗಿದೆ. ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವ ಹಾಗೂ ಈ ಹಿನ್ನೆಲೆಯಲ್ಲಿ ಒಂದು ವರ್ಷದ ಒಳಗೆ ಅಗತ್ಯವಿರುವ ಸೌಲಭ್ಯವನ್ನು ಕಲ್ಪಿಸಲು ಬದ್ಧ. ದಶಕಗಳಿಂದ ನನೆಗುದಿಗೆ ಬಿದ್ದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಮತ್ತು ಬಗರ್‌ಹುಕುಂ ಸಮಸ್ಯೆಯನ್ನು ಬಗೆಹರಿಸಲು ನಮ್ಮ ಸರ್ಕಾರ ನಿರ್ಧಾರ ಕೈಗೊಂಡಿರುವುದಾಗಿಯೂ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, 15 ವರ್ಷಗಳ ಹಿಂದೆ ನಾನೇ ಮಂಜೂರು ಮಾಡಿಸಿರುವ ಈ ಶಾಲೆ ಫಲಿತಾಂಶ ಮಾತ್ರವಲ್ಲದೇ ಕ್ರೀಡಾ ಚಟುವಟಿಕೆ ಕೂಡ ಉತ್ತಮವಾಗಿದೆ. ಈ ಸಾಧನೆಗೆ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಈ ಶಾಲೆ ಶಿಕ್ಷಕರು ಮತ್ತು ಇಲ್ಲಿನ ಕ್ರಿಯಾಶೀಲ ಶಾಲಾಭಿವೃದ್ಧಿ ಸಮಿತಿ ಕೂಡ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹತ್ತು ವರ್ಷಗಳ ಹಿಂದೆ ಈ ಕ್ಷೇತ್ರದ ಗ್ರಾಮೀಣ ಭಾಗದ ಪ್ರೌಢಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಕೋಟ್ಯಂತರ ರು. ಅನುದಾನದಲ್ಲಿ ಮಂಜೂರಾಗಿದ್ದ ಸುಮಾರು ಹತ್ತು ಪ್ರೌಢಶಾಲಾ ಕಟ್ಟಡಗಳು ಅರ್ಧಕ್ಕೆ ನಿಂತಿವೆ. ಇವುಗಳಿಗೆ ಮುಕ್ತಿಯೇ ಇಲ್ಲವೇನೋ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಗುತ್ತಿಗೆ ಹಿಡಿದಿದ್ದ ಆಂಧ್ರ ಮೂಲದ ವ್ಯಕ್ತಿ ಕಟ್ಟಡವನ್ನು ಒಳಗುತ್ತಿಗೆದಾರರಿಗೆ ಕೊಟ್ಟು ತಲೆಮರೆಸಿಕೊಂಡಿದ್ದ. ಈ ಬಗ್ಗೆ ಸುಮಾರು ಒಂದೂವರೆ ವರ್ಷ ಸತತ ಹೋರಾಟ ನಡೆಸಿ, ಈ ಕಟ್ಟಡಗಳನ್ನು ಪೂರ್ಣಗೊಳಿಸಿದ್ದೇನೆ. ಗ್ರಾಮೀಣ ಬಡ ವಿದ್ಯಾರ್ಥಿಗಳು ಸಿಗುವ ಕನಿಷ್ಠ ಸೌಲಭ್ಯವನ್ನೇ ಬಳಸಿಕೊಂಡು ಉತ್ತಮ ಸಾಧನೆ ತೋರುತ್ತಿರುವುದು ಮತ್ತು ಇಂತಹ ಶಾಲೆಗಳ ಫಲಿತಾಂಶ ಕೂಡ ಉತ್ತಮವಾಗಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಡಿ.ಆನಂದ್, ಸಿಂಗನಬಿದಿರೆ ಗ್ರಾಪಂ ಅಧ್ಯಕ್ಷ ನವೀನ್ ಆರ್.ಉಪಾಧ್ಯಕ್ಷೆ ಸುಜಾತಾ, ಸದಸ್ಯರಾದ ತಿಮ್ಮಪ್ಪ, ಸಂದೇಶ್, ಕುಸುಮಾ, ತಾಪಂ ಮಾಜಿ ಸದಸ್ಯ ಬೇಗುವಳ್ಳಿ ಕವಿರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ಇದ್ದರು.- - -
ಕೋಟ್ ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನ ಯೋಜನೆಗಳನ್ನು ಜಾರಿ ಮಾಡಿರುವುದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಅಭಿವೃದ್ಧಿ ಕುರಿತಂತೆ ಜನರು ನಮಗೆ ಹೆಚ್ಚು ಒತ್ತಡ ಹಾಕದ ಕಾರಣ ಶಾಸಕರಾದ ನಮಗೂ ಹೆಚ್ಚು ತಲೆನೋವಿಲ್ಲ - ಆರಗ ಜ್ಞಾನೇಂದ್ರ, ಶಾಸಕ, ತೀರ್ಥಹಳ್ಳಿ ಕ್ಷೇತ್ರ - - - -31ಟಿಟಿಎಚ್01: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತಿಗಾರು ಸರ್ಕಾರಿ ಪ್ರೌಢಶಾಲೆ ನೂತನ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿದರು.
- - --31ಟಿಟಿಎಚ್01:
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತಿಗಾರು ಸರ್ಕಾರಿ ಪ್ರೌಢಶಾಲೆ ನೂತನ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿದರು.