ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಹೊಲಗಳಿಗೆ ತೆರಳುವ ದಾರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲು ಕಾಳಜಿಯಿಂದ ಕೆಲಸ ಮಾಡಲಾಗುತ್ತಿದೆ. ಬಿತ್ತನೆ, ಕಟಾವು, ಬೆಳೆ ಸಾಗಾಟ ಹೀಗೆ ಯಾವುದೇ ಕೃಷಿ ಚಟುವಟಿಕೆಗಳಿಗೂ ದಾರಿ ಸಮಸ್ಯೆ ಹೇಳಿ ಅಡ್ಡಿಪಡಿಸುವಂತಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಕರೆಯಲಾಗಿದ್ದ ಹಾನಗಲ್ ಬ್ಲಾಕ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಂದಿನ ಪೀಳಿಗೆಯ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಲಗಳ ದಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈಗಾಗಲೇ ಗಟ್ಟಿ ಹೆಜ್ಜೆ ಇಡಲಾಗಿದೆ. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಲು ಈ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಸಹಕಾರ ನೀಡಬೇಕಿದೆ. ದಾರಿಗೆ ೮-೧೦ ಅಡಿ ಜಾಗ ಸರ್ಕಾರದ ಹೆಸರಿನಲ್ಲಿ ಬರೆದುಕೊಟ್ಟರೆ ಅನುಕೂಲವಾಗಲಿದೆ. ಅಲ್ಲದೇ ಭವಿಷ್ಯದಲ್ಲಿ ಇನ್ನೆಂದೂ ಸಮಸ್ಯೆ ಉದ್ಭವಿಸದು. ಈಗಾಗಲೇ ಪ್ರಾಯೋಗಿಕವಾಗಿ ಕೆಲವೆಡೆ ಈ ಕೆಲಸದಲ್ಲಿ ಯಶಸ್ಸು ಸಹ ಸಿಕ್ಕಿದೆ ಎಂದರು.
ರೈತರ ಪಹಣಿ ದೋಷ ತಿದ್ದುಪಡಿ ಪ್ರಕರಣಗಳನ್ನೆಲ್ಲ ಇತ್ಯರ್ಥ ಪಡಿಸಲಾಗುತ್ತಿದೆ. ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸೌಲಭ್ಯ, ಸಾಮರ್ಥ್ಯ ಹೆಚ್ಚಿಸಿಕೊಳ್ಳಲಾಗುತ್ತಿದೆ. ಹಾನಗಲ್ ನಗರದಲ್ಲಿ ₹೨೫ ಕೋಟಿವೆಚ್ಚದ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳುತ್ತಿವೆ. ಹಾನಗಲ್ ನಗರಕ್ಕೆ ಧರ್ಮಾ ನದಿಯಿಂದ ನೀರು ಪೂರೈಸುವ ₹೩೫ ಕೋಟಿ ವೆಚ್ಚದ ಯೋಜನೆ ಸಿದ್ಧಗೊಳ್ಳುತ್ತಿದೆ ಎಂದ ಮಾನೆ, ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತಳೆದಿದೆ. ಜವಾಬ್ದಾರಿ ಸ್ಥಾನದಲ್ಲಿದ್ದು, ದೇಶ ಮುನ್ನಡೆಸುವರು ಪ್ರತಿ ವಿಚಾರಗಳಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಪ್ರತಿ ೨ನೇ ಶನಿವಾರ ಅಕ್ಕಿಆಲೂರು ಮತ್ತು ೪ನೇ ಶನಿವಾರ ಹಾನಗಲ್ ಬ್ಲಾಕ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಶಾಸಕ ಶ್ರೀನಿವಾಸ ಮಾನೆ ನಿರಂತರ ಜನಸಂಪರ್ಕದಲ್ಲಿದ್ದು, ತಾಲೂಕಿನಲ್ಲಿ ಹಲವು ವರ್ಷಗಳಿಂದ ಹಾಗೆಯೇ ಉಳಿದಿರುವ ಸಮಸ್ಯೆಗಳ ಪರಿಹಾರಕ್ಕೆ ಶ್ರಮ ವಹಿಸಿದ್ದಾರೆ. ಮುಂಬರುವ ಜಿಪಂ, ತಾಪಂ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ಭದ್ರಾವತಿ, ಪ್ರಮುಖರಾದ ಸಿದ್ದನಗೌಡ ಪಾಟೀಲ, ಶಂಶಿಯಾ ಬಾಳೂರ, ಮಮತಾ ಆರೆಗೊಪ್ಪ, ಅಶೋಕ ಜಾಧವ್, ದುದ್ದು ಅಕ್ಕಿವಳ್ಳಿ, ಸಿಕಂದರ್ ವಾಲಿಕಾರ, ಪರಸಣ್ಣ ಸಾವಿಕೇರಿ, ಮಾಲತೇಶ ಈಳಿಗೇರ, ಎಂ.ಎ. ನೆಗಳೂರ, ರಾಜೂ ಚವ್ಹಾಣ ಪಾಲ್ಗೊಂಡಿದ್ದರು.