ಸಾರಾಂಶ
ಎಲ್ಲಿ ಎಷ್ಟು ಕೇಸ್?
ಬೆಂಗಳೂರು 20, ಮೈಸೂರು 4, ಮಂಡ್ಯ 3, ರಾಮನಗರ 1, ಬೆಂಗಳೂರು ಗ್ರಾ. 1, ಕೊಡಗು 1, ಚಾಮರಾಜನಗರ 1ನವದೆಹಲಿ: ಕರ್ನಾಟಕದ ನೆರೆಹೊರೆಯ ರಾಜ್ಯಗಳಿಗೆ ಕೋವಿಡ್ ರೂಪಾಂತರಿ ಜೆಎನ್.1 ಸೋಂಕು ಅಬ್ಬರ ಕಂಡುಬರುತ್ತಿದೆ. ಗೋವಾದಲ್ಲಿ 34, ಮಹಾರಾಷ್ಟ್ರದಲ್ಲಿ 9, ಕೇರಳದಲ್ಲಿ 6, ತಮಿಳುನಾಡಿನಲ್ಲಿ 4, ತೆಲಂಗಾಣದಲ್ಲಿ 2 ಪ್ರಕರಣ ಪತ್ತೆಯಾಗಿವೆ. ದೇಶದಲ್ಲಿ ಈವರೆಗೆ 89 ಮಂದಿಯಲ್ಲಿ ಜೆಎನ್.1 ಪತ್ತೆಯಾಗಿವೆ.ಕನ್ನಡಪ್ರಭ ವಾರ್ತೆ, ಬೆಂಗಳೂರು
ಈವರೆಗೆ ಗೋವಾ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ವರದಿಯಾಗಿದ್ದ ಕೊರೋನಾದ ಹೊಸ ಉಪತಳಿ ಜೆಎನ್.1 ಇದೇ ಮೊದಲ ಬಾರಿ ರಾಜ್ಯಕ್ಕೂ ಕಾಲಿಟ್ಟಿದೆ. ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಏರಿಕೆಯಾಗುತ್ತಿರುವ ಕೊರೋನಾ ಸೋಂಕಿನ ಅಬ್ಬರಕ್ಕೆ ಜೆಎನ್.1 ರೂಪಾಂತರಿಯೇ ಕಾರಣ ಎಂಬುದು ಸಾಬೀತಾಗಿದ್ದು, ರಾಜ್ಯದಲ್ಲಿ ಬರೋಬ್ಬರಿ 34 ಮಂದಿಗೆ ಜೆಎನ್.1 ಉಪತಳಿ ಸೋಂಕು ಮೊದಲ ಬಾರಿ ದೃಢಪಟ್ಟಿದೆ. ಜತೆಗೆ, ಕೊರೋನಾದಿಂದ ಸಾವನ್ನಪ್ಪಿದ್ದ 3 ಮಂದಿಯ ಮಾದರಿಗಳ ಪರೀಕ್ಷೆ ವೇಳೆ ಮೂರೂ ಮೃತರಲ್ಲಿ ಜೆಎನ್.1 ಉಪತಳಿಯ ಸೋಂಕು ಪತ್ತೆಯಾಗಿದೆ.ರಾಜ್ಯದಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದ 192 ಮಂದಿಯ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿತ್ತು. ಇದರಲ್ಲಿ 60 ಮಾದರಿಗಳ ಫಲಿತಾಂಶ ಬಂದಿದ್ದು, 34 ಮಂದಿಯಲ್ಲಿ ಕೊರೋನಾ ಒಮಿಕ್ರಾನ್ ತಳಿಯ ನೂತನ ಉಪತಳಿ ಎಂದು ಗುರುತಿಸಿರುವ ಜೆಎನ್.1 ಸೋಂಕು ಪತ್ತೆಯಾಗಿದೆ. ತನ್ಮೂಲಕ ಪರೀಕ್ಷೆಗೊಳಪಟ್ಟ ಮಾದರಿಯನ್ನು ಗಮನಿಸಿದಾಗ, ರಾಜ್ಯದಲ್ಲಿ ಹರಡಿರುವ ಸೋಂಕಿನಲ್ಲಿ ಶೇ.50ಕ್ಕೂ ಹೆಚ್ಚು ಪ್ರಕರಣ ನೂತನ ಉಪತಳಿಯ ಕೊಡುಗೆ ಎಂಬುದು ಸಾಬೀತಾದಂತಾಗಿದೆ.
ಬೆಂಗಳೂರಿನಲ್ಲೇ 20 ಪ್ರಕರಣ:ಬಹುತೇಕ ಜೆ.ಎನ್ 1 ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಬೆಂಗಳೂರಿನಲ್ಲಿ 20, ಮೈಸೂರು 4, ಮಂಡ್ಯ 3, ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರದಲ್ಲಿ ತಲಾ ಒಬ್ಬರಿಗೆ ಜೆಎನ್.1 ದೃಢಪಟ್ಟಿದೆ.ಇನ್ನು ಇತ್ತೀಚಿನ ದಿನಗಳಲ್ಲಿ ಈವರೆಗೆ ವರದಿಯಾಗಿರುವ ಸಾವಿನಲ್ಲಿ ಮೂರು ಮಂದಿಗೆ ಜೆಎನ್.1 ದೃಢಪಟ್ಟಿದೆ. ಬೆಂಗಳೂರು ದಕ್ಷಿಣ ವಲಯ, ಪಶ್ಚಿಮ ವಲಯ, ರಾಮನಗರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.ವೇಗವಾಗಿ ಹರಡುವ ಆತಂಕ:ಜತೆಯಲ್ಲೇ ನೂತನ ಉಪತಳಿ ವೇಗವಾಗಿ ಹರಡುವ ಲಕ್ಷಣ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣವಾಗುವ ಆತಂಕವನ್ನೂ ಸೃಷ್ಟಿಸಿದೆ.ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಡೆಸಿದ ಜಿನೋಮ್ ಸಿಕ್ವೇನ್ಸಿಂಗ್‌ನಲ್ಲಿ (ವೈರಾಣು ವಂಶವಾಹಿ ರಚನೆ ವಿಶ್ಲೇಷಣೆ) ನಿರೀಕ್ಷೆಯಂತೆ ಓಮಿಕ್ರಾನ್ ವೈರಾಣು ಉಪತಳಿ ಜೆಎನ್.1 ಪತ್ತೆಯಾಗಿದೆ. 34 ಕೋವಿಡ್ ಸೋಂಕಿತರಿಗೆ ಜೆಎನ್.1 ಪಾಸಿಟಿವ್ ಬಂದಿದೆ ಎಂದು ಮಾಹಿತಿ ಹಂಚಿಕೊಂಡರು.ಆತಂಕ ಬೇಕಾಗಿಲ್ಲ:ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ. ಜೆಎನ್.1 ಉಪತಳಿ ಅಪಾಯಕಾರಿ ಅಲ್ಲ ಎಂಬುದನ್ನು ತಜ್ಞರು ಈಗಾಗಲೇ ಹೇಳಿದ್ದಾರೆ. ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ಬಲ್ಪ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ಕೂಡ ಈಗಾಗಲೇ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ಎದುರಿಸಲು ಸನ್ನದ್ಧರಾಗುವಂತೆ ಎರಡು ಮೂರು ಬಾರಿ ಸಭೆ ನಡೆಸಿ ಆಸ್ಪತ್ರೆಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ:
ಜೆಎನ್ .1 ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ಹೊಸ ಮಾರ್ಗಸೂಚಿ ಬಂದಿಲ್ಲ. ಹೀಗಾಗಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸುವ ಯಾವುದೇ ಚಿಂತನೆಗಳಿಲ್ಲ. ಮಂಗಳವಾರ ನಡೆಯಲಿರುವ ಸಚಿವ ಸಂಪುಟ ಉಪ ಸಮಿತಿಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು.