ಸಾರಾಂಶ
ಕೂಡ್ಲಿಗಿ: ಕುಡಿಯುವ ನೀರೆಂದು ವಾಟರ್ ಬಾಟಲಿಯಲ್ಲಿದ್ದ ಆ್ಯಸಿಡ್ ಕುಡಿದು ಅಸ್ವಸ್ಥನಾಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಪಟ್ಟಣದ ಹಳೇ ಸಂತೆ ಮೈದಾನದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಕೊಟ್ಟೂರಿನ ರಂಗಸ್ವಾಮಿ (44) ಮೃತಪಟ್ಟ ದುರ್ದೈವಿ. ಈತ ಕೊಟ್ಟೂರಿನಿಂದ ಬುಲೆರೋ ಮಿನಿ ಗೂಡ್ಸ್ ವಾಹನದಲ್ಲಿ ಅಂಬೇಡ್ಕರ್ ನಗರದ ನಂದೀಶಕುಮಾರ ಜತೆ ತರಕಾರಿಯನ್ನು ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಕೂಡ್ಲಿಗಿ ಹಳೇ ಆಸ್ಪತ್ರೆ ಸಮೀಪ ಇಳಿಸಿದ್ದಾನೆ. ನಂತರ ಬಾಯಾರಿಕೆಯಾಗಿದ್ದರಿಂದ ವಾಹನದಲ್ಲಿದ್ದ ಬಾಟಲನ್ನು ತೆಗೆದುಕೊಂಡು ನೀರೆಂದು ಕುಡಿದಿದ್ದು, ಕೂಡಲೇ ವಾಂತಿ ಮಾಡಿದ್ದು, ಸ್ವಲ್ಪ ಚೇತರಿಕೆಯಾದ ನಂತರ ಬಂಡ್ರಿಗೆ ಹೋಗಿ ತರಕಾರಿ ಇಳಿಸಿದ್ದಾನೆ. ಕೆಲಹೊತ್ತಿನ ಬಳಿಕ ಆತನಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆತನನ್ನು ಬಂಡ್ರಿ ಆಸ್ಪತ್ರೆ, ನಂತರ ಸಂಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹೊಸಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ.ಕೂಡ್ಲಿಗಿ ಠಾಣಾ ಪಿಎಸ್ಐ ಧನುಂಜಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕ್ಷುಲ್ಲಕ ಕಾರಣಕ್ಕೆ ಜಗಳ: ಕೊಲೆಯಲ್ಲಿ ಅಂತ್ಯ
ಹಗರಿಬೊಮ್ಮನಹಳ್ಳಿ: ಕ್ಷುಲ್ಲಕ ಕಾರಣಕ್ಕಾಗಿ ಪಟ್ಟಣದ ಜೆಸ್ಕಾಂ ಕಚೇರಿ ಬಳಿ ಆರು ಜನರು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಶುಕ್ರವಾರ ಸಂಭವಿಸಿದೆ.ಬಂಗಾರಿ ಮಂಜುನಾಥ(೨೯) ಕೊಲೆಯಾದ ವ್ಯಕ್ತಿ. ಕೊಲೆ ಆರೋಪದ ಮೇರೆಗೆ ಉಪ್ಪಾರ ಬಸಪ್ಪ, ಹನುಮಂತರಾಯ, ಬಂಗಾರಿ ನಾಗರಾಜ, ಬಂಗಾರಿ ಯಮನೂರ್, ಬಂಗಾರಿ ಉದಯಕುಮಾರ್, ಅವಿನಾಶ ಎಂಬವರನ್ನು ನ್ಯಾಯಾಂಗ ಬಂಧನಕೊಪ್ಪಿಸಲಾಗಿದೆ.ಕೊಲೆಯಾದ ಮಂಜುನಾಥ ಅವರ ಪತ್ನಿಯನ್ನು ಉಪ್ಪಾರ ಬಸಪ್ಪ ಎಂಬಾತ ದೂರವಾಣಿಯಲ್ಲಿ ಅಶ್ಲೀಲವಾಗಿ ನಿಂದಿಸಿದ್ದೆ ಘಟನೆಗೆ ಕಾರಣವಾಗಿದೆ. ನಿಂದಿಸಿದ ವ್ಯಕ್ತಿಯನ್ನು ತನ್ನ ಗೆಳೆಯರೊಂದಿಗೆ ಅವರ ನಿವಾಸಕ್ಕೆ ತೆರಳಿ ವಿಚಾರಿಸುತ್ತಿದ್ದ ವೇಳೆ ಮಂಜುನಾಥನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.ಆಗ ಸ್ಥಳಕ್ಕೆ ಬಂದ ಪೊಲೀಸರು ಜಗಳ ಬಿಡಿಸಿದರು. ಕೂಡಲೆ ಮಂಜುನಾಥನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಸ್ಪತ್ರೆಗೆ ಬೆಳಗಿನ ಜಾವ ೨.೪೦ಕ್ಕೆ ದಾಖಲಾದ ವೇಳೆ ಮಂಜುನಾಥ ಮೃತಪಟ್ಟಿದ್ದರು. ಈ ಕುರಿತಂತೆ ಕೊಲೆಯಾದ ಮಂಜುನಾಥನ ಸಹೋದರ ಸಂದೀಪ್ ಬಂಗಾರಿ ನೀಡಿದ ದೂರನ್ನು ಆಧರಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಸಿಪಿಐ ವಿಕಾಸ್ ಲಮಾಣಿ, ಪಿಎಸ್‌ಐ ಬಸವರಾಜ ಅಡವಿಬಾವಿ ಭೇಟಿ ನೀಡಿದ್ದರು.