ಸಾರಾಂಶ
ಕನ್ನಡಪ್ರಭ ವಾರ್ತೆ ದೇವದುರ್ಗ
ಬೆಳಗಿನ ಜಾವ ವಾಯು ವಿಹಾರ ಹೋಗಿದ್ದ ಸಂದರ್ಭದಲ್ಲಿ ಅಪರಿಚಿತರ ಗುಂಪೊಂದು ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಅಪಹರಿಸಿಕೊಂಡು ಹೋಗಿ ₹12 ಲಕ್ಷ ವಸೂಲಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ದರ್ಬಾರ ಓಣಿ ಮಲ್ಲಿಕಾರ್ಜುನ ಎಂಬ ಯುವಕ ಜು.28ರಂದು ಪಟ್ಟಣದ ಶಂಭುಲಿಂಗೇಶ್ವರ ಬೆಟ್ಟದ ಮಾರ್ಗದಲ್ಲಿ ವಾಕಿಂಗ್ ಮಾಡುತ್ತಿರುವಾಗ ಈಘಟನೆ ಜರುಗಿದ್ದು, ಜನರು ಭಯಭೀತಗೊಂಡಿದ್ದಾರೆ. ಕಾರಿನಲ್ಲಿ ಎತ್ತಿಹಾಕಿಕೊಂಡು ಹೋಗಿರುವ ಅಪರಿಚಿತರು ಲಿಂಗಸಗೂರು -ಮುದಗಲ್ ಮಾರ್ಗ ಮಧ್ಯದ ಪ್ರಾರಂಭದಲ್ಲಿ ₹50ಲಕ್ಷ ಕೊಡುವಂತೆ ಹೇಳಿದ್ದಾರೆ. ಬಳಿಕ 25, 18 ಲಕ್ಷ ಕೊನೆಗೆ ₹12 ಲಕ್ಷ ನೀಡಲು ಒಪ್ಪಂದವಾಗಿದೆ.
ಅಪಹರಣಕ್ಕೆ ಒಳಗಾದ ಯುವಕ ಮಲ್ಲಿಕಾರ್ಜುನ ತನ್ನ ಮೊಬೈಲ್‌ನಲ್ಲಿ ಗೆಳೆಯರೊಂದಿಗೆ ಮಾತಾಡಿ, 12 ಲಕ್ಷ ರು. ಮನೆಯಿಂದ ತರಲು ತಿಳಿಸಿದ್ದಾನೆ. ಜನಸಂಪರ್ಕವೇ ಇಲ್ಲದ ಸ್ಥಳದಲ್ಲಿ ಠಿಕಾಣಿ ಹೂಡಿದ್ದ ಅಪಹರಣಕಾರರು, ಹಣ ತಲುಪಿದ ಬಳಿಕ ಜಾಲಿಗಿಡದ ಪೊರೆಯಲ್ಲಿ ಮಲ್ಲಿಕಾರ್ಜುನನ್ನು ಇಳಿಸಿ ಪರಾರಿಯಾಗಿದ್ದಾರೆ.ಮಲ್ಲಿಕಾರ್ಜುನ ಮೇಲೆ ಅಪಹರಣಕಾರರು ಹಲ್ಲೆ ನಡೆಸಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗಿದ್ದು, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ ನೇತೃತ್ವದ ತಂಡ ಪಟ್ಟಣದಲ್ಲಿ ಸ್ಥಳ ಪರಿಶೀಲನೆ ಮಾಡಿದರು.
ಈ ಘಟನೆಯಿಂದ ವಾಯುವಿಹಾರಕ್ಕೆ ಹೋಗುವವರು ಭಯಭೀತರಾಗಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.ಅಪಹರಣಕಾರರು ಬೆಂಗಳೂರು ಶೈಲಿಯಲ್ಲಿ ಮಾತನಾಡುತ್ತಿದ್ದು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು, ನನಗೂ ಬಾಯಿಗೆ ಬಟ್ಟೆ ಕಟ್ಟಿ ಹಲ್ಲೆ ಮಾಡಿದ್ದಾರೆ. ನಾನೂ ಯಾರಿಗೆ ಸಾಲ ಕೊಟ್ಟಿದ್ದೇನೆ ಎಂಬ ಮಾಹಿತಿ ಕೂಡ ಅಪಹರಣಕಾರರಿಗೆ ಗೊತ್ತಿದೆ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದರು.
- ಮಲ್ಲಿಕಾರ್ಜುನ (ಅಪಹರಣಕ್ಕೊಳಗಾದ ಯುವಕ)ಅಪಹರಣಕ್ಕೊಳಗಾದ ಯುವಕನ ದೂರು ಆಧರಿಸಿ ತನಿಖೆಗೆ ಲಿಂಗಸಗೂರ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ನಿಯೋಜಿಸಲಾಗಿದೆ. ಅತಿ ಶೀಘ್ರದಲ್ಲಿಯೇ ದುಷ್ಕರ್ಮಿಗಳನ್ನು ಬಂಧಿಸಲಾಗುವದು.
-ಎಂ.ಪುಟ್ಟಮಾದಯ್ಯ ಎಸ್ಪಿ ರಾಯಚೂರು.