ಮಾನವ ಮಾಧವನಾಗಲು ಅಂತರಂಗದಲ್ಲಿರುವ ಪ್ರಣವ ಶಕ್ತಿಯನ್ನು ಜ್ಯೋತಿರ್ಮಯಗೊಳಿಸಿಕೊಂಡು ಶಿವಯೋಗ ಸಾಧಿಸಿ ಶಿವಸ್ವರೂಪಿಯಾಗಬೇಕು ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಾನವ ಮಾಧವನಾಗಲು ಅಂತರಂಗದಲ್ಲಿರುವ ಪ್ರಣವ ಶಕ್ತಿಯನ್ನು ಜ್ಯೋತಿರ್ಮಯಗೊಳಿಸಿಕೊಂಡು ಶಿವಯೋಗ ಸಾಧಿಸಿ ಶಿವಸ್ವರೂಪಿಯಾಗಬೇಕು ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹೇಳಿದರು.ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠ ವಿದ್ಯಾಗಿರಿಯ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನರ ತತ್ವ ಚಿಂತನದ 187ನೆಯ ಮಾಸಿಕ ಕಾರ್ಯಕ್ರಮದಲ್ಲಿ ಮಹಾಯೋಗಿ ವೇಮನರ ಪ್ರಣವನರಿಯದನಕ ಭಕ್ತನಾಗಲಾರ ವಚನ ಕುರಿತು ಅವರು ಸದ್ಬೋಧನೆ ನೀಡಿದರು.
ಮನುಷ್ಯ ಭೌತಿಕ ದೇಹ ಬಳಸಿಕೊಳ್ಳುವುದರ ಜತೆಗೆ ಅಂತರಂಗದಲ್ಲಿರುವ ಪ್ರಣವ ಶಕ್ತಿ ತಿಳಿದುಕೊಳ್ಳಬೇಕು. ಅದಕ್ಕಾಗಿ ಮಂತ್ರ ಯೋಗ, ಲಯ ಯೋಗ, ಹಠ ಯೋಗ, ರಾಜಯೋಗ ಹಾಗೂ ಶಿವಯೋಗದ ಮೂಲಕ ತಾನೇ ಶಿವಯೋಗಿ ಆಗುವ ಸಾಧನೆ ಮಾಡಿ ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಗುರೂಜಿ ಹೇಳಿದರು.ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಡಿ.ಪಿ. ಅಮಲಝರಿ ಮಾತನಾಡಿ, ಮಹಾಯೋಗಿ ವೇಮನರ ತತ್ವ ಆದರ್ಶಗಳನ್ನು ಮನೆ ಮನಗಳಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿರುವ ಸದ್ಬೋಧನ ಪೀಠಕ್ಕೆ ರಡ್ಡಿ ಸಮಾಜ ಶಕ್ತಿಯಾಗಿ ನಿಲ್ಲಬೇಕಿದೆ ಎಂದು ಹೇಳಿದರು.
ಮುಧೋಳ ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಎಲ್. ಪಾಟೀಲ ಮಾತನಾಡಿ, ರೆಡ್ಡಿ ಸಮಾಜವನ್ನು ಧಾರ್ಮಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಸಬೇಕಿದ್ದು, ಈ ಹಿನ್ನೆಲೆಯಲ್ಲಿ ಇಡೀ ಸಮಾಜ ಒಗ್ಗೂಡಿ ಶ್ರಮಿಸಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಅಧ್ಯಕ್ಷ ಮಹೇಶ ಕಕರಡ್ಡಿ, ಸಮಾಜದ ಯುವ ಪೀಳಿಗೆ ವೇಮನರ ತತ್ವ ಚಿಂತನೆಗಳನ್ನು ಅರಿತು ಸೇವಾಭಾವನೆ, ಪರೋಪಕಾರದ ಗುಣಗಳನ್ನು ಬೆಳೆಸಿಕೊಂಡು ಸಮಾಜದ ಒಳಿತಿಗೆ ದುಡಿಯಬೇಕು ಎಂದು ಹೇಳಿದರು.
ತಮ್ಮಣ್ಣಪ್ಪ ಅರಳಿಕಟ್ಟಿ ಅತಿಥಿಯಾಗಿದ್ದರು. ಸದ್ಬೋಧನ ಪೀಠದ ನಿರ್ದೇಶಕ ಶಿವಾನಂದ ಮೆಳ್ಳಿಗೇರಿ, ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಕಾರ್ಯದರ್ಶಿ ಈಶ್ವರ ಕೋನಪ್ಪನವರ, ನಿರ್ದೇಶಕರಾದ ಎಸ್.ಎಲ್.ಮೇಟಿ, ರಾಜೇಂದ್ರ ದ್ಯಾವನ್ನವರ, ಸುಜಾತಾ ಪಾಟೀಲ ಹಾಗೂ ಸಂಗಣ್ಣ ಕೋಮಾರ ಇದ್ದರು.ಬೆನಕಟ್ಟಿಯ ಹೇಮರಡ್ಡಿ ಭಜನಾ ಮಂಡಳಿಯವರು ವೇಮನ ವಚನ ಪಠಿಸಿದರು. ಮಹೇಶ ವಾಸನದ ಸ್ವಾಗತಿಸಿದರು. ಎಚ್.ಜಿ. ಹುದ್ದಾರ ನಿರೂಪಿಸಿದರು.