ಸಾರಾಂಶ
ಕಾಟೂರ ಸೀಮೆಯ ಅರಸ ಬಸವಪ್ಪ ನಾಯಕನ ಮಗ ಕೊಮರಯ್ಯನು ಹೂವಿನಹಡಗಲಿ ಕೋಟೆ ಆಳ್ವಿಕೆ ಮಾಡುತ್ತಿದ್ದ.
ಹೂವಿನಹಡಗಲಿ: ಪಟ್ಟಣದ ಕೋಟೆ ಪ್ರದೇಶದಲ್ಲಿ ವಿಜಯನಗರ ಅರಸರ ಕಾಲಕ್ಕೆ ಸೇರಿದ್ದ ಕಂಬ ಶಿಲಾ ಶಾಸನವೊಂದು ಪತ್ತೆಯಾಗಿದೆ.
ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಆರ್.ಶೇಜೇಶ್ವರ, ಪುರಾತತ್ವ ಸಹಾಯಕ ಆರ್. ಮಂಜನಾಯ್ಕ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನ ಹಿಂಭಾಗದಲ್ಲಿ ಕ್ಷೇತ್ರ ಕಾರ್ಯ ಕೈಗೊಂಡಿದ್ದಾಗ ಈ ಶಾಸನ ಪತ್ತೆಯಾಗಿದೆ. ಕೆರೆ ಅಂಗಳದಲ್ಲಿ ಹೂತು ಹೋಗಿದ್ದ ದೇವಾಲಯ ಕಂಬದ ಶಾಸನದಲ್ಲಿ 24 ಸಾಲುಗಳಲ್ಲಿ ಕೆತ್ತನೆ ಮಾಡಲಾಗಿದೆ. ಇದು ವಿಜಯನಗರ ಅರಸ ವೀರಪ್ರತಾಪ ರಾಮಚಂದ್ರ ದೇವನ ಅಪ್ರಕಟಿತ ಶಾಸನ ಎಂದು ಗುರುತಿಸಲಾಗಿದೆ.ಶಾಸನದಲ್ಲಿ 1620ರ ಜುಲೈ 27ರಂದು ವಿಜಯನಗರ ಅರಸ ವೀರಪ್ರತಾಪ ರಾಮಚಂದ್ರದೇವ ಮಹಾರಾಯರು ಹಂಪಿಯ ವಿಜಯನಗರ ಸಾಮ್ರಾಜ್ಯ ಪ್ರಾಬಲ್ಯ ಕಳೆದುಕೊಂಡ ಬಳಿಕ ಆಂಧ್ರ ಪ್ರದೇಶದ ಪೆನ್ನುಗೊಂಡೆ ನಂತರ ಚಂದ್ರಗಿರಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ ಉಲ್ಲೇವಿದೆ.
ಕಾಟೂರ ಸೀಮೆಯ ಅರಸ ಬಸವಪ್ಪ ನಾಯಕನ ಮಗ ಕೊಮರಯ್ಯನು ಹೂವಿನಹಡಗಲಿ ಕೋಟೆ ಆಳ್ವಿಕೆ ಮಾಡುತ್ತಿದ್ದ. ಆಗ ಹೂವಿನಹಡಗಲಿಯ ಕುಲಕರಣಿ ಹರಿಯಪ್ಪರ ಮಕ್ಕಳು, ಗಿರಿಯಪ್ಪಗೌಡರ ದಾನಪ್ಪ, ಗೌಡ ಹರಿ ವಿರುಪಣ್ಣ, ನಾಡ ಕಾಳಿಗೌಡ, ತಳವಾರ ಹೂವಣ್ಣ, ಕಮ್ಮಾರ ಜಕ್ಕಣ್ಣ, ಸಿದೋಜಾ, ಬಡಗಿಯರ ಬಾಹೋಜಗಳು, 12 ಆಯಗಾರರು, ಶಾನುಭೋಗ ಮಲೆಯಪ್ಪನು ಸೇರಿ ಕೋಟೆ ಭಾಗದಲ್ಲಿ ಸಿಹಿ ನೀರುಕಟ್ಟೆ, ಬಾವಿ, ಊರ ಮುಂದಿನ ಚಾವಡಿ ಕಟ್ಟಿಸಿದ್ದಾರೆ ಎಂಬ ಉಲ್ಲೇಖ ಶಾಸನದಲ್ಲಿದೆ. ಇದನ್ನು ಯಾರಾದರೂ ಅಳಿಸಿದರೆ ಅವರ ವಂಶವು ನಾಶವಾಗುವುದು ಎಂಬ ಶಾಪಾಶಯನವನ್ನು ಶಾಸನದಲ್ಲಿ ಉಲ್ಲೇಖಿಸಿ ಎಚ್ಚರಿಸಲಾಗಿದೆ.