ಫೈಝೀ ಬಂಧಿಸಿ ಎಸ್‌ಡಿಪಿಐ ಹತ್ತಿಕ್ಕುವ ಕುತಂತ್ರ

| Published : Mar 06 2025, 12:32 AM IST

ಸಾರಾಂಶ

ದೆಹಲಿಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝೀ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಖಂಡಿಸಿ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು.

- ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ ನಡೆ ಖಂಡಿಸಿ ಪ್ರತಿಭಟನೆಯಲ್ಲಿ ಆರೋಪ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ದೆಹಲಿಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝೀ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಖಂಡಿಸಿ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು.

ನಗರದ ಅಕ್ತರ್ ರಜಾ ವೃತ್ತದಲ್ಲಿ ಎಸ್‌ಡಿಪಿಐ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕರ್ತರು, ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿ, ತಕ್ಷಣ‍ವೇ ಫೈಝೀ ಬಿಡುಗಡೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಎಸ್‌ಡಿಪಿಐ ಮುಖಂಡರು ಮಾತನಾಡಿ, ಜಾರಿ ನಿರ್ದೇಶನಾಲಯವು ಎಂ.ಕೆ.ಫೈಝೀ ಅವರನ್ನು ದೆಹಲಿಯಲ್ಲಿ ಅನ್ಯಾಯವಾಗಿ ಬಂಧಿಸಿದೆ. ಭಿನ್ನಮತ ಹತ್ತಿಕ್ಕಲು, ರಾಜಕೀಯ ವಿರೋಧಿಗಳನ್ನು ದಮನಿಸಲು ನಡೆಸುವ ಸೇಡಿನ ರಾಜಕೀಯದ ಭಾಗವಾಗಿ ಫೈಝೀ ಬಂಧನವಾಗಿದೆ. ಭಾರತೀಯ ಸಾಮಾಜಿಕ ಪ್ರಜಾಸತಾತ್ಮಕ ಪಕ್ಷವು ಈ ಬಂಧನ ಕ್ರಮವನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.

ಕೇಂದ್ರದ ಬಿಜೆಪಿ ಸರ್ಕಾರ ಭಿನ್ನಮತದ ಧ್ವನಿಯನ್ನು ಹತ್ತಿಕ್ಕಲು ಸೇಡಿನ ರಾಜಕೀಯ ಮಾಡುತ್ತಿದೆ. ಸುಳ್ಳು ಆರೋಪಗಳನ್ನು ಹೊರಿಸಿ, ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧಿಗಳನ್ನು ಬೆದರಿಸುವುದು, ದಬ್ಬಾಳಿಕೆ ಮಾಡುವುದೇ ಆಡಳಿತ ಕಾರ್ಯಸೂಚಿಯ ಭಾಗವಾಗಿ ಕೇಂದ್ರ ಭಾವಿಸಿದಂತಿದೆ. ಕರಾಳ ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ, ದೇಶಾದ್ಯಂತ ಆಂದೋಲನದ ಮುಖ್ಯವಾಹಿನಿಯಲ್ಲಿರುವ ಎಸ್‌ಡಿಪಿಐ ಬಗ್ಗೆ ಆಡಳಿತ ಯಂತ್ರವು ಅಸಹಿಷ್ಣುತೆ ಹೊಂದಿದೆ. ಸರ್ಕಾರದ ಇಂತಹ ದಬ್ಬಾಳಿಕೆ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮಗಳ ವಿರುದ್ಧ ಎಸ್‌ಡಿಪಿಐ ತನ್ನ ಸಂಪೂರ್ಣ ದೃಢತೆ ಮತ್ತು ಮನೋಭಾವದಿಂದ ಹೋರಾಡಲಿದೆ ಎಂದು ಎಚ್ಚರಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಯಾಹಿಯಾ, ಉಪಾಧ್ಯಕ್ಷರಾದ ರಜ್ವಿ, ರಿಯಾಜ್ ಅಹಮ್ಮದ್‌, ಪ್ರಧಾನ ಕಾರ್ಯದರ್ಶಿ ಎ.ಆರ್.ತಾಹೀರ್‌, ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಸೀನ್‌, ಮೊಹಮ್ಮದ್‌ ಜುನೈದ್, ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಇಸ್ಮಾಯಿತ್ ಜಬೀವುಲ್ಲಾ, ಸೈಯದ್ ಅಶ್ಫಾಕ್, ಸೈಯದ್ ರೆಹಮಾನ್‌, ಜಬೀ ಆಜಾದ್ ನಗರ, ದಾವಣಗೆರೆ, ಹರಿಹರ ಕ್ಷೇತ್ರಗಳ ಪದಾಧಿಕಾರಿಗಳು, ಬೆಂಬಲಿಗರು ಇದ್ದರು.

- - - -4ಕೆಡಿವಿಜಿ14, 15:

ದೆಹಲಿಯಲ್ಲಿ ಜಾರಿ ನಿರ್ದೇಶನಾಲಯವು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝೀ ಬಂಧಿಸಿದ್ದನ್ನು ಖಂಡಿಸಿ ದಾವಣಗೆರೆಯಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು.