ರಾಮನಗರ: ತ್ರೇತಾಯುಗದಲ್ಲಿ ಶ್ರೀರಾಮ ಪಾದಸ್ಪರ್ಶ ಮಾಡಿದ ರಾಮನಗರದಲ್ಲಿ ರಾಮೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಶಾಸಕ ಇಕ್ಬಾಲ್ ಹುಸೇನ್ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯಲು ಹೊರಟಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ರಾಮನಗರ: ತ್ರೇತಾಯುಗದಲ್ಲಿ ಶ್ರೀರಾಮ ಪಾದಸ್ಪರ್ಶ ಮಾಡಿದ ರಾಮನಗರದಲ್ಲಿ ರಾಮೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಶಾಸಕ ಇಕ್ಬಾಲ್ ಹುಸೇನ್ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯಲು ಹೊರಟಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಡಿಕೆಎಸ್ ಚಾರಿಟಬಲ್ ಇನ್ಸ್ಟಿಟ್ಯೂಟ್ ಟ್ರಸ್ಟ್ ಸಹಯೋಗದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಸ್ವಂತ ಖರ್ಚಿನಲ್ಲಿ ರಾಮೋತ್ಸವ 2025-26 ಅನ್ನು ಆಯೋಜಿಸಿದ್ದಾರೆ. ಜನವರಿ 15 ರಿಂದ 18ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ರಾಮೋತ್ಸವ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತವಾಗದೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡಲಾಗುತ್ತಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಕನಕಪುರದಲ್ಲಿ ಕನಕೋತ್ಸವ ನಡೆಸುವ ಮಾದರಿಯಲ್ಲಿಯೇ ರಾಮನಗರದಲ್ಲಿ ರಾಮೋತ್ಸವ ಆಚರಿಸಲಾಗುತ್ತಿದೆ. ರಾಮನಗರ ಕ್ಷೇತ್ರದ ಜನರಲ್ಲಿ ಪರಸ್ಪರ ಸಾಮರಸ್ಯ ಬೆಸೆಯುವುದು ಹಾಗೂ ಎಲ್ಲ ವಯೋಮಾನದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ರಾಮೋತ್ಸವದ ಮುಖ್ಯ ಉದ್ದೇಶ.

ಈ ಹಿನ್ನೆಲೆಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಇದರಲ್ಲಿ ವಿಜೇತರಾದವರಿಗೆ ಮಾತ್ರವಲ್ಲದೆ ಭಾಗಿಯಾಗುವ ಎಲ್ಲ ಮಕ್ಕಳು, ಮಹಿಳೆಯರು, ಪುರುಷರು, ವಯೋವೃದ್ಧರಿಗೂ ಉಡುಗೊರೆ ನೀಡಲಾಗುತ್ತಿದೆ. ಈ ಮೂಲಕ ಕ್ಷೇತ್ರದ ಪ್ರತಿಯೊಂದು ಮನೆಯವರು ರಾಮೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಗುರಿ ಹೊಂದಲಾಗಿದೆ.

ಶ್ರೀ ರಾಮನಿಗಿದೆ ರಾಮನಗರದ ನಂಟು:

ರಾಮನಗರದ ಶ್ರೀರಾಮಗಿರಿ ಕ್ಷೇತ್ರದಲ್ಲಿನ ಪಟ್ಟಾಭೀರಾಮನಿಗೂ ಹಾಗೂ ಅಯೋಧ್ಯೆ ರಾಮನಿಗೂ ನೇರವಾದ ಸಂಬಂಧ ಇದೆ. ರಾಮದೇವರ ಬೆಟ್ಟಕ್ಕೆ ಈ ಹೆಸರು ಬರಲು ತ್ರೇತಾಯುಗದಲ್ಲಿ ಶ್ರೀ ರಾಮದೇವರು ವನವಾಸಕಾಲದಲ್ಲಿ ಸೀತಾ , ಲಕ್ಷ್ಮಣ ಸಮೇತರಾಗಿ ಕೆಲ ಕಾಲ ಇಲ್ಲಿ ನೆಲೆಸಿದ್ದೇ ಕಾರಣ ಎಂದು ಹೇಳಲಾಗುತ್ತದೆ.

ಈ ಬೆಟ್ಟದ ಮೇಲೆ ಒಂದು ನೈಸರ್ಗಿಕ ಕೊಳವಿದೆ. ಸೀತೆಯ ಬಾಯಾರಿಕೆಯನ್ನು ತಣಿಸುವ ಸಲುವಾಗಿ ಶ್ರೀರಾಮ ಬಾಣಬಿಟ್ಟು ಗಂಗೆಯನ್ನು ಹೊರ ತಂದರು ಎಂದು ನಂಬಲಾಗಿದೆ. ಶ್ರೀರಾಮ ದೇವರ ಕೃಪೆಯಿಂದ ಇಲ್ಲಿ ಜಲ ಚಿಮ್ಮಿದ ಕಾರಣ ಇಷ್ಟು ಎತ್ತರದ ಬೆಟ್ಟದ ಮೇಲಿರುವ ಕೊಳ ಎಂದಿಗೂ ಬತ್ತಿಲ್ಲವಂತೆ. ವರ್ಷದ 365 ಕಾಲವೂ ಇಲ್ಲಿ ನೀರು ಇರುತ್ತದೆ. ಹೀಗಾಗಿ ಇದಕ್ಕೆ ರಾಮತೀರ್ಥ ಎಂದು ಕರೆಯಲಾಗುತ್ತದೆ.

ಈ ಕೊಳ ಎಷ್ಟು ಅಡಿ ಆಳವಿದೆ ಎಂಬ ಮಾಹಿತಿ ಯಾರ ಬಳಿಯೂ ಇಲ್ಲ. ಜತೆಗೆ, ಮಳೆ ಬಾರದಿದ್ದರು, ಕೊಳದ ನೀರು ಈ ತನಕ ಬತ್ತಿಲ್ಲ. ಬೆಟ್ಟದಲ್ಲಿನ ದೇವಾಲಯದ ಆವರಣದಲ್ಲಿ ಸಪ್ತ ಋಷಿಗಳು ತಪಸ್ಸು ಆಚರಿಸಿದರು ಎಂಬ ಐತಿಹ್ಯವಿದೆ. ಇದಕ್ಕೆ ಪೂರಕವಾಗಿ ಅವರ ಅಪರೂಪದ ಏಳು ಬಂಡೆಗಳು ಕಾಣಸಿಗುತ್ತವೆ.

ರಾಮನಿಂದ ರಾಕ್ಷಸ ಕಾಕಾಸುರನ ವಧೆ:

ವನವಾಸ ಮಾಡುವ ಸಮಯದಲ್ಲಿ ರಾಮನು ಕಾಕಾಸುರ ಎಂಬ ರಾಕ್ಷಸರನ್ನು ವಧೆ ಮಾಡುತ್ತಾರೆ. ಇಂದಿಗೂ ರಾಮದೇವರ ಬೆಟ್ಟದಲ್ಲಿ ಒಂದೇ ಒಂದು ಕಾಗೆ ಕಾಣ ಸಿಗುವುದಿಲ್ಲ ಎಂಬುದೇ ಮತ್ತೊಂದು ವಿಶೇಷ.

ವನವಾಸದ ಸಮಯದಲ್ಲಿ ಶ್ರೀ ರಾಮರು, ಬೆಟ್ಟದ ಮೇಲೆ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದರೆಂದು ಹೇಳಲಾಗುತ್ತದೆ. ಹಾಗಾಗಿ ಇಂದಿಗೂ ಸಹ ಅದನ್ನು ರಾಮೇಶ್ವರ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಇದಕ್ಕೆ ನಿತ್ಯಾಪೂಜೆಯೂ ಜರುಗುತ್ತಿದೆ.

ಲಂಕೆಯಲ್ಲಿ ರಾವಣ ಸಂಹಾರ ಮಾಡಿ, ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು ಅಯೋಧ್ಯೆಗೆ ಮರಳಿದ ಶ್ರೀರಾಮದೇವರಿಗೆ ಪಟ್ಟಾಭಿಷೇಕ ಆಗುತ್ತದೆ. ಆಗ ಸುಗ್ರೀವ, ಪಟ್ಟಾಭಿಷೇಕದಲ್ಲಿ ತಾನು ನೋಡಿದ ರೂಪದಲ್ಲೇ ವಿಗ್ರಹ ಮಾಡಿಸಿ ಕಿಷ್ಕಿಂಧೆಯಲ್ಲಿ ಪ್ರತಿಷ್ಠಾಪಿಸಲು ತೆಗೆದುಕೊಂಡು ಹೋಗುತ್ತಿರುತ್ತಾನೆ. ಹೀಗೆ ಆಕಾಶ ಮಾರ್ಗವಾಗಿ ಹೋಗುವಾಗ ಸುಂದರ ಪರಿಸರದಲ್ಲಿದ್ದ ಪ್ರಕೃತಿ ರಮಣೀಯ ಕೊಳವನ್ನು ನೋಡಿ ಇಳಿಯುತ್ತಾನೆ.

ಕೊಳದ ಎದುರು ಎತ್ತರ ಪ್ರದೇಶದಲ್ಲಿ ತಾನು ತಂದಿದ್ದ ಹನುಮನ್ ಸಮೇತ, ಸೀತಾ, ರಾಮ, ಲಕ್ಷ್ಮಣರ ಮೂರ್ತಿಯನ್ನಿಟ್ಟು ಕೊಳದತ್ತ ಸಾಗುತ್ತಾನೆ. ಆಗ ಈ ವನ ಪ್ರದೇಶದಲ್ಲಿದ್ದ ಸೂಕಾಸುರ ಎಂಬ ರಾಕ್ಷಸ ಸುಗ್ರೀವನ ಮೇಲೆ ದಾಳಿ ಮಾಡುತ್ತಾನೆ. ಸುಗ್ರೀವ ಸೂಕಾಸುರನೊಂದಿಗೆ ಕಾಳಗ ಮಾಡಿ, ರಾಕ್ಷಸನನ್ನು ಸಂಹಾರ ಮಾಡುತ್ತಾನೆ. ಬಳಿಕ ತಾನು ಇಟ್ಟಿದ್ದ ಮೂರ್ತಿಯನ್ನು ತೆಗೆದುಕೊಂಡು ಕಿಷ್ಕಿಂದೆಗೆ ಹೋಗಲು ನಿರ್ಧರಿಸಿ ಮೂರ್ತಿಯನ್ನು ಎತ್ತುತ್ತಾನೆ. ಆದರೆ, ಅದು ಬರುವುದಿಲ್ಲ. ಎಷ್ಟೇ ಪ್ರಯತ್ನಪಟ್ಟರು ಅದು ಅಲುಗಾಡುವುದಿಲ್ಲ. ಆಗ ಅಶರೀರವಾಣಿ ಮೊಳಗುತ್ತದೆ. ಶ್ರೀರಾಮ ದೇವರು ಇಲ್ಲಿ ಕೆಲ ಕಾಲ ನೆಲೆಸಿದ್ದರು. ಹೀಗಾಗಿ ಈ ಪವಿತ್ರ ಕ್ಷೇತ್ರ ಮಹಿಮೆಯಿಂದ ರಾಮದೇವರ ಮೂರ್ತಿಯನ್ನು ನೀನು ಇಟ್ಟ ಕೂಡಲೇ ಪ್ರತಿಷ್ಠಾಪನೆ ಆಗಿದೆ. ಹೀಗಾಗಿ ಇಲ್ಲಿಯೇ ಅದನ್ನು ಶಾಸ್ತ್ರೋಕ್ತವಾಗಿ ಪೂಜಿಸು ಎಂದು ಅಪ್ಪಣೆ ಆಗುತ್ತದೆ. ಅಂತೆಯೇ ಸುಗ್ರೀವ ರಾಮ ದೇವರನ್ನು ಇಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸಿ ತನ್ನ ರಾಜ್ಯಕ್ಕೆ ಮರಳುತ್ತಾನೆ ಎಂಬ ಐತಿಹ್ಯವಿದೆ.

ರಾಮಯಾಣದಲ್ಲಿ ಜಟಾಯು ಪಕ್ಷಿಯ ಉಲ್ಲೇಖವಿದೆ. ಅದೇ ಮಾದರಿಯಲ್ಲಿ ರಾಮದೇವರ ಬೆಟ್ಟದಲ್ಲಿ ಹೆಚ್ಚು ರಣಹದ್ದುಗಳನ್ನು ಕಾಣಬಹುದಾಗಿದೆ. ಇಷ್ಟೆಲ್ಲ ಚರಿತ್ರೆ ಹೊಂದಿರುವ ರಾಮನೂರು ಭಕ್ತಿ ಭಾವದಿಂದ ರಾಮೋತ್ಸವವನ್ನು ಸಾಕ್ಷಿಕರಿಸಲು ಸಜ್ಜುಗೊಳ್ಳುತ್ತಿದೆ.

ಬಾಕ್ಸ್ ................

ಪಟ್ಟಾಭಿರಾಮನ ವಿಗ್ರಹ 2.5 ಅಡಿ ಎತ್ತರ:

ರಾಮನಗರ ಶ್ರೀರಾಮನ ಸ್ಥಾನ. ಸಪ್ತ ಪರ್ವತ, ಸಪ್ತ ಋಷಿಗಳಿಂದ ಸಮ್ಮಿಳನವಾಗಿದೆ. ಸುಗ್ರೀವನಿಂದ ಪ್ರತಿಷ್ಠಾಪನೆ ಮಾಡಲಾಗಿರುವ ರಾಮನಗರದ ಪಟ್ಟಾಭಿರಾಮನ ವಿಗ್ರಹವೂ ಇದಕ್ಕೆ 2.5 ಅಡಿ ಎತ್ತರ ವಿದೆ. ಜತೆಗೆ, ಇಡೀ ವಿಗ್ರಹ ಏಕ ಶಿಲೆಯಾಗಿದ್ದು, ಪಟ್ಟಾಭಿಸ್ಥನಾಗಿ ಶ್ರೀರಾಮ ದೇವರು ಕುಳಿತಿರುವ ಭಂಗಿಯಲ್ಲಿದ್ದು, ಬಲ ತೊಡೆಯ ಮೇಲೆ ಸೀತಾ ಮಾತೆಯನ್ನು ಕೂರಿಸಿಕೊಂಡಿದ್ದಾರೆ. ಎಡಭಾಗದಲ್ಲಿ ವಿನೀತನಾಗಿ ಲಕ್ಷ್ಮಣ ನಿಂತಿದ್ದಾನೆ. ಶ್ರೀರಾಮ ದೇವರ ಪಾದದ ಬಳಿ ಭಕ್ತ ಆಂಜನೇಯ ಕೈಮುಗಿದು ಕುಳಿತಿರುವ ಮೂರ್ತಿ ಸುಂದರವಾಗಿದೆ.

ಬಾಕ್ಸ್ ...............

ರಾಮನಗರ ಹೆಸರು ಬಂದಿದ್ದು ಹೇಗೆ?

ಈ ಪಟ್ಟಣವನ್ನು ಟಿಪ್ಪು ಸುಲ್ತಾನ್ ಆಡಳಿತದ ಕಾಲದಲ್ಲಿ ಶಂಸೆರಾಬಾದ್ ಎಂದು ಕರೆಯಲಾಗುತ್ತಿತ್ತು. ಅನಂತರ ಸ್ವಾತಂತ್ರ್ಯ ಪೂರ್ವದಲ್ಲಿ ಸರ್ ಬ್ಯಾರಿ ಕ್ಲೋಸ್ (1756-1813) ಎಂಬುವರ ಅವಧಿಯಲ್ಲಿ ಇದನ್ನು ಕ್ಲೋಸ್ ಪೆಟ್ ಎಂದು ಕರೆಯುತ್ತಿದ್ದರು. ಸ್ವಾತ್ರಂತ್ಯದ ನಂತರ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೆಂಗಲ್ ಹನುಮಂತಯ್ಯ ರವರು ಕ್ಲೋಸ್ ಪೆಟ್ ಅನ್ನು ರಾಮನಗರ ಎಂದು ಮರು ನಾಮಕರಣ ಮಾಡಿದರು. 2007 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರಾಮನಗರ ಜಿಲ್ಲೆಯು ವಿಭಜನೆಗೊಂಡು ರಾಮನಗರವನ್ನು ಜಿಲ್ಲಾ ಕೇಂದ್ರವಾಯಿತು. 2025ರ ಮೇ 23ರಂದು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರು ನಾಮಕರಣ ಮಾಡಲಾಯಿತು.

ಕೋಟ್ ..............

ರಾಮನಗರ ಶ್ರೀರಾಮ ಪಾದ ಸ್ಪರ್ಶ ಮಾಡಿದ ಸ್ಥಳ. ಇದನ್ನು ಸಮಾಜಕ್ಕೆ ಪ್ರಚುರಪಡಿಸಬೇಕಾಗಿದೆ. ಹೀಗಾಗಿ ಶ್ರೀರಾಮನ ಹೆಸರಿನಲ್ಲಿ ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ರಾಮೋತ್ಸವ ಆಯೋಜನೆ ಮಾಡುತ್ತಿದ್ದೇವೆ. ಪೂಜೆ ಪುನಸ್ಕಾರ, ಹೋಮ ಹವನ ಮಾತ್ರವಲ್ಲದೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ರಾಮನಗರ ಕ್ಷೇತ್ರದ ಎಲ್ಲ ಜನರು ಭಾಬಹಿಸಲು ವೇದಿಯನ್ನೂ ಕಲ್ಪಿಸಿಕೊಡಲಾಗುತ್ತಿದೆ.

-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ

(ಅಷ್ಟೂ ಫೋಟೋ ಬಳಸಿ)

8ಕೆಆರ್ ಎಂಎನ್ 1,2,3,4.ಜೆಪಿಜಿ

1. ರಾಮನಗರದ ರಾಮದೇವರ ಬೆಟ್ಟದಲ್ಲಿರುವ ಪಟ್ಟಾಭಿರಾಮನ ದೇವಾಲಯ

2.ಪಟ್ಟಾಭಿರಾಮನ ವಿಗ್ರಹ

3.ರಾಮೋತ್ಸವದ ಲೋಗೋ

4.ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ